ಹಾನಗಲ್ಲ: ಹಾರಿ ಹೋಗುತ್ತಿರುವ ಮೋಡಗಳ ಕೆಳಗೆ ಬಾಡಿ ಹೋಗುತ್ತಿರುವ ಪೈರಿಗೆ ಮಳೆಯ ಹನಿಗಳು ಉದುರಿ ಮತ್ತೆ ಬೆಳೆ ಮರುಜೀವ ಪಡೆಯುವ ವಿಶ್ವಾಸ ಮೂಡಿದೆಯಾದರೂ ಹಾನಗಲ್ಲ ತಾಲೂಕಿನಲ್ಲಿ ಈ ಮಳೆ ಯಾವುದಕ್ಕೂ ಸಾಲದೆಂಬುದು ಮಾತ್ರ ಅಪ್ಪಟ ಸತ್ಯ.
ಹಾನಗಲ್ಲ ತಾಲೂಕಿನಲ್ಲಿ ಅರ್ಧಂಬರ್ಧ ಬಿತ್ತನೆ ಮುಗಿದಿದೆ. ಆದರೆ, ಅನಿಶ್ಚಿತ ಮಳೆ ರೈತನ ಮೊಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಿರು ಬಿಸಿಲಿನ ನಡುವೆ ಬಂದೇ ಬಿಟ್ತು ಎಂಬಂತೆ ಮೋಡಗಳು ಮಳೆ ತರಿಸುವ ವಿಶ್ವಾಸ ಮೂಡಿಸಿದೆಯಾದರೂ ಕೆಲ ಕ್ಷಣಗಳಲ್ಲೇ ಗಾಳಿಗೆ ಹಾರಿ ಹೋಗಿ ಮತ್ತೆ ರೈತನನ್ನು ಆತಂಕಕ್ಕೀಡು ಮಾಡುತ್ತಿವೆ.
ಕಳೆದೆರಡು ದಿನಗಳಿಂದ ಹಾನಗಲ್ಲ ತಾಲೂಕಿನಲ್ಲಿ ಬಿದ್ದ ಅಲ್ಪ ಪ್ರಮಾಣದ ಮಳೆ ಒಂದಷ್ಟು ಸಮಾಧಾನ ಉಂಟು ಮಾಡಿದ್ದರೂ ಭತ್ತ ಬೆಳೆಯಲು ಈ ಮಳೆ ಸಾಲದು. ಹಾನಗಲ್ಲ ತಾಲೂಕಿನಲ್ಲಿ ಭತ್ತದ ಕ್ಷೇತ್ರವೇ ಅಧಿಕ, ಇತ್ತೀಚಿನ ದಿನಗಳಲ್ಲಿ ಮಳೆ ಅಭಾವದಿಂದ ಗೋವಿನ ಜೋಳ ಹಾಗೂ ಕಡಿಮೆ ಮಳೆ ಆಧಾರಿತ ಬೆಳೆಗಳತ್ತ ರೈತ ಮುಖ ಮಾಡಿದ್ದಾನೆ. ಆದರೂ ಇನ್ನೂ ಶೇ.40 ಬಿತ್ತನೆಯಾಗದಿರುವುದು ರೈತನ ಆತಂಕ ಹೆಚ್ಚಿಸಿದೆ.
ಕೃಷಿ ಇಲಾಖೆ ಎಲ್ಲ ಬೀಜಗಳನ್ನು ದಾಸ್ತಾನು ಮಾಡಿಕೊಂಡು ವಿತರಿಸಲು ಕಾಯುತ್ತಿದೆ. ಮಳೆಯ ಅಭಾವದಿಂದ ರೈತನಿಗೆ ಬೀಜ ಖರೀದಿಸಲು ಮುಂದಾಗುತ್ತಿಲ್ಲ. ತಾಲೂಕಿನಲ್ಲಿ ಸದ್ಯ 11950 ಹೆಕ್ಟೇರ್ ಭತ್ತ, 158100 ಹೆಕ್ಟೇರ್ ಗೋವಿನಜೋಳ, 432 ಹೆಕ್ಟೇರ್ ಶೇಂಗಾ, 2100 ಹೆಕ್ಟೇರ್ ಸೋಯಾ ಅವರೆ, 3000 ಹೆಕ್ಟೇರ್ ಹತ್ತಿ ಮಾತ್ರ ಬಿತ್ತನೆಯಾಗಿದೆ.
ಹಾನಗಲ್ಲ ತಾಲೂಕು ಪ್ರತಿ ವರ್ಷ ಒಂದಿಲ್ಲೊಂದು ರೀತಿಯಲ್ಲಿ ಮಳೆ ಆತಂಕಕ್ಕೆ ತುತ್ತಾಗುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ. ರೈತ ತನ್ನ ಭೂಮಿಗೆ ಯಾವ ಬೆಳೆ ಆಯ್ದುಕೊಳ್ಳಬೇಕೆಂಬ ತೀರ್ಮಾನ ಮಾಡದಂತಾಗಿದ್ದಾನೆ.
ಈ ವರ್ಷವಾದರೂ ಉತ್ತಮ ಮಳೆ ಬರಲಿ. ಹರ್ಷದಾಯಕ ಬೆಳೆ ಬೆಳೆಯಲಿ. ರೈತ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಡಲಿ ಎನ್ನುವುದು ಎಲ್ಲರ ಆಶಯವಾಗಿದೆ.
•ರವಿ ಲಕ್ಷ್ಮೇಶ್ವರ