ಕುಷ್ಟಗಿ: ಪಟ್ಟಣದ ಹೊರವಲಯದ 66.70 ಕೋಟಿ ರೂ. ವೆಚ್ಚದ 1.75 ಕಿ.ಮೀ ಉದ್ದದ ಸುವರ್ಣ ಚತುಷ್ಪಥ ಹೆದ್ದಾರಿ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ನವೆಂಬರ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಲೋಕಾರ್ಪಣೆಗೊಳಿಸುವ ಉದ್ದೇಶವಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿದರು.
ಇಲ್ಲಿನ ಮೇಲ್ಸೇತುವೆಯ ಅಂತಿಮ ಹಂತದ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 1ರಂದು ಚಳಗೇರಿಯ ಲಿಂಗೈಕ್ಯ ಶ್ರೀ ವಿರುಪಾಕ್ಷಲಿಂಗ ಸ್ವಾಮೀಜಿ ಶಿಲಾ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎನ್ನುವುದು ಮಾಹಿತಿ ಇದೆ. ಇನ್ನೂ ಅಧಿಕೃತವಾಗಿಲ್ಲ. ಸಿಎಂ ಅವರು, ಚಳಗೇರಾ ಗ್ರಾಮಕ್ಕೆ ಆಗಮಿಸುವುದಾದರೆ, ಇಲ್ಲಿನ ಮೇಲ್ಸೇತುವೆಗೂ ಅದೇ ದಿನ ಲೋಕಾರ್ಪಣೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರ ಕನಸು ನನಾಸಾಗುತ್ತಿದ್ದು, ಅಂದಿನ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಈ ಮೇಲ್ಸೇತುವೆ ಮಂಜೂರಾತಿ ನೀಡಿದ್ದರು. ಈ ಕಾಮಗಾರಿ ಪೂರ್ಣಗೊಳ್ಳಲು 2 ವರ್ಷ ತೆಗೆದುಕೊಂಡಿರುವುದಕ್ಕೆ ವಿಷಾಧವಿದೆ. ಸದ್ಯ ಮೇಲ್ಸೇತುವೆ ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಶೇ.80ರಷ್ಟು ಕಾಮಗಾರಿ ಮುಗಿದಿದೆ. ಇನ್ನುಳಿದ ತಡೆಗಲ್ಲು, ಬ್ಯಟೋಮಿನ್ ಡಾಂಬರೀಕರಣ ಕೆಲಸದ ಜೊತೆಗೆ 300 ಮೀಟರ್ ಡಾಂಬರೀಕರಣ ಕೆಲಸ ಬಾಕಿ ಇದೆ. ಅಂದುಕೊಂಡಂತೆ ಆದರೆ ಅಕ್ಟೋಬರ್ ಕೊನೆಯ ವಾರ ಇಲ್ಲವೇ ನವೆಂಬರ ತಿಂಗಳ ಮೊದಲ ವಾರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಈ ಮೇಲ್ಸೇತುವೆಯಿಂದ ಸುಗಮ ಸಂಚಾರ, ಅಪಘಾತ ತಡೆ ಹಾಗೂ ವಾಹನಗಳ ಇಂಧನ, ಸಮಯದ ಉಳಿತಾಯವಾಗಲಿದೆ. ಆರಂಭದಲ್ಲಿ 40 ಕೋಟಿ ರೂ.ಗೆ ಮಂಜೂರಾಗಿದ್ದ ಮೇಲ್ಸೇತುವೆಯನ್ನು ಅತ್ಯಾಧುನಿಕವಾಗಿ ನಿರ್ಮಿಸುವ ಉದ್ದೇಶದ ಹಿನ್ನೆಲೆಯಲ್ಲಿ ಎರಡೆರಡು ಬಾರಿ ಮೇಲ್ಸೇತುವೆ ವಿನ್ಯಾಸ ಬದಲಾಗಿದ್ದರಿಂದ ಅಂತಿಮವಾಗಿ 66.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ದೊರೆಯಿತು ಎಂದು ವಿವರಿಸಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಪುರಸಭೆ ಸದಸ್ಯ ಜಿ.ಕೆ. ಹಿರೇಮಠ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಧರ ಕವಲಿ, ವಿಜಯಕುಮಾರ ಹಿರೇಮಠ, ಚಂದ್ರಕಾಂತ ವಡಿಗೇರಿ, ಓಎಸ್ ಇ ಯೋಜನಾ ವ್ಯವಸ್ಥಾಪಕ ರಾಮಪ್ಪ ಕುಬಕಡ್ಡಿ, ಎಂಜಿನೀಯರ್ ಬಸವರಾಜ್, ವೀರನಾಯ್ಡು, ರವಿ ಬಿರಾದಾರ, ಪರಮೇಶ ಶಿರಟ್ಟಿ ಮತ್ತೀತರಿದ್ದರು.