ಬೆಂಗಳೂರು: ಬಿಬಿಎಂಪಿಯಲ್ಲಿ ಮೂರನೇ ಅವಧಿಗೆ ಬಜೆಟ್ ಮಂಡಿಸಲು ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಫೆಬ್ರವರಿ 28ಕ್ಕೆ 2018-19ನೇ ವರ್ಷದ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ.
ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಕರಡು ಬಜೆಟ್‌ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಈಗಾಗಲೇ ಮಂಡಿಸಿದ್ದು, ಆ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದಾಗಿದೆ. 2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಈ ಬಾರಿ ಜನಪರ ಹಾಗೂ ವಾಸ್ತವಿಕ ಬಜೆಟ್ ಮಂಡನೆಗೆ ನಿರ್ಧರಿಸಿದೆ ಎನ್ನಲಾಗಿದೆ.
ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಘೋಷಣೆಯಾಗುವ ಬಹುತೇಕ ಯೋಜನೆಗಳಿಗೆ ಪಾಲಿಕೆಯ ಸಂಪನ್ಮೂಲಗಳಿಂದಲೇ ಅನುದಾನ ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಬೃಹತ್ ಯೋಜನೆ ಘೋಷಿಸದೆ ಜನಪ್ರಿಯ ಹಾಗೂ ಕಡಿಮೆ ಮೊತ್ತದ ಯೋಜನೆಗಳಿಗೆ ಆದ್ಯತೆ ನೀಡುವ ಚಿಂತನೆ ನಡೆದಿದೆ.
ನಿರೀಕ್ಷೆ: ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳ ಪರಿಚಯ, 13 ಜೈವಿಕ ಅನಿಲ ಘಟಕಗಳ ಪುನರಾರಂಭ, ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕ, ಏರ್ ಆ್ಯಂಬುಲೆನ್ಸ್ ಸೇವೆಗಾಗಿ ಹೆಲಿಪ್ಯಾಡ್ ನಿರ್ಮಾಣ, ಹಿರಿಯ ನಾಗರಿಕರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ, ಒಂಟಿ ಮನೆಗಳ ಅನುದಾನ ಹೆಚ್ಚಳ, ಮಳೆ ನೀರು ಕೊಯ್ಲು ಪದ್ಧತಿಗೆ ಆದ್ಯತೆ ಸೇರಿದಂತೆ ಹಲವಾರು ಯೋಜನೆಗಳನ್ನು ಘೋಷಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬಜೆಟ್ ಗಾತ್ರ 10 ಸಾವಿರ ಕೋಟಿ ದಾಟುವುದೆ?: ಕಳೆದ ಎರಡು ಅವಧಿಗಳಲ್ಲಿ ವಾಸ್ತವಿಕ ಬಜೆಟ್ ನೀಡಲಾಗಿದ್ದರೂ ಬಜೆಟ್ ಗಾತ್ರ 10 ಸಾವಿರ ಕೋಟಿ ಸಮೀಪಿಸಿತ್ತು. ಆದರೆ, ಈ ಬಾರಿ ನಿರೀಕ್ಷಿತ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಪಾಲಿಕೆಯ ಸ್ವಂತ ಆದಾಯ ಮೂಲಗಳ ಮೇಲೆ ಅವಲಂಬಿಸಬೇಕಾದ ಅನಿವಾರ್ಯಕತೆ ಎದುರಾಗಿದೆ. ಹಾಗಾಗಿ ಪಾಲಿಕೆಯ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಮಂಡಿಸುತ್ತಿರುವ ಮೂರನೇ ಬಜೆಟ್ ಜನಪರ ಹಾಗೂ ವಾಸ್ತವಕ್ಕೆ ಹತ್ತಿರವಾಗಿರಲಿದೆ. ಸರ್ಕಾರದಿಂದ ನೀಡಲಾಗಿರುವ ಅನುದಾನ ಹಾಗೂ ಪಾಲಿಕೆಯ ಸಂಪನ್ಮೂಲಗಳಿಗೆ ಅನುಗುಣವಾಗಿ ವಾಸ್ತವಿಕ ಬಜೆಟ್ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷ ನಾಯಕ