ವಾಮಂಜೂರು: ಮದುವೆಯಾಗಿ ಐದು ವರ್ಷ ಕಳೆದಿದ್ದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಕಾರ್ಕಳದ ಅತ್ತೂರು ಚರ್ಚ್‌ಗೆ ಹರಕೆ ಸಲ್ಲಿಸಿ ಐದು ವರ್ಷದ ಬಳಿಕ ಮಗ ಹುಟ್ಟಿದ ಮಗನನ್ನು ಪ್ರೀತಿಯಿಂದ ಬೆಳೆಸಿ ಉತ್ತಮ ವಿದ್ಯಾಭ್ಯಾಸ ನೀಡಿದೆವು. ಉದ್ಯೋಗಕ್ಕೆಂದು ಮುಂಬಯಿಗೆ ಹೋದ ಮಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆದರೆ ಕಳೆದ ಹತ್ತು ವರ್ಷದ ಹಿಂದೆ ಮುಂಬಯಿಗೆ ಹೋದ ಮಗ ಮತ್ತೆ ಮನೆಗೆ ಬಂದಿಲ್ಲ. ಹೀಗಾಗಿ ತಾಯಿ ಪರಿತಪಿಸುತ್ತಿದ್ದಾಳೆ.
ಮಗ ಮನೆಗೆ ಬಂದರೆ ನನ್ನಲ್ಲಿರುವ ಕಿವಿಯೋಲೆಯನ್ನು ಅಡವಿಟ್ಟು ಅತ್ತೂರಿಗೆ ಹರಕೆ ಸಲ್ಲಿಸುತ್ತೇನೆ… ಎಂದು ಬಿಕ್ಕಿ ಬಿಕ್ಕು ಮಗ ಪಾಸ್ಕಲ್ ಮಥಾಯಿಸ್‌ನ ಫೋಟೋ ಹಿಡಿದು ಅಳುತ್ತಾರೆ ವೃದ್ಧೆ 70ರ ವಯಸ್ಸಿನ ಅಂಜಲಿ ಮಥಾಯಿಸ್. ಗಂಡನನ್ನೂ ಕಳೆದುಕೊಂಡು, ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಈ ತಾಯಿ ಗಂಜಿಮಠ ವ್ಯಾಪ್ತಿಯ ಸೂರಲ್ಪಾಡಿಯ ಶುಭದ ಸಂಸ್ಥೆಯ ಬಳಿಯ ಮನೆಯಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.
ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಉದ್ಯೋಗಕ್ಕೆಂದು ಮಗ ಪಾಸ್ಕಲ್ ಮಥಾಯಿಸ್ ಮುಂಬಯಿಯ ಕುರ್ಲಾ ಎಂಬಲ್ಲಿಗೆ ಹೋಗಿದ್ದ. ಅಲ್ಲಿ ಆತ ಯಾವುದೋ ಬಟ್ಟೆ ಅಂಗಡಿಯಲ್ಲಿ ಉತ್ತಮ ಕೆಲಸದಲ್ಲಿದ್ದ. ರಜೆ ಇದ್ದಾಗ ಊರಿಗೆ ಬರುತ್ತಿದ್ದ. ಅಪರೂಪಕ್ಕೊಮ್ಮೆ ಕರೆ ಮಾಡುತ್ತಿದ್ದ. ಖರ್ಚಿಗೆ ದುದ್ಡೂ ಕಳಿಸುತ್ತಿದ್ದ. ಆದರೆ ಮಗ ಈಗ ನಾಪತ್ತೆಯಾಗಿ ಹತ್ತು ವರ್ಷ ಕಳೆದಿದೆ. ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದೇ ಗೊತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಅಂಜಲಿ.
ಮುಂಬಯಿಯಲ್ಲಿ ಮರಾಠಿ ಹುಡಿಗಿಯನ್ನು ಮದುವೆಯಾಗಿದ್ದ ಮಗ, ಒಮ್ಮೆ ಆಕೆಯನ್ನೂ ಕರೆದುಕೊಂಡು ಬಂದಿದ್ದ. ನಿನ್ನನ್ನು ಮುಂಬಯಿಗೆ ಕರದುಕೊಂಡು ಹೋಗುತ್ತೇನೆ. ಬೇರೆ ಮನೆ ಮಾಡಿ ಒಟ್ಟಿಗೆ ಇರೋಣ ಎಂದಿದ್ದ, ನನ್ನಲ್ಲಿದ್ದ ಎರಡು ಪವನ್ ಚಿನ್ನ, ಮನೆಯಲಿದ್ದ ಕೆಲವು ಸಾಮಗ್ರಿಗಳನ್ನು ತೆಗೆದುಕೊಂಡು ಹೋದ ಮಗ ಮತ್ತೆ ವಾಪಸ್ ಬಂದೇ ಇಲ್ಲ ಎನ್ನುತ್ತಾರೆ ಅಂಜಲಿ ಮಥಾಯಿಸ್.
ಚರ್ಚ್ ವತಿಯಿಂದ ಸಿಗುವ ವಾರಕ್ಕೆ ಮೂರು ಕೆ.ಜಿ. ಅಕ್ಕಿ, ತಿಂಗಳ ವೃದ್ಧಾಪ್ಯ ವೇತನ ಬಿಟ್ಟರೆ ಖರ್ಚಿಗೆ ಬೇರೆ ಹಣವೂ ಇವರಲ್ಲಿಲ್ಲ. ಬಾವಿ ಇದ್ದರೂ ನೀರಿಲ್ಲದೇ ಇರುವುದರಿಂದ ಪಕ್ಕದ ಮನೆಯಿಂದ ಹೊತ್ತು ಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಅನಾರೋಗ್ಯ ಪೀಡಿತರಾಗಿರುವ ಇವರನ್ನು ಈಗ ನೋಡಿಕೊಳ್ಳುವವರೂ ಯಾರೂ ಇಲ್ಲದಂತಾಗಿದೆ. ಮಗ ಒಮ್ಮೆ ಬಂದರೆ ಸಾಕು ಎನ್ನುತ್ತಾ ನಿತ್ಯವೂ ಕಣ್ಣೀರಿಡುತ್ತಿದ್ದಾರೆ.