Advertisement

ಹುಡುಗರಿಗೂ ಅಳು ಬರುತ್ತದೆ!

10:33 PM Jul 11, 2019 | mahesh |

ಅಂದು ತಂಪಾದ ಸಂಜೆ. ಅವನೊಬ್ಬನೇ ಅದನ್ನು ಆಸ್ವಾದಿಸುತ್ತಿದ್ದ. ಇತ್ತ ಭಾನು, ಬಾನಿನ ಮುಳುಗುವ ದಿಕ್ಕಿಗೆ ತೆರಳಿ ಕಣ್ಮರೆಯಾಗುವಂತಿದ್ದಾನೆ. ತಂಗಾಳಿಯು ಮೈಸವರುತ್ತಿದ್ದಂತೆ ಏನೋ ಒಂದು ಹೊಸ ಅನುಭವ ಅವನಲ್ಲಿ. ಕಡಲತೀರದ ಬದಿಯಲ್ಲಿ ನಿಲ್ಲದಿದ್ದರೂ ಅಲ್ಲೇ ಇದ್ದೇನೆ ಎನ್ನುವಂತಹ ಉಲ್ಲಾಸದ ರಸನಿಮಿಷ. ಬಿಗಿಹಿಡಿದಿದ್ದ ಮನಸ್ಸು ಇದೀಗ ಆರಾಮಗೊಂಡಂತನಿಸಿದೆ. ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಮನಸ್ಸು ಯಾರ ಸಂಗವನ್ನೂ ಬಯಸದೇ ಏಕಾಂತದಲ್ಲಿ ನಿಸರ್ಗದ ಅಂದವನ್ನು ಕಣ್ಣುತುಂಬಿಕೊಳ್ಳುವುದರಲ್ಲಿ ಹಿರಿದಾದ ಆನಂದವನ್ನು ಅನುಭವಿಸುತ್ತಿತ್ತು. ಮೇಲುದನಿಯ ತಂಗಾಳಿ ಅವನ ಕಿವಿಯನ್ನು ತೀಡುತ್ತಿತ್ತು. ಅಷ್ಟೊತ್ತಿಗಾಗಲೇ ಅವನ ಕಣ್ಣಲ್ಲಿ ಕಂಬನಿ ಮಿಡಿದಿತ್ತು. ರಾಗಬದ್ಧವಾಗಿ ಹಾಡಿದ ತಂಗಾಳಿ ಇದಕ್ಕೆ ಸಾಕ್ಷಿಯಾಯಿತು. ನಿಸರ್ಗದ ಸೌಂದರ್ಯವನ್ನು ಸವಿಯುತ್ತಿದ್ದಂತೆ ಅವನು ಭಾವಾವೇಶಕ್ಕೆ ಒಳಗಾಗಿದ್ದ. ಕಂಬನಿ ಮಳೆಹನಿಯಂತೆ ಸುರಿಯಲು ಮಗುವಂತಾಯಿತು ಅವನ ಮನಸ್ಸು. ಎಲ್ಲರು ಹೇಳುತ್ತಾರೆ, “ಗಂಡು ಮಕ್ಕಳು ಅಳಬಾರದು, ಅದು ಶ್ರೇಷ್ಠವಲ್ಲ, ಗಂಡು ಎನ್ನುವವನು ಎದೆಗಾರಿಕೆಯವನಾಗಿರಬೇಕು’.

Advertisement

ನಿಜ ಒಪ್ಪೋಣ! ಆದರೆ, ಹೃದಯ ಎನ್ನುವುದು ಅವನಿಗೂ ಇದೆ, ಭಾವನೆ ಎನ್ನುವುದು ಅವನಲ್ಲೂ ಇದೆ, ಆಸೆ-ಆಕಾಂಕ್ಷೆಗಳ ಸಾಗರವೇ ಅವನಲ್ಲಿದೆ. ಹೃದಯ ತುಂಬ ನೋವಿನ ಕೋಟೆಯನ್ನು ಹೊತ್ತು ಯಾರಲ್ಲೂ ಹೇಳಿಕೊಳ್ಳಲಾಗದೆ, ಒದ್ದಾಡುವ ಅವನ ಮನ-ಸಂಕಟ ಯಾರಿಗೆ ತಾನೇ ಅರ್ಥವಾದೀತು?

