Advertisement

ಮುಗಿಲು ಮುತ್ತಿದ ಹುಡುಗರು

06:30 AM Feb 20, 2018 | |

“ಗಾಳಿಪಟ’ ಸಿನಿಮಾದ ಚಿಲ್ಲನೆ ಮಂಜು, ಸೋನೆಮಳೆಯ ದೃಶ್ಯಗಳು ನೆನಪಿದೆಯಲ್ವೇ? ಅದೇ ಮುಗಿಲುಪೇಟೆ. ಕುಶಾಲನಗರದ ಸಮೀಪವಿದೆ. ಸಿಟಿ ಹುಡುಗರು ನಗರಕ್ಕೆ ಕೈಮುಗಿದು, ನೆಮ್ಮದಿಯಾಗಿದ್ದುಬರಲು ಹೋದ ಆ ತಾಣಕ್ಕೆ ಮೈಸೂರಿನ ಮಾನಸ ಗಂಗೋತ್ರಿಯ ಒಂದಿಷ್ಟು ಹುಡುಗರು ಮರುಭೇಟಿ ಕೊಡುತ್ತಾರೆ. ಈಗ ಹೇಗಿದೆ ಆ ಮುಗಿಲುಪೇಟೆ?

Advertisement

ಸೆಮಿಸ್ಟರ್‌ ಪರೀಕ್ಷೆ ಮುಗಿದಿತ್ತು. ಮನಸ್ಸಿಗೊಂದು ರಿಲ್ಯಾಕ್ಸ್‌ ಬೇಕಲ್ಲ? ಎಲ್ಲಿಗೆ ಹೋಗುವುದು ಎಂಬುದರ ಬಗ್ಗೆ ನಮ್ಮೊಳಗೇ, ಸಂಸತ್‌ ಅಧಿವೇಶನದಂತೆ ದೊಡ್ಡ ಚರ್ಚೆ ಆಯಿತು. ಆಗ ನಮ್ಮ ಜೂನಿಯರ್‌ ಆಗಿರುವ ಮಂದಹಾಸದ ಹುಡುಗಿ ಕವನ “ನಮ್ಮ ಊರಿಗೆ ಬನ್ನಿ, ನಿಮಗೆಲ್ಲ ಮುಗಿಲುಪೇಟೆ ದರ್ಶನ ಮಾಡಿಸುತ್ತೇನೆ’ ಎಂದು ಆಹ್ವಾನವಿತ್ತಾಗ, ನಮಗೆ ಮುಗಿಲು ಮುಟ್ಟಿದಷ್ಟು ಸಂಭ್ರಮ.

ನಗರಪ್ರದೇಶದ ಏಕತಾನತೆಯಿಂದ ಪಾರಾಗುವ ಸಲುವಾಗಿ “ಗಾಳಿಪಟ’ ಸಿನಿಮಾದ ನಾಯಕರು ಹೋಗಿದ್ದು ಕೂಡಾ ಇದೇ ಮುಗಿಲು ಪೇಟೆಗೇ. ಅದೇ ಸಿನಿಮಾದ “ನಧೀಂ ಧೀಂ ತನ’ ಹಾಡಿನಲ್ಲಿ ಮುಗಿಲುಪೇಟೆಯ ಪ್ರಕೃತಿ ಸೌಂದರ್ಯ ಕಂಡು ಬೆರಗಾಗಿದ್ದ ನಾವು ಕವನಾಳ ಆಹ್ವಾನವನ್ನು ದೂಸ್ರಾ ಮಾತಿಲ್ಲದೆ ಒಪ್ಪಿದೆವು. ನಾವು 8 ಮಂದಿ ಕುಶಾಲನಗರದತ್ತ, ಬೆಳಗ್ಗಿನ ಕೊರೆಯುವ ಚಳಿಯಲ್ಲಿ ಬೈಕುಗಳನ್ನೇರಿ ಹೊರಟೇಬಿಟ್ಟೆವು.

