ನವೀನ್ ಕಂಗಾಲಾಗಿದ್ದರು. ಹೆಂಡತಿ ತವರಿಗೆ ಹೋಗಿ ಇಪ್ಪತ್ತು ದಿನಗಳಾಗಿವೆ. ಫೋನ್ ಮಾಡಿದರೆ ಉತ್ತರವಿಲ್ಲ. ಅತ್ತೆ-ಮಾವ ಮುಗುಮ್ಮಾಗಿ ಮಾತನಾಡುತ್ತಾರೆ. ನವೀನ್, ಒಂದು ದಿನವೂ ಶಾಲೆ-ಕಾಲೇಜು-ಆಫೀಸಿನಲ್ಲಿ ಕೂಡಾ ಬೈಸಿಕೊಂಡ ವ್ಯಕ್ತಿಯಲ್ಲ. ಹೆಂಡತಿಯ ವರ್ತನೆಗೆ, ಅಮ್ಮನೇ ಕಾರಣ ಎನಿಸಿತು. ಮೊದಲು ನಿಮ್ಮಮ್ಮನಿಗೆ ಸಲಹೆ ನೀಡಿ ಎಂದಾಗ, ನವೀನ್ ತಾಯಿಗೆ ಮಗನ ಮೇಲೆ ಸಿಟ್ಟು ಬಂತು. “ಹಾಗಾದ್ರೆ, ನಾವು ಗಂಡು ಮಕ್ಕಳನ್ನು ಧಾರೆ ಎರೆದು ಕೊಡಕ್ಕಾಗುತ್ತದೆಯೇ ಮೇಡಂ? ಎಂದು ಮರುಪ್ರಶ್ನೆ ಹಾಕಿದರು. ಅತ್ತೆಗೆ ಮಗ-ಸೊಸೆಯ ಮೇಲೆ ಸೈರಣೆ ತಪ್ಪಿತ್ತೇನೋ.
ಅತ್ತೆ-ಸೊಸೆ ಮದುವೆಯ ಸಮಯದಲ್ಲಿ ಚೆನ್ನಾಗಿಯೇ ಇದ್ದವರು, ಈಗ, ಕ್ಷುಲ್ಲಕ ಕಾರಣಗಳಿಗೂ ಜಗಳವಾಡಿಕೊಳ್ಳುತ್ತಾರೆ. ಮಗುವಿಗೆ ನೀರು ಹಾಕುವಾಗ, ಹರಳೆಣ್ಣೆಯೋ, ತೆಂಗಿನ ಎಣ್ಣೆಯೋ ಎಂಬಲ್ಲಿ ಶುರುವಾದ ಚರ್ಚೆ, ಮಗುವಿನ ಹಕ್ಕನ್ನು ಪ್ರತಿಪಾದಿಸುವ ತನಕ ಬೆಳೆಯಿತು. ಮಾವ ಕೂಡಾ ಈ ವಾದಕ್ಕೆ ದನಿ ಸೇರಿಸಿದ್ದಾರೆ. ಮಾತಿಗೆ ಮಾತು ಬೆಳೆದು ಸೊಸೆ ತವರು ಸೇರಿದ್ದಾಳೆ. ನವೀನ್ ಇತ್ತ ತಾಯಿಗೂ ಹೇಳಲಾರ, ಅತ್ತ ಹೆಂಡತಿಯನ್ನೂ ಸಂತೈಸಲಾರ.
ಗಂಡ-ಹೆಂಡತಿ ರಾತ್ರಿ ಸಿನಿಮಾಕ್ಕೆ ಹೋಗಿ, ತಡವಾಗಿ ಮನೆಗೆ ಬಂದಾಗ, ಅತ್ತೆ ಡಬಾರ್ ಅಂತ ಬಾಗಿಲು ಹಾಕಿದ್ದಾರೆ. ನಂತರ, ಕೈ ಜಾರಿ ಬಾಗಿಲು ಬಿತ್ತೆಂದು ಸಮಜಾಯಿಶಿ ಕೊಟ್ಟರೂ, ನವದಂಪತಿಗೆ ತಪ್ಪಿತಸ್ಥ ಭಾವನೆ ಮೂಡಿದೆ. ಆದರೆ, ಗಂಡ-ಹೆಂಡತಿ ರಾತ್ರಿ ತಡವಾಗಿ ತಿರುಗಾಡಿಕೊಂಡು ಬಂದರೆ ತಪ್ಪೇನು ಎಂಬ ಪ್ರಶ್ನೆಯೂ ಕಾಡತೊಡಗಿತು.