ಕಣ್ಣೀರು ಹಾಕಲು ಸ್ವಾತಂತ್ರ್ಯ ಇಲ್ಲದೆ ಅವನ ಮನ ಪರದಾಡುವಂ ತಾಗಿದೆ. ಇಲ್ಲಿ ಅವನೂ ಅಳುತ್ತಿದ್ದಾನೆ. ಕಣ್ಣು ಮುಚ್ಚಿದೊಡನೆ ಮಬ್ಬುಗವಿದ ಕಣ್ಣಿಗೆ ಹಳೆಯ ಚಿತ್ರಗಳೆಲ್ಲವೂ ಅಸ್ಪಷ್ಟವಾಗಿ ಕಂಡರೂ ಮನಸ್ಸಿಗೆ ಎಲ್ಲವೂ ಸ್ಪಷ್ಟವಾಗಿತ್ತು. ಅಂದು ತಂಗಿಯ ಓದಿಗಾಗಿ ತಾನು ಶಾಲೆಬಿಟ್ಟು ಕೆಲಸಕ್ಕೆ ಸೇರಿ ಆಕೆಯನ್ನು ಶಾಲೆಗೆ ಕಳುಹಿಸಿ ಓದಿಸಿದ್ದು, ಬಡತನದ ಬೇಗೆಯಲ್ಲಿ ತಂದೆ-ತಾಯಿ ಬಳಲುತ್ತಿದ್ದಾಗ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತದ್ದು, ದಿನವಿಡೀ ಕಷ್ಟಪಟ್ಟು ದುಡಿದರೂ ಹಣದ ಕೊರತೆ ಮತ್ತೆ ಮತ್ತೆ ಕಾಡಿ ರಾತ್ರಿ ಇಡೀ ನಿದ್ದೆ ಬಾರದೆ ಒದ್ದಾಡಿದ್ದು, ಮನೆಯ ಪರಿಸ್ಥಿತಿ ಇನ್ನೇನು ಸುಧಾರಿಸಿತು ಎಂದು ತಾನಿಷ್ಟಪಟ್ಟಂತೆ ಒಂದು ಬೈಕನ್ನು ಕೊಂಡುಕೊಂಡು ಆನಂದಿಸಿದ. ಆದರೆ ಹೆಗಲ ಮೇಲಿನ ಜವಾಬ್ದಾರಿ ಮುಗಿಯಿತು ಎಂದಲ್ಲ!

ಮದುವೆಯ ವಯಸ್ಸಿಗೆ ಬಂದಿರುವ ಅಕ್ಕ, ಇನ್ನೂ ಓದುತ್ತಿರುವ ತಂಗಿ-ತಮ್ಮ. ನಿಟ್ಟುಸಿರು ಬಿಡುವಷ್ಟು ಸಮಯ ಇಲ್ಲದ ಅವನ ದುಡಿತ ಅವನ ಕುಟುಂಬಕ್ಕಾಗಿ. ಅಕ್ಕನ ಮದುವೆಗಾಗಿ ತನ್ನಿಷ್ಟದ ಗಾಡಿಯನ್ನು ಮಾರಿದ. ತಮ್ಮ-ತಂಗಿಯನ್ನು ಇನ್ನಷ್ಟು ಓದಿಸಿದ. ತಾನು ಓದಿಲ್ಲ ಎನ್ನುವ ಕಿಂಚಿತ್ತೂ ಬೇಸರದ ಭಾವ ಅವನಲ್ಲಿಲ್ಲ. ಮನೆಯವರ ಮುಖದ ಖುಷಿಯೇ ಅವನ ಸಾಧನೆಯಾಗಿತ್ತು. ಅವರ ಖುಷಿಯನ್ನು ಕಂಡು ತನ್ನ ಕಣ್ಣಲ್ಲಿ ತುಂಬಿಸಿಕೊಂಡ.