ಅದು ಮುಗಿಲುಪೇಟೆ ಅಲ್ಲ…: ಮುಗಿಲುಪೇಟೆ ಎನ್ನುವ ಹೆಸರು ಅಧಿಕೃತವಾದುದಲ್ಲ. ಅದು “ಗಾಳಿಪಟ’ ಸಿನಿಮಾದಲ್ಲಿ ನಿರ್ದೇಶಕ ಯೋಗರಾಜ ಭಟ್‌ ದಯಪಾಲಿಸಿದ ಹೆಸರು. ಆ ಸ್ಥಳದ ನಿಜವಾದ ಹೆಸರು “ಮಂದಲ್‌ ಪಟ್ಟಿ’. ಇದರ ಮೂಲ ಕೊಡವ ಭಾಷೆಯ “ಮಾಂದಲ್‌ ಪಟ್ಟ’ ಎನ್ನುವ ಹೆಸರು. ಅದರರ್ಥ ಎತ್ತರದ ಜಾಗ ಎಂದು. ಆದರೆ, ಜನಮಾನಸದಲ್ಲಿ ಅಚ್ಚಾಗಿರುವುದು “ಮುಗಿಲುಪೇಟೆ’ ಎನ್ನುವ ಹೆಸರು. ಮಡಿಕೇರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮಂದಲಪಟ್ಟಿಗೆ ಹೋಗಲು ಖಾಸಗಿ ಬಸ್‌ ಮತ್ತು ಜೀಪುಗಳ ವ್ಯವಸ್ಥೆಯಿದೆ.

ಥ್ರಿಲ್‌ ಕೊಡೋ ರಸ್ತೆಗಳು: ಮಡಿಕೇರಿಯಿಂದ ಮುಗಿಲುಪೇಟೆಗೆ ಕಡಿದಾದ ರಸ್ತೆಯಲ್ಲಿ ಸಾಗುವುದೇ ಥ್ರಿಲ್‌. ಸುತ್ತಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮ ಘಟ್ಟ ಶ್ರೇಣಿಗಳು, ಅವುಗಳ ನಡುವೆ ಕಂದಕದಲ್ಲಿ ಬೆಳೆದುನಿಂತ ಗಿಡಮರಗಳನ್ನು ನೋಡುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ.

Advertisement

ಸಮುದ್ರಮಟ್ಟದಿಂದ ಸುಮಾರು 4 ಸಾವಿರ ಅಡಿ ಎತ್ತರದಲ್ಲಿರುವ ಮಂದಲಪಟ್ಟಿ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುತ್ತದೆ. ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ ಎರಡು ಗಂಟೆ. ಮುಗಿಲುಪೇಟೆಯ ನಿಜವಾದ ಸೌಂದರ್ಯವನ್ನು ಸವಿಯಬೇಕಾದರೆ ಸಂಜೆ ಸೂಕ್ತ ಸಮಯ. ನಾವು ಬೇಗನೆ ಹೋಗಿದ್ದೆವು. ಸಂಜೆ ಮತ್ತೆ ಬರುವುದೆಂದು ನಿರ್ಧರಿಸಿ, ಹತ್ತಿರದಲ್ಲಿದ್ದ ಸೂರ್ಲಬ್ಬಿ ಜಲಪಾತ ನೋಡಲೆಂದು ತೆರಳಿದೆವು. 

ಆಯಾಸವೆಲ್ಲಾ ಮಾಯ: ಸಂಜೆಯವರೆಗೂ ಸೂರ್ಲಬ್ಬಿ ಜಲಪಾತದ ಸಾನ್ನಿಧ್ಯದಲ್ಲಿದ್ದು, ನಂತರ ಮಂದಲಪಟ್ಟಿಯತ್ತ ಅಂದರೆ ಮುಗಿಲುಪೇಟೆಗೆ ಹೊರಟೆವು. ಮುಗಿಲುಪೇಟೆಯಲ್ಲಿ ಚಾರಣಿಗರು ಮತ್ತು ಪ್ರವಾಸಿಗರಿಗೆ ಬೆಟ್ಟದ ತುದಿಯ ಮಂಟಪ ವೀಕ್ಷಿಸಲು ಪ್ರವೇಶ ಶುಲ್ಕವಿದೆ. ಮಂಟಪ ಏರಿ ಮುಗಿಲು ಮುಟ್ಟಿದರೆ ಮಾತ್ರ ಇಲ್ಲಿಗೆ ಬಂದಿದ್ದಕ್ಕೂ ಸಾರ್ಥಕ. ಮಂಟಪದ ತುದಿ ತಲುಪಲು ಇಲ್ಲಿ ಖಾಸಗಿ ಜೀಪುಗಳ ವ್ಯವಸ್ಥೆಯಿದೆ.

