Advertisement

ಮುರಿದು ಬಿದ್ದಿದೆ ಪಟ್ಟೆ ಗ್ರಾಮಸಹಾಯಕರ ವಸತಿಗೃಹ

10:43 PM Nov 10, 2019 | Sriram |

ಬಡಗನ್ನೂರು: ಬಡಗನ್ನೂರು ಗ್ರಾಮದ ಪಟ್ಟೆಯ ಗ್ರಾಮ ಸಹಾಯಕರ ವಸತಿಗೃಹ ಕಟ್ಟಡವು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮುರಿದು ಬಿದ್ದು ಭಾಗಶಃ ನಾಶವಾದರೂ ಕಂದಾಯ ಇಲಾಖೆ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.

Advertisement

ಮಂಡಲ ಪಂಚಾಯತ್‌ ವ್ಯವಸ್ಥೆಗೂ ಮೊದಲು ಗ್ರಾಮದ ಜನರ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ಬಗೆಹರಿಸಲು ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಸಕಾಲದಲ್ಲಿ ಸಮಸ್ಯೆಗೆ ನೆರವು ಹಾಗೂ ಸರಕಾರದ ಸೌಲಭ್ಯಗಳು ಶೀಘ್ರವಾಗಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಗ್ರಾಮ ಸಹಾಯಕರ ಕಚೇರಿ ಪಕ್ಕದಲ್ಲಿ ಸರಕಾರಿ ವಸತಿ ಸೌಕರ್ಯ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಮಾಡಲಾಗಿತ್ತು. ದುರದೃಷ್ಟವೆಂದರೆ ಆನಂತರದ ಅವಧಿಯಲ್ಲಿ ಇದುವರೆಗೆ ಅಲ್ಲಿ ಯಾರೂ ವಾಸ್ತವ್ಯ ಮಾಡಲೇ ಇಲ್ಲ.

ಹಸ್ತಾಂತರ ಮಾಡಿಲ್ಲ
ಸುಮಾರು 75 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ವಸತಿಗೃಹದಲ್ಲಿ ಯಾರೂ ವಾಸ್ತವ್ಯವಿಲ್ಲದ ಕಾರಣ ನಿರ್ವಹಣೆಯಾಗದೆ ಮಾಡು ಮುರಿದು ಬಿದ್ದು ಹೆಂಚುಗಳು ಸಂಪೂರ್ಣ ಒಡೆದು ಹೋಗಿವೆ. ಕಂದಾಯ ಇಲಾಖೆಯಲ್ಲಿ ದುರಸ್ತಿಗೆ ಹಣ ಇಲ್ಲ. ಪ್ರಕೃತಿ ವಿಕೋಪದಡಿ ಸರಕಾರಕ್ಕೆ ಬರೆಯಲಾಗಿದ್ದರೂ ಇಲಾಖೆ ಮೌನವಾಗಿಯೇ ಇದೆ. ಗ್ರಾಮ ಸಹಾಯಕರ ವಸತಿಗೃಹ ಕಟ್ಟಡ ಕಂದಾಯ ಇಲಾಖೆಯಡಿಯಲ್ಲಿದೆ. ಗ್ರಾಮ ಪಂಚಾಯತ್‌ಗೆ ಇದು ಹಸ್ತಾಂತರವಾಗದ ಕಾರಣ ದುರಸ್ತಿಗೆ ಅನುದಾನ ನೀಡಲು ಅವಕಾಶ ಇಲ್ಲ.

ಆರೋಗ್ಯ ಉಪ ಕೇಂದ್ರಕ್ಕೆ ಸೂಕ್ತ
ಬಡಗನ್ನೂರು ಗ್ರಾಮದ ಪಟ್ಟೆ ಈ ಭಾಗದಲ್ಲಿ ಆರೋಗ್ಯ ಉಪ ಕೇಂದ್ರ ತೆರೆಯುವಂತೆ ಸಾರ್ವಜನಿಕರು ಗ್ರಾಮ‌ ಸಭೆಯಲ್ಲಿ ಬೇಡಿಕೆ ನೀಡಿದ್ದು, ಕಟ್ಟಡದ ಆವಶ್ಯಕತೆ ಇದೆ. ಪಟ್ಟೆ ಈ ಪ್ರದೇಶದಲ್ಲಿ ಅರೋಗ್ಯ ಉಪ ಕೇಂದ್ರ ತೆರೆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗಲಿದೆ. ಪಟ್ಟೆ ಪರಿಸರದಲ್ಲಿ ಬೇರೆ ಸೂಕ್ತ ಜಾಗ ಇಲ್ಲದ ಕಾರಣ ಕಂದಾಯ ಇಲಾಖೆ ಕಟ್ಟಡವನ್ನು ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಿದರೆ ಮುಂದೆ ಅದನ್ನು ದುರಸ್ತಿ ಮಾಡಬಹುದು ಅಥವಾ ಕೆಡವಿ ಅದೇ ಜಾಗದಲ್ಲಿ ಅರೋಗ್ಯ ಉಪ ಕೇಂದ್ರ ತೆರೆಯಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಆರೋಗ್ಯ ಉಪಕೇಂದ್ರ ಹಾಗೂ ಗ್ರಂಥಾಲಯದ ಬಗ್ಗೆ ಸಾರ್ವಜನಿಕ ಬೇಡಿಕೆ ಇದ್ದು ಕಟ್ಟಡದ ಆವಶ್ಯಕತೆ ಇದೆ.

ಹಸ್ತಾಂತರವಾದರೆ ಬಳಕೆ
ಪಟ್ಟೆ ಗ್ರಾಮ ಸಹಾಯಕರ ವಸತಿಗೃಹ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಈ ಸಲದ ಪ್ರಕೃತಿ ವಿಕೋಪದಲ್ಲಿ ಕಟ್ಟಡದ ಛಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಕಂದಾಯ ಇಲಾಖೆ ಕಟ್ಟಡವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿದ್ದಲ್ಲಿ ಅದನ್ನು ದುರಸ್ತಿ ಅಥವಾ ನೆಲಸಮಗೊಳಿಸಿ ಆ ಸ್ಥಳದಲ್ಲಿ ಆರೋಗ್ಯ ಉಪಕೇಂದ್ರ ಹಾಗೂ ಗ್ರಂಥಾಲಯ ತೆರೆಯಲು ಸಾಧ್ಯವಿದೆ. ಈ ಬಗ್ಗೆ ಇಲಾಖೆಗೆ ಬರೆದುಕೊಳ್ಳಲಾಗುವುದು.
– ವಸೀಮ ಗಂಧದ, ಗ್ರಾ.ಪಂ. ಪಿಡಿಒ

Advertisement

ದುರಸ್ತಿಗೆ ಅವಕಾಶ
ಪಟ್ಟೆ ಗ್ರಾಮ ಸಹಾಯಕರ ವಸತಿಗೃಹ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ಗಮನಿಸಿ ಅದನ್ನು ದುರಸ್ತಿಗೊಳಿಸಿ ವಸತಿಗೃಹವಾಗಿಯೇ ಕಾಪಾಡಬೇಕು. ಪ್ರಕೃತಿ ವಿಕೋಪದಡಿ ದುರಸ್ತಿಗೆ ಅವಕಾಶ ಇದೆ. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವುದು ಉತ್ತಮ.
– ವೈ. ಕೃಷ್ಣ ನಾಯ್ಕ, ಪಟ್ಟೆ ಗ್ರಾಮಸ್ಥ

-ದಿನೇಶ್‌ ಪೆರಾಲು

Advertisement

Udayavani is now on Telegram. Click here to join our channel and stay updated with the latest news.

Next