ಬಡತನವನ್ನು ಕೊಂಚ ಮೆಟ್ಟಿನಿಂತ. ದುಡಿದ ಫ‌ಲವಾಗಿ ಜೀವನ ಸಾಗಿಸಲು ಅಡ್ಡಿಯೇನಿರಲಿಲ್ಲ. ಅದಾಗಲೇ ಬಾಳಸಂಗಾತಿ ಜೊತೆಯಾದಳು, ಅವನ ಕೈ ಹಿಡಿದಳು. ಆಕೆಯ ಬೇಕು-ಬೇಡಗಳನ್ನು ಪೂರೈಸಲು ಅವನು ತನ್ನ ಆಸೆಗಳನ್ನು ಕೊಂದುಕೊಂಡ. ಅಪ್ಪ ಎಂದು ಕರೆಯುವ ಮಗಳ ಧ್ವನಿಗೆ ಓಗೊಟ್ಟು ಕಷ್ಟವೆಲ್ಲವನ್ನು ಮರೆತ. ಮತ್ತಷ್ಟು ಜವಾಬ್ದಾರಿ ಹೆಚ್ಚಾದುದನ್ನು ಮರೆಯಲಿಲ್ಲ. ಇನ್ನಷ್ಟು ದುಡಿಯಲು ಪ್ರಾರಂಭಿಸಿದ. ಅವನ ಸಾಧನೆ ಎಲ್ಲಾ ಕ್ಷೇತ್ರಗಳಲ್ಲೂ ಮೆಚ್ಚುವಂತದ್ದು. ದೇಶ ಕಾಯುವ ಕಾಯಕದಲ್ಲೂ ಅವನ ಸಾಧನೆ ಅಜರಾಮರ. ಅವನ ಪ್ರತೀ ಹೆಜ್ಜೆಯೂ ತನ್ನ ಮನೆಯವರಿಗಾಗಿ. ಅವನ ಪ್ರತೀ ನಡೆಯೂ ಅವನನ್ನು ಪ್ರೀತಿಸುವ ಜೀವಗಳಿಗಾಗಿ. ತನ್ನ ಹುಟ್ಟುಹಬ್ಬನ್ನು ಮರೆತರೂ ತನ್ನ ಮನೆಯವರ ಹುಟ್ಟುಹಬ್ಬನ್ನು ನೆನಪಿನಿಂದ ಆಚರಿಸುತ್ತಾನೆ. ಅದೇ ಅವನು.

Advertisement

ಎಲ್ಲವನ್ನೂ ತ್ಯಾಗಮಾಡಿದ. ಆದರೆ, ಅವನ ತ್ಯಾಗಕ್ಕೆ ಬೆಲೆ ನೀಡುವವರು ಯಾರು? ಅವನ ನೋವಿಗೆ ಜೊತೆಯಾದವರು ಯಾರು? ಇಂದಿಗೂ ಅವನು ಮನದಲ್ಲಿಯೇ ಕೊರಗುತ್ತಿದ್ದಾನೆ! ಅವನಿಗೆ ಸಂತೈಸುವವರಾರು? ಅವನ ಪ್ರತೀ ತ್ಯಾಗವೂ ಕುಟುಂಬಕ್ಕಾಗಿಯಲ್ಲವೆ? ಅದ ಹೇಗೆ ಮರೆಯುವುದು? ಮಗನಾಗಿ, ಅಣ್ಣನಾಗಿ, ತಮ್ಮನಾಗಿ, ಗಂಡನಾಗಿ, ಅಪ್ಪನಾಗಿ ಅವನು ನಿರ್ವಹಿಸುವ ಪಾತ್ರಗಳಿಗೆ ಸಾಟಿಯುಂಟೆ? ತಾಯಿ ಕಷ್ಟಪಟ್ಟದ್ದು ಕಣ್ಣಿಗೆ ಕಂಡಿತು. ಆದರೆ, ತಂದೆ ಕಷ್ಟಪಟ್ಟದ್ದು ಯಾರಿಗೂ ಕಾಣಿಸಲೇ ಇಲ್ಲ, ತ್ಯಾಗ ಗೊತ್ತಾಗಲೇ ಇಲ್ಲ, ಶ್ರೇಷ್ಠತೆ ಅರಿಯಲೇ ಇಲ್ಲ, ಎಲೆಮರೆಯ ಕಾಯಿಯಂತೆ ದುಡಿದ ಅವನನ್ನು ಯಾರೂ ಗುರುತಿಸಲೇ ಇಲ್ಲ !

