Advertisement
ಅರಂತೋಡು – ಪಿಂಡಿಮನೆ – ಮಿತ್ತಡ್ಕ ರಸ್ತೆಯ ಅರಮನೆಗಾಯ (ಆಡು ಮಾತಿನಲ್ಲಿ ಅರಮನೆಗಯ) ಬಳಿ ಬಲಾ°ಡ್ ಹೊಳೆಗೆ ಸೇತುವೆ ಇಲ್ಲದೆ 100ಕ್ಕೂ ಹೆಚ್ಚು ಕುಟುಂಬಗಳು 6 ಕಿ. ಮೀ. ದೂರದ ರಸ್ತೆ ಸನಿಹದಲ್ಲಿದ್ದರೂ ಮಳೆಗಾಲದಲ್ಲಿ 15 ಕಿ.ಮೀ. ಸುತ್ತಾಡಿ ಮನೆ, ಪೇಟೆ ಸೇರುತ್ತಿದ್ದಾರೆ.
ಈ ತೂಗು ಸೇತುವೆ ನಿರ್ಮಾಣಗೊಂಡು 20 ವರ್ಷಗಳು ಕಳೆದಿವೆ. ಅರಂತೋಡು ಗ್ರಾ.ಪಂ. ವತಿಯಿಂದ ಅಡಿಕೆ ಮರ ಹಾಸಿದ, ಕಬ್ಬಿಣದ ರಾಡ್ ಅಳವಡಿಸಿ ಹೊಳೆ ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೇಸಗೆಯಲ್ಲಿ ಹೊಳೆಯೇ ರಸ್ತೆಯಾದರೆ, ಮಳೆಗಾಲದಲ್ಲಿ ತೂಗು ಸೇತುವೆಯೇ ಆಧಾರ. ಪ್ರತಿ ಬಾರಿ ಅಡಿಕೆ ಪಾಲ ಗೆದ್ದಲು ಹಿಡಿಯುತ್ತಿದೆ. ಸ್ಥಳೀಯರೇ ಸೇರಿ ಮತ್ತೆ ಜೋಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅರಂತೋಡು ಗ್ರಾ.ಪಂ. ಸಹಕಾರ ಪಡೆದು ದುರಸ್ತಿ ಕಾರ್ಯ ನಡೆಸಲಾಗಿದೆ. ಸುತ್ತಾಟದ ಗೋಳು
ಪಿಂಡಿಮನೆ, ಮಾಟೆಕಾಯ, ಅಡ್ತಲೆ, ಬಳ್ಳಕಾನ, ಕುಧುRಳಿ, ಮಿತ್ತಡ್ಕ, ಚಿಮಾಡು ಮೊದಲಾದೆಡೆಯ 100ಕ್ಕೂ ಹೆಚ್ಚು ಮನೆಗಳಿಗೆ ತೂಗು ಸೇತುವೆ ಸನಿಹದ ದಾರಿ. ಮಿತ್ತಡ್ಕ ಎಸ್‌ಸಿ ಕಾಲನಿ, ತೇರ್ಥಮಜಲಿನಲ್ಲಿ ಪ್ರೌಢಶಾಲೆ, ಮಿತ್ತಡ್ಕ, ಅಡ್ತಲೆಯಲ್ಲಿ ಪ್ರಾಥಮಿಕ ಶಾಲೆ ಇವೆ. ಮಳೆಗಾಲದಲ್ಲಿ ವಾಹನ ಮೂಲಕ ಸಂಚರಿಸಬೇಕಾದರೆ ಗೋಳಿಯಡ್ಕ- ಮಿತ್ತಡ್ಕ 14 ಕಿ. ಮೀ. ಸುತ್ತು ಬಳಸಿ ಹೋಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
Related Articles
ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕುಟುಂಬಗಳು ಮಿತ್ತಡ್ಕ ಪ್ರದೇಶದಲ್ಲಿವೆ. ಈ ಜನರು ಗ್ರಾ.ಪಂ., ಪಡಿತರ ಸೌಲಭ್ಯಕ್ಕೆ ಅರಂತೋಡಿಗೆ ಬರಬೇಕು. ಮರ್ಕಂಜ ವ್ಯಾಪ್ತಿಗೆ ಸೇರಿದ ಮಿತ್ತಡ್ಕದಲ್ಲಿ ಸೊಸೈಟಿ ಇದೆ. ಅಲ್ಲಿಗೆ ಚಿಮಾಡು ಪ್ರದೇಶದ ನಿವಾಸಿಗಳು ಹೊಳೆ ದಾಟಿ ಹೋಗಬೇಕು. ಇಲ್ಲದಿದ್ದರೆ, ಸುತ್ತಾಟದ ರಸ್ತೆ ಕ್ರಮಿಸಬೇಕು. ಇಲ್ಲಿ ಸಾಮಗ್ರಿ ಪಡೆದುಕೊಳ್ಳಲು ವ್ಯಯಿಸುವ ವೆಚ್ಚಕ್ಕಿಂತ ಸಂಚಾರಕ್ಕೆ ಖರ್ಚು ಮಾಡಬೇಕು.