ಆಫೀಸ್‌ನಿಂದ ಮನೆಗೆ ಬಂದ ತಕ್ಷಣ ನವೀನ್ ಆರಾಮವಾಗಿ ಕೂರುವಂತಿಲ್ಲ. ಅಮ್ಮ ಕಾಫಿ ಕೊಡಲು ಕೂಗಿದರೆ, ಹೆಂಡತಿ ಮಗುವಿನ ಬಗ್ಗೆ ಏನೋ ಹೇಳಲು ಶುರು ಮಾಡುತ್ತಾಳೆ. ಇವರಿಬ್ಬರ ಜಗಳಕ್ಕೆ ಜvj… ಆಗಿ ನವೀನನ ರಕ್ತದೊತ್ತಡ ಜಾಸ್ತಿಯಾಗಿದೆ. ಅಮ್ಮ, ಮಗನನ್ನು “ಹೆಂಡತಿಯ ದಾಸ’ ಎಂದರೆ, ಹೆಂಡತಿ, “ತಾಯಿಗೆ ಹೆದರಿಕೊಳ್ಳುವ ಹೇಡಿ’ ಎಂದು ಮೂದಲಿಸುತ್ತಾಳೆ.
ವಾಸ್ತವ ಏನೆಂದರೆ, ಇವರಿಬ್ಬರೂ ಮೊದಲಿನಿಂದಲೂ ಶಾಲೆ, ಕಾಲೇಜು, ಪುಸ್ತಕ, ಸ್ನೇಹಿತರು, ಹಾಸ್ಟೆಲ್, ಪಿ.ಜಿ. ಅಂತ ಸಮಯ ಕಳೆದವರು. ಕುಟುಂಬದ ವಾತಾವರಣಕ್ಕೆ ಒಗ್ಗಿಕೊಳ್ಳಲು ಗಂಡ-ಹೆಂಡಿರಿಬ್ಬರಿಗೂ ಸಮಯ ಬೇಕಾಗಿದೆ. ಜೊತೆಗೆ ಮದುವೆಯಾದ ಕೂಡಲೇ ಗರ್ಭಿಣಿಯೂ ಆಗಿದ್ದರಿಂದ, ಆಕೆಗೆ ಆಗಾಗ್ಗೆ ತವರಿಗೆ ಹೋಗುವ, ಅಮ್ಮನನ್ನು ನೋಡುವ ಆಸೆಯಾಗಿದೆ. ಹೆಂಡತಿಯ ಜೊತೆಗೆ ನವೀನನೂ ಆಕೆಯ ಮನೆಗೆ ಹೋಗುತ್ತಿದ್ದ. ಅದರಿಂದ, ಅತ್ತೆಗೆ, ಮಗ ಹೆಂಡತಿಯ ಮನೆಗೇ ಸೇರಿದವನೆಂದು ಅನ್ನಿಸತೊಡಗಿದೆ. ನನ್ನ ಜೊತೆ ಮಗ ಸಮಯ ಕಳೆಯುತ್ತಿಲ್ಲ, ಮದುವೆಯ ನಂತರ ಮಗನನ್ನು ಕಳೆದುಕೊಂಡುಬಿಟ್ಟೆ ಎಂಬ ಆತಂಕ ಕಾಡಿ, ಸೈರಣೆ ತಪ್ಪಿ, ಬೇಕಿಲ್ಲದ ಮಾತು-ನಡವಳಿಕೆಗೆ ಆಸ್ಪದಮಾಡಿಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳು ಹೆಚ್ಚುತ್ತಿರುವುದಕ್ಕೆ ಅತ್ತೆ-ಸೊಸೆಯರ ನಡುವಿನ ಸಂಬಂಧ ಜಾಳಾಗಿರುವುದೂ ಒಂದು ಕಾರಣ. ಗಂಡಿನ ತಾಯಿ, ಮಗ-ಸೊಸೆ ಪರಸ್ಪರ ಹೊಂದಿಕೊಳ್ಳಲು ಸಮಯ ಕೊಡಲೇಬೇಕು. ಅದು ತ್ಯಾಗವಲ್ಲ, ಜವಾಬ್ದಾರಿ. ಹೆಣ್ಣಿನ ತಾಯಿಗೂ ಮಗಳನ್ನು ಬೇರೆ ಮನೆಗೆ ಕಳುಹಿಸಿದ ನೋವಿರುತ್ತದೆ. ಆಕೆಯ ಪಾಲಿಗೆ, ಬಾಣಂತನ ಜವಾಬ್ದಾರಿಯುತ ಕೆಲಸ ಎಂಬುದನ್ನು ಅತ್ತೆ ಅರಿತುಕೊಳ್ಳಬೇಕು. ಸೊಸೆಯನ್ನು ಮಗಳಂತೆ ಕಾಣಿರಿ, ಸೊಸೆಯೂ ತನ್ನ ಗಾಂಭೀರ್ಯವನ್ನು ಉಳಿಸಿಕೊಳ್ಳುತ್ತಾಳೆ.
ಮದುವೆ ಮಾಡುವುದು ಮುಖ್ಯವಲ್ಲ, ಎಳೆಯ ಸಂಬಂಧವನ್ನು ಚಿಗುರೊಡೆಯಲು ಹಿರಿಯರು ಆಸ್ಪದ ಮಾಡಿಕೊಡುವುದು ಬಹಳ ಮುಖ್ಯ.
ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