Advertisement

ಬಂದ್‌ಗೆ ನೀರಸ ಪ್ರತಿಕ್ರಿಯೆ

11:49 AM May 29, 2018 | |

ದಾವಣಗೆರೆ: ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಸೋಮವಾರ ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ದಾವಣಗೆರೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಲು ಮುಂದಾಗಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌ .ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಒಳಗೊಂಡಂತೆ 42 ಜನ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಖಾಸಗಿ ಬಸ್‌ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ಬಸ್‌ ಚಾಲಕರು, ನಿರ್ವಾಹಕರಿಗೆ ಮನವಿ ಮಾಡಿದ ಸಂಬಂಧ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬಲವಂತ ಮಾಡುವಂತಿಲ್ಲ ಎಂದು ಪೊಲೀಸರು ಸೂಚಿಸಿದರೆ. ಬಲವಂತ ಮಾಡುತ್ತಿಲ್ಲ. ಮನವಿ ಮಾಡುತ್ತಿದ್ದೇವೆ ಎಂಬುದಾಗಿ ಬಿಜೆಪಿ ಕಾರ್ಯಕರ್ತರು ಸಮಜಾಯಿಷಿ ನೀಡಿದರು.

ಕೆಲ ಕಾಲದ ನಂತರ ಪರಿಸ್ಥಿತಿ ತಿಳಿಯಾಯಿತು. ನಗರದ ಕೆಲ ಭಾಗದಲ್ಲಿ ಬೈಕ್‌ ರ್ಯಾಲಿ ನಡೆಸಿದ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.

ದಾವಣಗೆರೆಯಲ್ಲಿ ಕೆಲ ಹೊತ್ತು ಖಾಸಗಿ ನಗರ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಕಾರ್ಯಕರ್ತರು ಬಂದಾಗ ಅಂಗಡಿ, ಹೋಟೆಲ್‌ ಬಾಗಿಲು ಹಾಕುವುದು ಮತ್ತೆ ತೆರೆಯುವುದು ನಡದೇ ಇತ್ತು. ಒಟ್ಟಾರೆ ಯಾಗಿ ದಾವಣಗೆರೆಯಲ್ಲಿ ಬಂದ್‌ ನೀರಸವಾಗಿತ್ತು. ವಾಹನಗಳ ಹಾಗೂ ಜನ ಸಂಚಾರ ಎಂದಿನಂತೆ ಇತ್ತು. ಸರ್ಕಾರಿ ಕಚೇರಿ,
ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. 

Advertisement

ಹೊನ್ನಾಳಿಯಲ್ಲಿ ಬಂದ್‌ ಹಿನ್ನೆಲೆಯಲ್ಲಿ ಕೆಲ ಅಂಗಡಿ, ಹೋಟೆಲ್‌ ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಲಾಗಿತ್ತು. ಖಾಸಗಿ ಬಸ್‌ ನಿಲ್ದಾಣದಲ್ಲಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತವರ ಬೆಂಬಲಿಗರನ್ನು ಬಂಧಿಸಿದ ಪೊಲೀಸರು, ನಂತರ ಬಿಡುಗಡೆಗೊಳಿಸಿದರು. 

ವ್ಯಾಪಾರ, ವಹಿವಾಟು, ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಿದವು. ಚನ್ನಗಿರಿಯಲ್ಲೂ ಬಂದ್‌ಗೆ ಅಂತಹ ಬೆಂಬಲ ವ್ಯಕ್ತವಾಗಲಿಲ್ಲ. ಬಿಜೆಪಿ ಕಾರ್ಯಕರ್ತರು ಅಂಗಡಿ, ಹೋಟೆಲ್‌ ಇತರೆ ವಾಣಿಜ್ಯ
ಸಮುತ್ಛಯ ಮುಚ್ಚುವಂತೆ ಮನವಿ ಮಾಡುತ್ತಿದ್ದ ಸಂದರ್ಭದಲ್ಲಿ ಚಪ್ಪಲಿ ಅಂಗಡಿ ಮಾಲಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಬಲವಂತವಾಗಿ ಬಾಗಿಲು ಹಾಕಿಸಲು ಮುಂದಾದರು ಎಂಬುದಾಗಿ ಮಾಲಿಕರು ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಿಸಿದರು. ಆ ಘಟನೆ ಹೊರತುಪಡಿಸಿ ಜನ ಜೀವನ ಮಾಮೂಲಾಗಿತ್ತು. ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ನಂತತ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. 

ಹರಪನಹಳ್ಳಿಯಲ್ಲಿ ಬಂದ್‌ ನೀರಸವಾಗಿತ್ತು. ವಿಶೇಷವೆಂದರೆ ಶಾಸಕ ಜಿ. ಕರುಣಾಕರರೆಡ್ಡಿ ಬಂದ್‌ ನಲ್ಲೂ ಭಾಗವಹಿಸಲಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗೆ ಅಭಿನಂದನೆ ಸಲ್ಲಿಸಿ ಹೋದ ಶಾಸಕರು ಹರಪನಹಳ್ಳಿಗೆ ಕಾಲಿಡದ ಕಾರಣಕ್ಕೆ ಬಿಜೆಪಿಯ ತಾಲೂಕು ಘಟಕದ ನೇತೃತ್ವದಲ್ಲಿ ಬಂದ್‌ ನಡೆಸಲಾಯಿತು. ಎಂದಿನಂತೆ ವಾಹನ, ಆಟೋರಿಕ್ಷಾ ಸಂಚಾರ ಇತ್ತು. ವ್ಯಾಪಾರ ವಹಿವಾಟುಗೆ ಯಾವುದೇ ಅಡೆತಡೆ ಇರಲಿಲ್ಲ. ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್‌ ಕಾರ್ಯ ನಿರ್ವಹಿಸಿದವು.

ಹರಿಹರದಲ್ಲೂ ಬಂದ್‌ ನೀರಸವಾಗಿತ್ತು. ಕೆಲವು ಅಂಗಡಿ, ಹೋಟೆಲ್‌ ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದನ್ನು ಬಿಟ್ಟರೆ ಜನ ಜೀವನ ಸಾಮಾನ್ಯವಾಗಿತ್ತು. ವಾಹನ ಸಂಚಾರ, ಅಂಗಡಿ, ಹೋಟೆಲ್‌, ಶಾಲಾ-ಕಾಲೇಜು, ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕ್‌ಗಳಲ್ಲಿ ಎಂದಿನಂತೆ ಕೆಲಸ ನಿರ್ವಹಿಸಲಾಯಿತು. ಬಂದ್‌ ಕರೆಗೆ ಹೆಚ್ಚು ಸ್ಪಂದನೆ ದೊರೆಯಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next