Advertisement
ಬುಚಾ ಎಂಬ ತಣ್ಣಗಿದ್ದ ಪಟ್ಟಣದಲ್ಲಿ…ಉಕ್ರೇನ್‌ನ ರಾಜಧಾನಿ ಕೀವ್‌ಗೆ ಅಂಟಿಕೊಂಡಂತಿರುವ ಪುಟ್ಟ ಪಟ್ಟಣ ಬುಚಾ. ಸುಮಾರು 35 ಸಾವಿರ ಜನರಿದ್ದ ತಾಣ. ಮುಗಿಲೆತ್ತರದ ಚೆಲುವಿನ ಐದು ಗೋಪುರಗಳ ದೊಡ್ಡ ಚರ್ಚು. ಅದರ ಮುಂದೆ ವಿಸ್ತಾರದ ಪ್ರಾರ್ಥನಾ ಮೈದಾನ. ಆ ಮೈದಾನದಾಚೆಗೆ ತಣ್ಣಗೆ ಹರಿವ ನದಿಯೇ ಬುಚಾ… ಅಬ್ಟಾ ಈ ಪಟ್ಟಣ ಅದೆಷ್ಟು ಚೆಂದ ಅಂತ ನೀವು ಊಹಿಸಿದರೆ ಅದು ಶುದ್ಧ ಸುಳ್ಳು. ಕಳೆದ 20 ದಿನಗಳಿಂದ ಈ ಸುಂದರ ತಾಣ, ಭೂಮಿ ಮೇಲಿನ ಅತಿ ಭೀಕರ ರಣಾಂಗಣ. ತಿಳಿಬಣ್ಣದಿಂದ ಹರಿಯುತ್ತಿದ್ದ ಬುಚಾ ನದಿಯಲ್ಲಿ ರಷ್ಯನ್ ಸೈನಿಕರು ಮುಗ್ಧ ನಾಗರಿಕರ ರಕ್ತದೋಕುಳಿ ಹರಿಸಿದ್ದಾರೆ. ಚರ್ಚಿನ ಮುಂದೆ ಪ್ರಾರ್ಥನೆಗೆ ಸೇರುತ್ತಿದ್ದ ಜನರೆಲ್ಲರೂ ಈಗ ಹತ್ಯೆಯಾಗಿ, ಅದೇ ಮೈದಾನದ ಅಡಿಯಲ್ಲಿ ಉಸಿರಿಲ್ಲದೆ ಮಲಗಿದ್ದಾರೆ! ರಷ್ಯನ್ ಸೇನೆಯನ್ನು ಹಿಮ್ಮೆಟ್ಟಿಸಿ, ಬುಚಾವನ್ನು ಮರುವಶ ಪಡೆದಿರುವ ಉಕ್ರೇನ್ ಸೇನೆಗೆ ಇಲ್ಲಿ ಕಾಣುತ್ತಿರುವುದು ಅಕ್ಷರಶಃ ಶ್ಮಶಾನ.
ರಷ್ಯನ್ ಸೈನಿಕರನ್ನು ಹಿಮ್ಮೆಟ್ಟಿಸಲು ಬುಚಾ ನಾಗರಿಕರು ತಾವೇ ಶಸ್ತ್ರಾಸ್ತ್ರ ಹಿಡಿದು, ವೀರಾವೇಶದಿಂದ ಹೋರಾಡಿದ್ದರು. ಆದರೆ ರಷ್ಯನ್ ಟ್ಯಾಂಕರ್‌ಗಳ ಅಟ್ಟಹಾಸದ ಮುಂದೆ, ಬುಚಾ ಜನರು ಮೂರೇ ದಿನದಲ್ಲಿ ಮಂಡಿಯೂರಬೇಕಾಯಿತು. ಹೀಗೆ ಸೋತ ಮುಗ್ಧರ ಜೀವಗಳನ್ನು ರಷ್ಯನ್ ಸೇನೆ ವಾರಗಟ್ಟಲೆ ನಿರ್ದಯವಾಗಿ ಚೆಂಡಾಡಲು ಶುರುಮಾಡಿತ್ತು. “ಚರ್ಚ್ ಒಳಗೆ ಹೊಕ್ಕಿಕೊಂಡರೂ, ಪವಿತ್ರ ಶಿಲುಬೆಯ ಮುಂದೆಯೇ ಅನಾಚಾರ ನಡೆಸಿತ್ತು. ಕೈಗಳನ್ನು ಕಟ್ಟಿ ಎದೆಗೆ, ಹಣೆಗೆ ಗುಂಡಿಟ್ಟರು!
“ನಮ್ಮ ಜನರನ್ನು ಸಾಮೂಹಿಕವಾಗಿ ನಿಲ್ಲಿಸಿ, ಪ್ಲಾಸ್ಟರ್‌ಗಳಿಂದ ಕೈಗಳನ್ನು ಕಟ್ಟಿ, ಎದೆಗೆ ಮತ್ತು ಹಣೆಗೆ ಗುಂಡಿಟ್ಟು ಸಾಯಿಸಲಾಗಿದೆ’ ಎಂದು ಬುಚಾದ ಉಪ ಮೇಯರ್ ಟಾರಸ್ ಶ್ಯಾಪ್ರವ್‌ಸ್ಕಿ ಗಂಭೀರವಾಗಿ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಬುಚಾದ ಕೆಲವು ಬೀದಿಗಳಲ್ಲಿ ಕೈಕಟ್ಟಿದ, ಅನಾಥ ಶವಗಳು ಪತ್ತೆಯಾಗಿದ್ದು, “ರಾಯಿಟರ್ಸ್’ ಇವನ್ನು ಸೆರೆಹಿಡಿದಿದೆ. ಅಲ್ಲದೆ, ಇಂಗ್ಲೆಂಡಿನ “ಸ್ಕೈ ನ್ಯೂಸ್’ ಕೂಡ ಇದರ ವೀಡಿಯೋಗಳನ್ನು ಪ್ರಸಾರ ಮಾಡಿದೆ. ಎಲ್ಲೆಲ್ಲಿ ರಷ್ಯಾ ನರಮೇಧ ನಡೆಸಿದೆ?
ಕೀವ್‌ನ ಕೆಲವು ಭಾಗಗಳು, ಬುಚಾ, ಇರ್ಪಿನ್ ಭಾಗ.
Advertisement
ನರಮೇಧ ಏಕೆ ಅಕ್ಷಮ್ಯ?1. ದ್ವಿತೀಯ ಮಹಾಯುದ್ಧದ ಜಿನೇವಾ ಒಪ್ಪಂದದ ಪ್ರಕಾರ, ಯಾವುದೇ ರಾಷ್ಟ್ರ ಯುದ್ಧದ ವೇಳೆ ನರಮೇಧ ಕೈಗೊಳ್ಳುವಂತಿಲ್ಲ. 2. “ನರಮೇಧ ಗಂಭೀರ ಮತ್ತು ಅಕ್ಷಮ್ಯ ಯುದ್ಧಾಪರಾಧ’ ಎಂದು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳು ಹೇಳುತ್ತವೆ. 3. ಯುದ್ಧಭೂಮಿಯಲ್ಲಿ ತನಿಖಾಧಿಕಾರಿಗಳಿಗೆ ನರಮೇಧ ಕುರಿತ ಸೂಕ್ತ ಸಾಕ್ಷ್ಯಗಳು ಸಿಕ್ಕರೆ, ಜಾಮೀನುರಹಿತ ಬಂಧನ ವಾರೆಂಟ್‌ಗೆ ಶಿಫಾರಸ್ಸು ಮಾಡಬಹುದಾಗಿದೆ. ಒಂದೇ ಬೀದಿಯಲ್ಲಿ
38 ಜನರ ಹತ್ಯೆ
ಬುಚಾದ ಒಂದೇ ಬೀದಿಯಲ್ಲಿ 38 ನಾಗರಿಕರ ಶವಗಳು ಸಾಲಾಗಿ ಬಿದ್ದಿರುವ ವೀಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಕೀವ್‌ನ ಮೇಯರ್ ವಿಟಾಲಿ ಕ್ಲಿಟ್‌ಸ್ಕೋ, “ಮುಗ್ಧ ನಾಗರಿಕರ ಮೇಲೆ ಗುಂಡು ಹಾರಿಸುವ ಮುನ್ನ ಕೈಗಳನ್ನು ಕಟ್ಟಲಾಗಿದೆ. ರಷ್ಯಾದ ನರಮೇಧ ನಡೆಸಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ದೂರಿದ್ದಾರೆ. “ನರಮೇಧಕ್ಕಾಗಿಯೇ
ದಾಳಿ ಇಟ್ಟರು’!
ಬುಚಾದ ಮತ್ತೂಂದು ರಸ್ತೆಯೊಂದರಲ್ಲಿ “ದಿ ಅಸೋಸಿಯೇಟೆಡ್ ಪ್ರಸ್’ನ ವರದಿಗಾರ ರಿಗೆ ಎದೆ ಧಸಕ್ಕೆನ್ನಿಸುವಂಥ ದೃಶ್ಯಗಳೇ ಕಣ್ಣಿಗೆ ಬಿದ್ದಿವೆ. “ರಸ್ತೆಯ ಬದಿಯಲ್ಲಿ ಮೂರು ಮಹಿಳೆಯರ ಶವಗಳು ಪತ್ತೆಯಾಗಿದ್ದು, ಅವೆಲ್ಲವೂ ಅರೆನಗ್ನಾವಸ್ಥೆಯಲ್ಲಿದ್ದವು. ಒಂದು ಶವದ ಅಂಗಾಂಗಗಳು ವಿರೂಪ ಅವಸ್ಥೆಯ ಲ್ಲಿತ್ತು’ ಎಂದು ವರದಿಗಾರರು ಹೇಳಿಕೊಂಡಿ ದ್ದಾರೆ. ಅಲ್ಲದೆ, ವಿದೇಶಾಂಗ ಸಚಿವ ಡಿಮೈಟ್ರೋ ಕುಲೇಬಾ, “ರಷ್ಯನ್ ಸೈನಿಕರು ಬುಚಾದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದಂಥ ಕೃತ್ಯಗಳನ್ನು ಎಸಗಿದ್ದಾರೆ. ನರಮೇಧ ನಡೆಸಲೆಂದೇ ಈ ಪಟ್ಟಣಕ್ಕೆ ಸೈನಿಕರು ದಾಳಿ ಇಟ್ಟಿದ್ದರು’ ಎಂದು ಆರೋಪಿಸಿದ್ದಾರೆ. ಬುಚಾದ ಬೀದಿಗಳು
ಹಾರರ್ ಕಥೆ ಹೇಳಿದವು!
ಏಪ್ರಿಲ್ 3ರಂದು ಬುಚಾದಿಂದ ರಷ್ಯನ್ ಸೇನೆಯನ್ನು ಹಿಮ್ಮೆಟ್ಟಿಸಲಾಯಿತು. ಆ ಬಳಿಕ ಬುಚಾದಲ್ಲಿ ನಡೆದ ಹತ್ಯೆ ಮುಂತಾದ ಅನಾಚಾರಗಳ ದೃಶ್ಯಗಳನ್ನು ಸೆರೆಹಿಡಿಯಲೆಂದೇ ವಿದೇಶಿ ಮಾಧ್ಯಮಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಶವಗಳ ಮುಂದೆ ನಿಂತು ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯನ್ ಸೈನಿಕರ ತಾಯಂದಿರನ್ನು ಪ್ರಶ್ನಿಸಿದ್ದಾರೆ. “ಇಡೀ ಬುಚಾದಲ್ಲಿ ಓಡಾಡಿ ಬಂದಾಗ, ಹಾರರ್ ದೃಶ್ಯಗಳೇ ಕಂಡವು. ಇಲ್ಲಿನ ಮುಗ್ಧ ನಾಗರಿಕರು, ಮಕ್ಕಳು ನಿಮಗೇನು ಅನ್ಯಾಯ ಮಾಡಿದ್ದರು? ಯಾಕೆ ನಿಮ್ಮ ಮಕ್ಕಳು ಇಲ್ಲಿಗೆ ಬಂಧು ನರಮೇಧ ನಡೆಸುತ್ತಿದ್ದಾರೆ?’ ಎಂದು ರಷ್ಯನ್ ಸೈನಿಕರ ತಾಯಂದಿರನ್ನು ಖಾರವಾಗಿ ಪ್ರಶ್ನಿಸಿದ್ದಾರೆ. ಜೋ ಬೈಡೆನ್ ಕೂಡ “ಇದು ರಷ್ಯಾ ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ನರಮೇಧ’ ಅಂತಲೇ ಆರೋಪಿಸಿದ್ದಾರೆ. ಬೆಚ್ಚಿ ಬೀಳಿಸಿದ ಉಪಗ್ರಹ ಚಿತ್ರಗಳು
ಚರ್ಚ್‌ನ ಮುಂಭಾಗದ ಪ್ರಾರ್ಥನಾ ಮೈದಾನದಲ್ಲಿ 280 ಶವಗಳನ್ನು ಹೂಳಿರುವ ಭಯಾನಕ ನೋಟಗಳು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿವೆ. ಇವುಗಳಲ್ಲಿ ಹಲವು ಶವಗಳ ಕೈಕಾಲುಗಳು, ಮಣ್ಣಿನಿಂದ ಹೊರಗೆ ಇಣುಕುತ್ತಿದ್ದು, ಚರ್ಚ್ ಆವರಣ ತುಂಬಾ ಕೊಳೆತ ವಾಸನೆ ರಾಚುತ್ತಿದೆ. ಅಲ್ಲದೆ, ಕೆಲವು ಶವಗಳ ಮೇಲೆ ಗಾಯದ ಗುರುತುಗಳು ಇರುವುದು “ರಾಯಿಟರ್ಸ್’ ಸೆರೆಹಿಡಿದ ಫೋಟೋಗಳಲ್ಲಿ ನಿಚ್ಚಳವಾಗಿದೆ. ಸಾಕ್ಷ್ಯಗಳನ್ನೆಲ್ಲ ಸಂಗ್ರಹಿಸಿದ ಉಕ್ರೇನ್ ಸೇನೆ
ಬುಚಾದಲ್ಲಿ ರಷ್ಯನ್ ಸೈನಿಕರು ನಡೆಸಿದ ದುಷ್ಕೃತ್ಯ ಗಳ ಚಿತ್ರಗಳು, ವೀಡಿಯೊ ಸಾಕ್ಷ್ಯಗಳೆಲ್ಲವನ್ನೂ ಉಕ್ರೇನ್ ಮಿಲಿಟರಿ ಸಂಗ್ರಹಿಸುವ ಕೆಲಸ ಮಾಡು ತ್ತಿದೆ. ಕೆನಡಾ ಕೂಡ ತನ್ನ ರಾಷ್ಟ್ರೀಯ ಪೊಲೀಸ್ ತಂಡದ ಅಧಿಕಾರಿಗಳನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಇಲ್ಲಿಗೆ ಕಳುಹಿಸಿಕೊಟ್ಟಿದೆ. ಇವೆಲ್ಲವನ್ನೂ ಉಕ್ರೇನ್, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ರವಾನಿಸುವ ಸಾಧ್ಯತೆ ಇದೆ.