ದಾವಣಗೆರೆ: ಮದುವೆ ಬ್ರೋಕರ್‌ಗಳ ಸುಲಿಗೆ ತಪ್ಪಿಸಿ, ಉತ್ತಮ ಸಂಬಂಧಗಳನ್ನು ಬೆಸೆಯುವಲ್ಲಿ ವಧು-ವರರ ಸಮಾವೇಶ ಸಹಕಾರಿಯಾಗಲಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಹೇಳಿದರು. ಶನಿವಾರ ಅಭಿನವ ರೇಣುಕಾ ಮಂದಿರದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ 6ನೇ ವರ್ಷದ ವಧು-ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮದುವೆ ಪ್ರತಿಯೊಬ್ಬರ ಜೀವನದ ಬಹುಮುಖ್ಯ ಹಂತ. ಇಲ್ಲಿ ಉತ್ತಮ ಸಂಗಾತಿ ಹುಡುಕಿಕೊಳ್ಳುವುದು ಅತಿ ಅವಶ್ಯಕ. ಆದರೆ, ಮದುವೆ ಬ್ರೋಕರ್ ಗಳು ಇದನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುತ್ತಾರೆ. ಜೊತೆಗೆ ಸುಳ್ಳು ಹೇಳಿ ಸಂಬಂಧ ಕುದುರಿಸುತ್ತಾರೆ. ಇದನ್ನು ತಪ್ಪಿಸಲು ವಧು-ವರರ ಸಮಾವೇಶ ಸಹಕಾರಿ ಎಂದರು.
ನಮ್ಮ ಸಮಾಜದಿಂದ ಕಳೆದ 6 ವರ್ಷಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶದಲ್ಲಿ ನೇರ ವಧು-ವರರು ಪಾಲ್ಗೊಳ್ಳಬೇಕು ಎಂಬುದು ನಮ್ಮ ಬಯಕೆ. ಆದರೆ, ನಮ್ಮ ಸಮಾಜದವರು ಗೌರವಕ್ಕೆ ಹೆಚ್ಚು ಪ್ರಾಶಸ್ತ ಕೊಡುತ್ತಾರೆ. ಹೀಗಾಗಿಯೇ ಬಹಿರಂಗ ಸಮಾವೇಶಕ್ಕೆ ಬರುವುದಿಲ್ಲ. ಬದಲಿಗೆ ಪೋಷಕರು ಬರುತ್ತಾರೆ ಎಂದು ಅವರು ತಿಳಿಸಿದರು.
ಮೊದಲು ಒಟ್ಟು ಕುಟುಂಬ ಇರುತ್ತಿತ್ತು. ಮನೆಯಲ್ಲಿನ ಹಿರಿಯರು ಸೂಕ್ತ ವಧು,ವರರ ಹುಡುಕಾಟಕ್ಕೆ ತೊಡಗುತ್ತಿದ್ದರು. ಆದರೆ, ಇಂದು ಸಣ್ಣ ಸಣ್ಣ ಕುಟುಂಬಗಳು ಹೆಚ್ಚಿವೆ. ಇದರಿಂದ ವಧು, ವರರ ಅನ್ವೇಷಣೆ ಕಷ್ಟವಾಗಿದೆ. ಇದೇ ಕಾರಣಕ್ಕೆ ನಾವು ಸಮಾಜದಿಂದ ವೆಬ್‌ಸೈಟ್ ಆರಂಭಿಸಿದ್ದೇವೆ. ಇದರಲ್ಲಿ ನೋಂದಣಿ ಮಾಡಿಕೊಂಡರೆ ಇಡೀ ಪ್ರಪಂಚದಲ್ಲಿಯೇ ಇರುವ, ವಧು ವರರ ಪರಿಚಯ ನಿಮಗೆ ಆಗಲಿದೆ ಎಂದು ಅವರು ತಿಳಿಸಿದರು.
ಇಂತಹ ಕಾರ್ಯಕ್ರಮಗಳು ಸಮಾಜ ಸಂಘಟನೆಗೂ ಸಹ ಸಹಕಾರಿಯಾಗುತ್ತವೆ. ರಾಜ್ಯ, ಜಿಲ್ಲಾ ಘಟಕಗಳು ಸಮಾಜದ ಸಂಘಟನೆಗೆ ನಿರಂತರವಾಗಿ ಪ್ರಯತ್ನಿಸುತ್ತಿವೆ. ಕೆಲ ರಾಜಕಾರಣಿಗಳು ಸಮಾಜವನ್ನು ದುರುದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಸಮಾಜ ಸಂಘಟನೆ ರಾಜಕೀಯದಿಂದ ದೂರಉಳಿದಿದೆ ಎಂದು ಅವರು ಹೇಳಿದರು. ಸಮಾಜದ ಸಂಘಟನೆ ಇದೀಗ ತೀವ್ರಗೊಂಡಿದೆ.
ಶ್ರಾವಣ ಮಾಸದ ವೇಳೆಗೆ ಮಠದ ನಿರ್ಮಾಣ, ಗದ್ದಿಗೆ, ಪೀಠ, ದೇವಸ್ಥಾನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿವೆ. ಅದೇ ವೇಳೆಗೆ ಹೊಸ ಸ್ವಾಮೀಜಿ ನೇಮಕ ಮಾಡಿ, ಎಲ್ಲಾ ಕಟ್ಟಡಗಳ ಉದ್ಘಾಟನಾ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ನಮ್ಮ ಸಮಾಜ ಇನ್ನು ಎತ್ತರಕ್ಕೆ ಬೆಳೆಯಬೇಕು. ಇದೇ ಕಾರಣಕ್ಕೆ ನಾವು ಮೂರು ಘೋಷ ವಾಕ್ಯ ಇಟ್ಟುಕೊಂಡಿದ್ದೇವೆ.
ವ್ಯವಸಾಯದಿಂದ ವ್ಯಾಪಾರಕ್ಕೆ, ದುಶ್ಚಟಮುಕ್ತ ಯುವ ಸಮೂಹ, ಧರ್ಮಾಚರಣೆಗೆ ಒತ್ತುಕೊಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹದಡಿ ನಟರಾಜ, ನಾಗಪ್ಪ ಬಸಪ್ಪ ಅಂಗಡಿ, ಮಾಸೂರು ಮಹದೇವಪ್ಪ, ಬಾದಾಮಿ ಕರಿಬಸಪ್ಪ, ಅಂದನೂರು ಮುರುಗೇಶ್, ರಶ್ಮಿ ಕುಂಕೋದ್ ವೇದಿಕೆಯಲ್ಲಿದ್ದರು.