Advertisement

ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ

09:12 PM Jun 30, 2019 | Lakshmi GovindaRaj |

ಮೈಸೂರು: ದಸಂಸ ಹಲವು ರೀತಿಯ ಒಡಕುಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸತ್ವ ಕಳೆದುಕೊಂಡಿದೆ ಎಂದು ದಸಂಸ ಮೈಸೂರು ವಿಭಾಗೀಯ ಉಪ ಪ್ರಧಾನ ಸಂಚಾಲಕ ನಿಂಗರಾಜ್‌ ಮಲ್ಲಾಡಿ ಹೇಳಿದರು.

Advertisement

ನಗರದ ಇನ್ಸಿಟಿಟ್ಯೂಟ್‌ ಆಫ್ ಎಂಜಿನಿಯರ್‌ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಮೈಸೂರು ನಗರ ಶಾಖೆ ವತಿಯಿಂದ ಆಯೋಜಿಸಿದ್ದ “ದಲಿತರ ಸ್ಥಿತಿಗತಿಗಳ ಚಿಂತನಾ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಹಾಗೂ ಮೈಸೂರು ನಗರ ಸಮಿತಿ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.

ದಸಂಸ ಮೂಲ ಆಶಯದಂತೆ ಶೋಷಿತರ, ದೌರ್ಜನ್ಯಕ್ಕೆ ತುತ್ತಾದವರ ಬಳಿ ಹೋಗದೇ, ರಾಜಕೀಯ ನಾಯಕರ, ಉಳ್ಳವರ ಮನೆ ಬಾಗಿಲು ಕಾಯ್ದುಕೊಂಡು ನಮ್ಮಲ್ಲಿಯೇ ಜಾತಿ ರಾಜಕಾರಣ ಮಾಡುವ ಮೂಲಕ ಛಿದ್ರವಾಗಿ ತನ್ನ ಸತ್ವ ಕಳೆದುಕೊಂಡಿದೆ ಎಂದರು.

ದಸಂಸದ ಮೂಲ ಆಶಯದೊಂದಿಗೆ ಶೋಷಣೆಗೆ, ದೌರ್ಜನ್ಯಕ್ಕೆ ತುತ್ತಾಗಿರುವ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಮತ್ತೆ ದಸಂಸವನ್ನು ಮುನ್ನೆಡೆಸುವ ಅಗತ್ಯವಿದೆ ಎಂದು ತಿಳಿಸಿದರು.

ಪ್ರತಿನಿತ್ಯ ದಲಿತರು, ಶೋಷಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಹೀಗೆ ಮುಂದುವರಿದರೆ ನಮ್ಮ ಮೇಲಿನ ಶೋಷಣೆ, ದೌರ್ಜನ್ಯಕ್ಕೆ ಕೊನೆಯಿಲ್ಲದಂತಾಗುತ್ತದೆ. ಹೀಗಾಗಿ ನಮ್ಮ ರಕ್ಷಣೆಗಾಗಿ ದಸಂಸ ಮರುಹುಟ್ಟು ಪಡೆಯಬೇಕಿದ್ದು, ಯುವ ಸಮುದಾಯ ಈ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

Advertisement

ದಸಂಸ ಮುನ್ನೆಡೆಸಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಹೋರಾಟಕ್ಕೆ ಹೆಸರುವಾಸಿಯಾದ ಮೈಸೂರಿನಲ್ಲಿ ಒಗ್ಗಟ್ಟಿನ ಕೊರತೆ ಎದುರಾಗಿದೆ. ಹೋರಾಟ ಮಾನೋಭಾವ ಸತ್ತು ಹೋಗಿದೆ. ಪೌರಕಾರ್ಮಿಕರ ಸಂಘ, ಬಲಗೈ, ಎಡಗೈ ಅಂಗವಿಕಲರಂತಾಗಿದ್ದು, ಎಲ್ಲರೂ ಒಗ್ಗೂಡಬೇಕಿದೆ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗಿದ್ದು, ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಜನಪ್ರತಿನಿಧಿಗಳು ಸಮುದಾಯದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು. ಇಲ್ಲವಾದರೆ, ನಿಮ್ಮ ವಿರುದ್ಧವೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆದಿದ್ರಾವಿಡ ಸಮಾಜದ ಹಿರಿಯ ಮುಖಂಡ ಬಿ.ಎಸ್‌.ಸುಬ್ರಹ್ಮಣ್ಯ, ದ್ರಾವಿಡರಾದ ನಾವು ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿದ್ದು, ದೇಶವನ್ನು ಆಳಬೇಕಿತ್ತು. ಆದರೆ, ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಪೌರ ಕಾರ್ಮಿಕ ಎಂಬುದು ಅದು ಸಮಾಜವಲ್ಲ ಅದು ಹುದ್ದೆಯಾಗಿದ್ದು, ಅದು ಒಂದು ಜನಾಂಗವೆಂಬತ್ತೆ ವಿಭಜಿಸಿರುವುದು ತಪ್ಪು.

