Advertisement

ಮುಡುಪಿನಡ್ಕ-ಮೈಂದನಡ್ಕ ರಸ್ತೆ ಕಾಮಗಾರಿ ಸ್ಥಗಿತ 

03:44 PM Dec 28, 2017 | |

ಬಡಗನ್ನೂರು: ಮುಡುಪಿನಡ್ಕ -ಮೈಂದನಡ್ಕ ಜಿ.ಪಂ. ರಸ್ತೆ ಡಾಮರು ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಸಮತಟ್ಟುಗೊಳಿಸಿ ಜಲ್ಲಿ ಹಾಕಿದ ಕೆಲಸಗಾರರು 15 ದಿನಗಳಿಂದ ನಾಪತ್ತೆಯಾಗಿದ್ದಾರೆ.

Advertisement

ಮುಡುಪಿನಡ್ಕ-ಸುಳ್ಯಪದವು ಜಿ.ಪಂ. ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ನಾಗರಿಕರಿಂದ ಅಹೋರಾತ್ರಿ ಪ್ರತಿಭಟನೆಗಳೂ ನಡೆದಿದ್ದವು. ಕಡೆಗೂ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಪ್ರಯತ್ನದಿಂದ ಒನ್‌ ಟೈಮ್‌ ಇಂಪ್ರೂವ್‌ಮೆಂಟ್‌ ಯೋಜನೆಯಲ್ಲಿ ಮುಡುಪಿನಡ್ಕದಿಂದ ಮೈಂದನಡ್ಕ ಮಧ್ಯೆ 2.1 ಕಿ.ಮೀ. ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಡಿಸೆಂಬರ್‌ ಮೊದಲಿಗೇ ಕಾಮಗಾರಿಯನ್ನು ಆರಂಭಿಸಿದ್ದಾರೆ. ಆದರೆ ಅಲ್ಪ ಕೆಲಸ ಮುಗಿಸಿ ತೆರಳಿದ್ದಾರೆ.

ಧೂಳಿನ ಮಜ್ಜನ
ಮೊದಲೇ ರಸ್ತೆ ಹದಗೆಟ್ಟ ಕಾರಣದಿಂದ ಈ ಭಾಗದ ನಾಗರಿಕರು ಸಂಚಾರ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಈಗ ರಸ್ತೆಯ ಇಕ್ಕೆಲಗಳಲ್ಲಿ ಸಮತಟ್ಟು ಮಾಡಿರುವುದರಿಂದ ಸಂಚಾರದ ಸಂದರ್ಭ ಧೂಳಿನ ಮಜ್ಜನವಾಗುತ್ತಿದೆ. ಕೆಲವು ಕಡೆ ಗಳಲ್ಲಿ ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಬಿಟ್ಟಿರುವುದರಿಂದ ದ್ವಿಚಕ್ರ ವಾಹನಗಳಿಗಂತೂ ಸಂಚಾರಕ್ಕೆ ಸವಾಲಾಗಿದೆ.

ಗಾಳಿ ಸುದ್ದಿ?
ರಸ್ತೆಯ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಕೆಲಸಗಾರರು ನಿಯಮದಂತೆ ರಸ್ತೆಯ ಇಕ್ಕೆಲಗಳಲ್ಲಿ ಸಮತಟ್ಟು ಮಾಡುವ ಹಾಗೂ ಜಲ್ಲಿ ಹಾಕುವ ಕೆಲಸ ಮಾಡಿಲ್ಲ. ಮಂಗಳೂರಿನಿಂದ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಯೋಜನೆಯ ಮೇಲ್ವಿಚಾರಕರು ತರಾಟೆಗೆ ತೆಗೆದುಕೊಂಡ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡಿದೆ. ಆದರೆ ಪಿಡಬ್ಲ್ಯುಡಿ ಗುತ್ತಿಗೆದಾರರು ಇದನ್ನು ನಿರಾಕರಿಸಿದ್ದಾರೆ.

ಅಗ್ರಿಮೆಂಟ್‌ ಅಂತಿಮವಾಗಿಲ್ಲ
ಕಾಮಗಾರಿಗೆ ಅನುದಾನ ನಿಗದಿಯಾಗಿ ಗುತ್ತಿಗೆದಾರರಿಗೆ ಟೆಂಡರ್‌ ಆಗಿದ್ದು, ಅಗ್ರಿಮೆಂಟ್‌ ಹಂತದಲ್ಲಿದೆ. ಟೆಂಡರ್‌ ಆಗಿರುವುದರಿಂದ ಅರ್ತ್‌ ವರ್ಕ್‌ ಮುಗಿಸುವ ಸಮಯಕ್ಕೆ ಟೆಂಡರ್‌ನ ಹಣಕಾಸು ಬಿಡ್‌ ಅಂತಿಮಗೊಳ್ಳುವ ನಿರೀಕ್ಷೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ನಿರೀಕ್ಷೆಯಂತೆ ಅಂತಿಮಗೊಳ್ಳದ ಕಾರಣಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಎನ್ನುವುದು ಲೋಕೋಪಯೋಗಿ ಇಲಾಖೆಯ ಹೇಳಿಕೆಯಾಗಿದೆ.

Advertisement

ಬಾಕಿಯಾಗುವುದಿಲ್ಲ
ಹಲವು ರೀತಿಯ ಪ್ರಯತ್ನ ನಡೆಸಿದ ಬಳಿಕ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಲು ಸಾಧ್ಯವಾಗಿದೆ. ಕಾಮಗಾರಿ ಏಕೆ ಸ್ಥಗಿತಗೊಂಡಿದೆ ಎಂಬ ಕುರಿತು ಸಂಬಂಧಿಸಿದ ಇಲಾಖೆಯವರಲ್ಲಿ ಕೇಳುತ್ತೇನೆ. ಮಂಜೂರುಗೊಂಡ ಕಾಮಗಾರಿ ಯಾವುದೇ ಕಾರಣಕ್ಕೂ ಬಾಕಿಯಾಗುವುದಿಲ್ಲ.
– ಶಕುಂತಳಾ ಟಿ. ಶೆಟ್ಟಿ ಶಾಸಕರು, 

ತಾತ್ಕಾಲಿಕ ಸ್ಥಗಿತ
 ಟೆಂಡರ್‌ ಪ್ರಕ್ರಿಯೆ ಆರಂಭವಾದ ಕಾರಣ ಗುತ್ತಿಗೆದಾರರು ಕೆಲಸ ಆರಂಭಿಸಿದ್ದರು. ಆರಂಭಿಕ ಕೆಲಸ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿಲ್ಲಿಸಲಾಗಿದೆ. ಅಗ್ರಿಮೆಂಟ್‌ ಅಂತಿಮ ಹಂತದಲ್ಲಿದೆ. ಈ ಪ್ರಕ್ರಿಯೆ ಅಂತಿಮಗೊಂಡ ಕೂಡಲೇ ಕಾಮಗಾರಿಯನ್ನು ಮತ್ತೆ ಆರಂಭಿಸಲಾಗುವುದು.
ಬಾಲಕೃಷ್ಣ ಭಟ್‌
  ಪಿಡಬ್ಲ್ಯುಡಿ ಎಂಜಿನಿಯರ್‌

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next