ಕಂಬಳ ವಿಚಾರದಲ್ಲಿ ಕರ್ನಾಟಕದ ಅತೀವ ಆತಂಕದ ಬಗ್ಗೆ ಪ್ರಶ್ನೆ ಮಾಡಿದ ಸುಪ್ರೀಂಕೋರ್ಟ್‌ನ ಮನವೊಲಿಕೆ ಮಾಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಇದರಲ್ಲಿ ಬಳಕೆ ಮಾಡುವ ಪ್ರಾಣಿಗಳಿಗೆ ಅನಾವಶ್ಯಕವಾಗಿ ಹಿಂಸೆ ನೀಡದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
Advertisement
ಅಲ್ಲದೆ ಕಂಬಳದಲ್ಲಿ ಬಳಕೆ ಮಾಡುವ ಪ್ರಾಣಿಗಳಿಗೆ ಹಿಂಸೆ ನೀಡದಂತೆ ನಿಯಮ ರೂಪಿಸಲು ಸುಪ್ರೀಂ ಕೋರ್ಟ್‌ಗೇ ವೇಣುಗೋಪಾಲ್ ಆಹ್ವಾನ ನೀಡಿದರು. ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ಅವರು, “ಈ ಕ್ರೀಡೆಯಲ್ಲಿನ ಹಿಂಸೆ ಹೊರತುಪಡಿಸಿ, ಕಂಬಳಕ್ಕೆ ಒಪ್ಪಿಗೆ ನೀಡಬಹುದು’ ಎಂದರು.ಇದೇ ಸಂದರ್ಭ ಕರ್ನಾಟಕ ಸರಕಾರದ ಅಧ್ಯಾದೇಶ ಮತ್ತು ಅತೀವ ಆತಂಕದ ಬಗ್ಗೆ ಪ್ರಶ್ನೆ ಮಾಡಿದ ಪೀಠಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಇದು ಕೇವಲ ಕರ್ನಾಟಕದ ಭಾವನೆ ಯಲ್ಲ, ಎಲ್ಲ ರಾಜ್ಯ ಸರಕಾರ ಗಳು ಇಂಥ ವಿಚಾರದಲ್ಲಿ ಇದೇ ರೀತಿಯ ಮನೋಭಾವ ಹೊಂದಿರುತ್ತವೆ ಎಂದರು.
Related Articles
Advertisement
ಕಂಬಳವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಪ್ರಾಣಿ ದಯಾ ಸಂಘಟನೆ ಪೆಟಾ ಪರ ವಕೀಲ ಸಿದ್ಧಾರ್ಥ ಲೂಥಾರ ಅವರು, ಕರ್ನಾಟಕ ಸರಕಾರದ ಮಸೂದೆ ಮತ್ತು ಅಧ್ಯಾದೇಶವು ಒಂದೇ ರೀತಿಯಾಗಿವೆ. ಅಲ್ಲದೆ ಎ ನಾಗರಾಜ ತೀರ್ಪಿನಲ್ಲಿ ಹೇಳಿರುವಂತೆ ಪುರಾತನ ಸಂಸ್ಕೃತಿ ಎಂದು ಪ್ರಾಣಿಗಳಿಗೆ ಹಿಂಸೆ ನೀಡಬಾರದು ಎಂದು ವಾದ ಮಂಡಿಸಿದರು.
ಜತೆಗೆ ಮತ್ತೆ ಕರ್ನಾಟಕದ ಅಧ್ಯಾದೇಶ ಬಗ್ಗೆ ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ| ಚಂದ್ರಚೂಡ್ ಅವರು, ರಾಜ್ಯ ಸರಕಾರಗಳಿಗೆ ಇಂಥ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬಿಡಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೇಣುಗೋಪಾಲ್ ಅವರು, ಮಸೂದೆಯಲ್ಲಿ ಕೆಲವೊಂದು ಅಂಶಗಳ ಬಗ್ಗೆ ರಾಷ್ಟ್ರಪತಿಗಳು ಸಂದೇಹ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದರು. ಆದರೆ ರಾಜ್ಯ ಸರಕಾರ ಈ ಅಂಶಗಳನ್ನು ಸರಿಪಡಿಸಿಯೇ ಅಧ್ಯಾದೇಶ ಹೊರಡಿಸಿತು ಎಂದು ಹೇಳಿದರು.
ಈ ವಾದ-ಪ್ರತಿವಾದ ಆಲಿಸಿದ ಅನಂತರ ಕೋರ್ಟ್ ಮುಂದಿನ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.