ಹೊಳೆಆಲೂರ: ಪ್ರಸ್ತುತ ದಿನಗಳಲ್ಲಿ ಗುರಿ-ಸಾಧನೆಗೆ ವಿಫುಲ ಅವಕಾಶಗಳಿದ್ದರೂ ಯುವಜನತೆ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುತ್ತಿಲ್ಲ ಎಂದು ಡಾ| ಪ್ರಕಾಶ ಜಂಬಲದಿನ್ನಿ ಹೇಳಿದರು.
ಸ್ಥಳೀಯ ಯಚ್ಚರೇಶ್ವರ ವಿದ್ಯಾ ಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆಯ ವತಿಯಿಂದ ಶುಕ್ರವಾರ ನಡೆದ ಯುವ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ಸುಂದರ ಆಗಬೇಕಾದರೆ ಜೀವನದಲ್ಲಿ ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸ್ಪಷ್ಟವಾದ ಗುರಿ, ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು. ಕೇವಲ ಅಂಕ ಗಳಿಸಿದರೆ ಸಾಲದು, ಸಮಾಜಮುಖೀ ಧೋರಣೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹೊಳೆಆಲೂರ ವೈದ್ಯರ ಸಂಘದ ಅಧ್ಯಕ್ಷ ಡಾ| ಎಸ್.ಬಿ.ಹಿರೇಗೌಡ್ರ ಮಾತನಾಡಿ, ಸಕಲ ಐಶ್ವರ್ಯಗಳಿಗಿಂತ ಆರೋಗ್ಯ ಸಂಪತ್ತು ಸರ್ವ ಶ್ರೇಷ್ಠ. ಯುವ ಜನಾಂಗ ಆಧುನಿಕತೆಯ ಹೆಸರಿನಲ್ಲಿ ಗುಟಕಾ, ಮದ್ಯಪಾನ, ಸಿಗರೇಟ್ಸೇವನೆಯಂತಹ ದುಷ್ಟಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಪಟೇಲ್, ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಪತ್ತಾರ, ಪ್ರಾಚಾರ್ಯ ಪಿ.ಆರ್. ವಾಗ್ಮೋಡೆ. ಎಸ್.ಜಿ. ಸಾಸ್ವಿಹಾಳ, ಮಹೇಶ ಘಾಳಿ, ಮಂಜುಳಾ ರೊಟ್ಟಿಗವಾಡ, ಬಿ.ಎಫ್. ಬಾಲನಗೌಡ್ರ, ಎಸ್.ಕೆ. ಆಡಿನ, ಎಸ್.ಎನ್.ಎಲಿಗಾರ ಇದ್ದರು.