ನಿಜಕ್ಕೂ ಅವನಂತಹ ತ್ಯಾಗಮಯಿ ಯಾರೂ ಇಲ್ಲ. ಅವನಂತಹ ದಯಾಮಯಿ ಬೇರೊಬ್ಬರಿಲ್ಲ, ಅದನ್ನು ನಾವು ಅರಿಯದಾದೆವಲ್ಲ. ಅವನು ನಿಜಕ್ಕೂ ಶ್ರೇಷ್ಠ.

ಅವನ ಕಣ್ಣೀರು ಇಂದಿಗೆ ನಿಂತಿತು. ಅದು ನಿಂತಿರಬಹುದು. ಆದರೆ, ಮತ್ತೆ ಆ ಏಕಾಂತಕ್ಕೆ ಕಾಯುತಲಿದೆ ಅವನ ಮನ. ಮತ್ತೆ ಮತ್ತೆ ಮನ ಕೇಳುತಿದೆ ಇಂತಹ ಸಂಜೆ ಬರುವುದು ಇನ್ನೆಂತು. ಇಂದು ನಿಂತ ಕಂಬನಿ ನಾಳಿನ ದಿನ ಮತ್ತೆ ಬರಬಹುದಲ್ಲವೆ, ಯಾರಿಗೂ ತಿಳಿಯದೆ ಗುಟ್ಟಾಗಿ ! ಅವನ ನೋವಿನಲ್ಲಿ ಭಾಗವಹಿಸುವವರಾಗೋಣ. ಅವನ ಪ್ರತೀ ಹೆಜ್ಜೆಯಲ್ಲೂ ಅವನಿಗೆ ಸ್ಫೂರ್ತಿಯಾಗೋಣ. ಅವನ ಮನದ ಕಂಬನಿ ಒರೆಸುವ ಒಂದು ಸಣ್ಣ ಪ್ರಯತ್ನ ಮಾಡೋಣ.

ಅವನೂ ಅಳುತ್ತಾನೆ, ಆದರೆ ಯಾರಿಗೂ ತೋರ್ಪಡಿಸಲ್ಲ. ಅವನ ಮನವನ್ನು ಅರಿಯುವ, ಅವನಿಗಾಗಿ ನಾವು ಒಂದಿಷ್ಟನ್ನು ತ್ಯಾಗಮಾಡುವ, ಸಮಾಜದಲ್ಲಿ ಸಮಾನವಾಗಿ ಬಾಳ್ಳೋಣ.
ಅವನು ನಮ್ಮವನು.

ಸುಷ್ಮಾ
ದ್ವಿತೀಯ ಬಿ. ಎ.,
ಎಸ್‌ವಿಟಿ ಮಹಿಳಾ ಕಾಲೇಜು, ಕಾರ್ಕಳ.

Advertisement

Udayavani is now on Telegram. Click here to join our channel and stay updated with the latest news.

Next