ಮುಖ್ಯ ಸಂಗತಿಯೆಂದರೆ, ಅಲ್ಲಿಗೆ ಹೋಗುವ ರಸ್ತೆಮಾರ್ಗವೂ ಅತ್ಯಂತ ದುರ್ಗಮ. ಅಪಾಯಕ್ಕೇ ಆಹ್ವಾನದಂತಿರುವ ಈ ರಸ್ತೆಯಲ್ಲಿ ದ್ವಿಚಕ್ರ ಸವಾರರು ಪ್ರಯಾಣಿಸುವುದು ಬಹಳ ಕಷ್ಟ. ನಾವು ನಮ್ಮ ಬೈಕುಗಳನ್ನು ಅಲ್ಲಿಯೇ ನಿಲ್ಲಿಸಿ ನಡೆದುಕೊಂಡು ಬೆಟ್ಟದ ತುದಿಯತ್ತ ಹೊರಟೆವು. ಇಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು, ಪ್ರೇಮಿಗಳು, ನವದಂಪತಿ, ಚಾರಣಪ್ರಿಯರು ಬರುವುದೇ ಹೆಚ್ಚು.

ಬೆಟ್ಟದ ಹಸಿರು ಹುಲ್ಲಿನ ಮೇಲೆ ಕುಳಿತು ನಮ್ಮಷ್ಟಕ್ಕೇ ಹಾಡು ಗುನುಗಿಕೊಳ್ಳಲು ಇದಕ್ಕಿಂತ ಉತ್ತಮ ಜಾಗ ಬೇರೆ ಸಿಗಲಾರದು. ಪ್ರಕೃತಿ ಆರಾಧಕರಿಗಂತೂ ಇದು ಅಕ್ಷರಶಃ ಭೂಲೋಕದ ಸ್ವರ್ಗ. ಕಲ್ಲುಮಣ್ಣಿನ ರಸ್ತೆಯಲ್ಲಿ ಸಾಗುವಾಗ ಆಯಾಸವಾಗುತ್ತದಾದರೂ ಬೆಟ್ಟದ ತುದಿ ತಲುಪಿದಾಗ ಕೈಗೆ ಸಿಕ್ಕಿತ್ತೇನೋ ಎಂದು ಭಾಸವಾಗುವ ಮುಗಿಲು, ಅಲೆ ಅಲೆಯಾಗಿ ತೇಲಿಬರುವ ಮಂಜು ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ.

ಮುಗಿಲುಪೇಟೆಗೆ ಕೈ ಮುಗಿವ ಸೂರ್ಯ: ಮಂದಲ್‌ಪಟ್ಟಿಯ ಸೂರ್ಯಾಸ್ತದ ದೃಶ್ಯಗಳಂತೂ ವರ್ಣನಾತೀತ. ಹೊನ್ನಿನ ಬೆಳಕಲ್ಲಿ ಮಿಂದೆದ್ದ ಸೂರ್ಯನನ್ನು ಕ್ಯಾಮೆರಾ ಕಣ್ಣಿನ ಮೂಲಕ ತಮ್ಮ ಕೈಗಳಲ್ಲಿ ಸೆರೆಹಿಡಿಯಲು ಹುಡುಗರು ಇನ್ನಿಲ್ಲದ ಪ್ರಯತ್ನಪಟ್ಟರು. ಅಲ್ಲಿಗೆ ಹೋಗಿ ಸೆಲ್ಫಿ ತೆಗೆಯದಿದ್ದರೆ ಹೇಗೆ?

ಆ ಪ್ರಕ್ರಿಯೆಯನ್ನೂ ಮುಗಿಸಿಕೊಂಡು ನಾವು ವಾಪಸ್‌ ಸ್ವಸ್ಥಾನಕ್ಕೆ ಹೊರಟೆವು. ಇಷ್ಟು ದಿನ ಪರೀಕ್ಷೆ, ಅಸೈನ್‌ಮೆಂಟ್‌ಗಳ ಗೊಂದಲದಲ್ಲಿ ಕಳೆದುಹೋಗಿದ್ದ ಮನಸ್ಸುಗಳು ಮಂದಲ್‌ಪಟ್ಟಿಯ ನಿಸರ್ಗ ಸೌಂದರ್ಯ ಕಂಡು ಮುದಗೊಂಡಿದ್ದವು. ಪ್ರತಿಯೊಬ್ಬ ಪ್ರಕೃತಿಪ್ರೇಮಿಯೂ ನೋಡಲೇಬೇಕಾದ ತಾಣವಿದು. ಇಲ್ಲಿಗೆ ಭೇಟಿ ಕೊಟ್ಟರೆ ಮನಸ್ಸು ಹಗುರಾಗುವುದು ಖಂಡಿತ.

* ಹನಮಂತ ಕೊಪ್ಪದ, ಮೈಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next