ಸಿಎಫ್ಟಿಆರ್‌ಐ, ರೈಲ್ವೆಯಲ್ಲಿ ಕೆಲಸ ಮಾಡುವವರು ಪೌರಕಾರ್ಮಿಕರ, ಹಿಂದೆ ಜಲಗಾರನೆಂದು ಆನಂತರ ಸ್ವೀಪರ್, ಸಫಾಯಿ ಎಂದು ಕರೆಯಲಾಗುತ್ತಿತ್ತು. ಇಂದು ಪೌರಕಾರ್ಮಿಕ ಎಂದು ಕರೆಯಲಾಗುತ್ತಿದ್ದು, ಇದು ಸರಿಯಲ್ಲ. ಇದರ ಬದಲಿಗೆ ಪೌರಬಂಧು ಎಂದು ಕರೆಯಲು ಸೂಚಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆಂದರು.

ನಂಜನಗೂಡು ನಗರಸಭಾ ಸದಸ್ಯ ದೇವ.ಪಿ, ಕೆ.ಆರ್‌.ನಗರ ಪುರಸಭಾ ಸದಸ್ಯ ಶಂಕರ್‌, ಜಿಲ್ಲಾ ಪಜಾತಿ, ಪಂಗಡಗಳ ಜಾಗೃತಿ ಸದಸ್ಯೆ ಪುಟ್ಟಲಕ್ಷ್ಮಮ್ಮ, ಕೆ.ಆರ್‌.ನಗರ ಹೆಬ್ಟಾಳು ಸದಸ್ಯ ಎಚ್‌.ಬಿ.ದಿವಾಕರ್‌, ಜ್ಯೋತಿನಗರ ಸಿ.ಆರ್‌.ರಾಚಯ್ಯ, ಹೆಬ್ಟಾಳ್‌ ಕಾಲೋನಿ ಕೆ.ನಂಜಪ್ಪ ಬಸವನಗುಡಿ ಇತರ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಶ್ರೀರಂಗಪಟ್ಟಣ ಪುರಸಭಾ ಮಾಜಿ ಅಧ್ಯಕ್ಷ ಆರ್‌.ಕೃಷ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಕಾರ್ಯ ಬಸವಣ್ಣ, ಮೈಸೂರು ನಗರ ಸಂಚಾಲಕ ಸಿ.ಮೋಹನ್‌ಕುಮಾರ್‌ ಹೆಬ್ಬಾಳ್‌, ಜಿಲ್ಲಾ ಸಂಘಟನಾ ಸಂಚಾಲಕರಾದ ದೇವೇಂದ್ರ ಕೆ.ಎಂ.ವಾಡಿ, ಚಾಮರಾಜು ಇಲವಾಲ, ಗೋವಿಂದರಾಜು ಮತ್ತಿತರರಿದ್ದರು.

ಸಮುದಾಯದ ನೋವಿಗೆ ಸ್ಪಂದಿಸಿ: ದಲಿತರಲ್ಲಿ ಎಡ, ಬಲ, ಪೌರಕಾರ್ಮಿಕರು, ಅಲೆಮಾರಿ ಸಮುದಾಯ, ಬೋವಿ ಹೀಗೆ ಜಾತಿಗೊಂದು ಸಂಘವನ್ನು ಕಟ್ಟಿಕೊಳ್ಳುವ ಕಾರ್ಯವಾಗುತ್ತಿದ್ದು, ಇದಕ್ಕೆ ದಸಂಸ ನಾಯಕರು ಈ ಸಮುದಾಯದ ನೋವುಗಳಿಗೆ ಸ್ಪಂದಿಸದೇ, ಅವುಗಳನ್ನು ಹೊರಗಿಡುವ ಕಾರ್ಯ ಮಾಡಿರುವುದು ಕಾರಣವೆನಿಸುತ್ತದೆ. ನಾವು ಬೇರೆಯವರನ್ನು ಗೌರವಿಸದಿದ್ದರೆ, ಒಳಗೊಳ್ಳದಿದ್ದರೆ ಸಹಜವಾಗಿ ಎಲ್ಲರೂ ದೂರವಾಗುತ್ತಾರೆ ಎಂದು ದಸಂಸ ಮೈಸೂರು ವಿಭಾಗೀಯ ಉಪ ಪ್ರಧಾನ ಸಂಚಾಲಕ ನಿಂಗರಾಜ್‌ ಮಲ್ಲಾಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next