Advertisement
ಸುಸಜ್ಜಿತ ಸೇತುವೆ ನಿರ್ಮಿಸಲು ಮನವಿಅರಮನೆಗಾಯದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿ ಎಂದು 25 ವರ್ಷಗಳಷ್ಟು ಹಿಂದಿನಿಂದ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ಮರ್ಕಂಜ, ಮಿತ್ತಡ್ಕ, ದೊಡ್ಡತೋಟ ಸಂಪರ್ಕ ಸಾಧ್ಯವಾಗುತ್ತದೆ. ಐದು ವರ್ಷಗಳ ಹಿಂದೆ ಜಿ.ಪಂ. ಎಂಜಿನಿಯರ್ ಸ್ಥಳ ಪರಿಶೀಲಿಸಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಬಳಿಕ ಅವರ ಪತ್ತೆಯಿಲ್ಲ ಎನ್ನುತ್ತಾರೆ ಸ್ಥಳೀಯರು. 2011ರಲ್ಲಿ ಶಾಶ್ವತ ಸೇತುವೆ ನಿರ್ಮಿಸಿ ಎಂದು ಅರಂತೋಡು ಗ್ರಾ.ಪಂ. ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೂ ಸ್ಪಂದನೆ ಸಿಕ್ಕಿಲ್ಲ. ನೀರಿನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ
ಸೇತುವೆ ಇಲ್ಲದ ಕಾರಣ ತೂಗು ಸೇತುವೆಯಲ್ಲಿ ಸಾಗಬೇಕು. 6 ಕಿ.ಮೀ. ರಸ್ತೆ ಇದ್ದರೂ ಸೇತುವೆ ಇಲ್ಲದೆ 15 ಕಿ.ಮೀ ಸುತ್ತಾಟ ನಡೆಸಬೇಕು. ತೂಗು ಸೇತುವೆ ಸರಿ ಇಲ್ಲದ ಕಾರಣ ಕೆಲವು ದಿನಗಳ ಹಿಂದೆ ಹೊಳೆ ದಾಟಲು ತೆರಳಿದ್ದ ವ್ಯಕ್ತಿ ನೂರು ಮೀಟರ್ ಕೊಚ್ಚಿಕೊಂಡು ಹೋಗಿ ಪೊದೆ ಹಿಡಿದು ರಕ್ಷಣೆಗೆ ಮೊರೆ ಇಟ್ಟ ಸಂದರ್ಭ ಸ್ಥಳೀಯರು ರಕ್ಷಿಸಿದ್ದರು. ಅದಾದ ಬಳಿಕ ಗ್ರಾ.ಪಂ. ಸಹಾಯದಿಂದ ಊರವರು ಸೇರಿ ತೂಗು ಸೇತುವೆ ದುರಸ್ತಿ ಮಾಡಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
– ತೇಜಕುಮಾರ್ ಎಂ.ಕೆ. ಅರಮನೆಗಾಯ ನಿವಾಸಿ ಅನುದಾನ ಲಭ್ಯವಿಲ್ಲ
ಅರೆಮನೆಗಾಯ ತೂಗು ಸೇತುವೆಗೆ ಬದಲಿಯಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತ್ ಇಲಾಖೆ ವ್ಯಾಪ್ತಿಯಲ್ಲಿ ಅನುದಾನ ಮಂಜೂರಾತಿ ಆಗಿಲ್ಲ. ಈ ಹಿಂದೆ ಸಣ್ಣ ನೀರಾವರಿ ಇಲಾಖೆ ಮೂಲಕ ಅಲ್ಲಿ ವೆಂಟೆಡ್ ಡ್ಯಾಂ ಸಹಿತ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
-ಹನುಮಂತರಾಯಪ್ಪ ಜಿಲ್ಲಾ ಪಂಚಾಯತ್ ಎಂಜಿನಿಯರ್, ಸುಳ್ಯ