Advertisement

ಬೂತ್‌ ಮಟ್ಟದ್ದಾಯಿತು, ಈಗ ಪೇಜ್‌ ಪ್ರಮುಖ್‌ ನೇಮಕ

10:12 AM Jan 01, 2018 | Team Udayavani |

ಬೆಂಗಳೂರು: ಬೂತ್‌ ಮಟ್ಟದ ಸಂಘಟನೆ ಬಳಿಕ ಇದೀಗ “ಪೇಜ್‌ (ಪುಟ) ಮಟ್ಟದ ಸಂಘಟನೆ’ಗೆ ಬಿಜೆಪಿ ಮುಂದಾಗಿದೆ. ಅಂದರೆ ಮತದಾರರ ಪಟ್ಟಿಯ ಒಂದೊಂದು ಪುಟಕ್ಕೂ ಒಬ್ಬೊಬ್ಬ ಕಾರ್ಯಕರ್ತನನ್ನು ನೇಮಿಸಿ ಮತದಾರರ ಜತೆ ನಿರಂತರ ಸಂಪರ್ಕ ಹೊಂದಲು ನಿರ್ಧರಿಸಿದೆ.

Advertisement

ಶನಿವಾರ ಯಲಹಂಕ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳು, ಶಾಸಕರು, ಸಂಸದರ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಬಿಜೆಪಿಯಲ್ಲಿ ಬೂತ್‌ ಮಟ್ಟದ ಕಮಿಟಿಗಳನ್ನು ರಚಿಸಲಾಗುತ್ತಿದ್ದು, ಬಹುತೇಕ ಬೂತ್‌ ಕಮಿಟಿಗಳು ಈಗಾಗಲೇ ಕೆಲಸ ಆರಂಭಿಸಿವೆ. ಇದರ ಜತೆಗೆ ಪೇಜ್‌ ಪ್ರಮುಖರನ್ನು ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ಬಳಿಕ ಕೇಂದ್ರ ಸಚಿವ ಅನಂತ  ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.  ಅದರಂತೆ ಫೆಬ್ರವರಿ ಪೂರ್ತಿ ಆಯಾ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ತೆಗೆದುಕೊಳ್ಳಲಾಗುತ್ತದೆ. ನಂತರ ಪ್ರತಿ ಬೂತ್‌ನಲ್ಲಿ 20 ಮಂದಿ ಪೇಜ್‌ ಪ್ರಮುಖರನ್ನು ನೇಮಕ ಮಾಡಲಾಗುತ್ತದೆ. ಇವರಿಗೆ ಮತದಾರರ  ಪಟ್ಟಿಯ ಒಂದೊಂದು ಹಾಳೆಯನ್ನು ತೆಗೆದು ನೀಡಲಾಗುತ್ತದೆ. ಆ ಹಾಳೆಯಲ್ಲಿರುವ ಕುಟುಂಬಗಳೊಂದಿಗೆ (20ರಿಂದ 30 ಕುಟುಂಬಗಳು) ಪೇಜ್‌ ಪ್ರಮುಖರು ನಿರಂತರ ಸಂಪರ್ಕದಲ್ಲಿ ಇರುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಎಲ್ಲಾ ಮತಗಟ್ಟೆಯಲ್ಲಿ ಹೊಸ ಸದಸ್ಯರ ನೋಂದಣಿ ಮೂಲಕ ನವಶಕ್ತಿ ಸಮಾವೇಶ ಮಾಡಲಿದ್ದೇವೆ. 210 ವಿಧಾನಸಭಾ ಕ್ಷೇತ್ರಗಳಲ್ಲಿ ನವಶಕ್ತಿ ಸಮಾವೇಶಕ್ಕೆ ದಿನಾಂಕ ನಿಗದಿಯಾಗಿದೆ. ಇದಲ್ಲದೆ ಫೆ.1ರಿಂದ 28ರ ವರೆಗೆ ರಾಜ್ಯದ ಆಯ್ದ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಒಬಿಸಿ, ದಲಿತ, ಮಹಿಳಾ ಸಮಾವೇಶ ನಡೆಸಲಿದ್ದೇವೆ ಎಂದರು.  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆದು 150ಕ್ಕೂ ಅಧಿಕ ಸ್ಥಾನಗಳೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೇಕಾದ ಕಾರ್ಯತಂತ್ರವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌  ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ರೂಪಿಸಿದ್ದಾರೆ. ಸಭೆಯಲ್ಲಿ ರಾಜ್ಯ ಸರ್ಕಾರದ ದುರಾಡಳಿತ ಕೊನೆಗಾಣಿಸಲು ಬೇಕಾದ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸಭೆಯ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯ ನಡೆಯಲಿದೆ. ಬೂತ್‌ ಮತ್ತು ವಿಧಾನಸಭಾ ವ್ಯಾಪ್ತಿಯೊಳಗೆ ನಮ್ಮ ಕಾರ್ಯತಂತ್ರ
ಸಾಗಲಿದೆ ಎಂದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕದ ದು:ಸ್ಥಿತಿಗೆ ಕಾರಣವಾಗಿದೆ. ಇಂತಹ ಸರ್ಕಾರಕ್ಕೆ ಅಂತ್ಯ ಹಾಡಿ, ಬಿಜೆಪಿಗೆ ಜನಾದೇಶ ಕೋರುವ ನಿಟ್ಟಿನಲ್ಲಿ ನಮ್ಮ ಕಾರ್ಯ ಸಾಗಲಿದೆ ಎಂದು ಹೇಳಿದರು. 

ಸಭೆಯ ನಿರ್ಣಯ: ಜ.6ರೊಳಗೆ ವಿಧಾನಸಭಾ ಕ್ಷೇತ್ರವಾರು ಕಾಂಗ್ರೆಸ್‌ ದುರಾಡಳಿತದ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಿದ್ಧಪಡಿಸುವುದು. ಫೆ.15ರಿಂದ 22ರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಯುವಮೋರ್ಚಾ ವತಿಯಿಂದ ಜನಜಾಗೃತಿ ಸಮಾವೇಶ ಹಮ್ಮಿಕೊಂಡು ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬ ಮಾಹಿತಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ವಿಪ ಪ್ರತಿಪಕ್ಷ ನಾಯಕ ಈಶ್ವರಪ್ಪ ಇದ್ದರು.

ಕರ್ನಾಟಕ, ತ್ರಿಪುರ, ಮೇಘಾಲಯ ಬಿಜೆಪಿ ಪಾಲಾಗಲಿದೆ 2014ರಲ್ಲಿ ದೇಶದ 6 ರಾಜ್ಯದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು. ಈಗ ಎನ್‌ಡಿಎ ಮಿತ್ರಕೂಟ ಸರ್ಕಾರ ಸೇರಿ 19 ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕರ್ನಾಟಕದಲ್ಲಿ ಬಿಎಸ್‌ವೈ ನೇತೃತ್ವದಲ್ಲಿ 150 
ಕ್ಕೂ ಅಧಿಕ ಸೀಟು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಇದರ ಜತೆಗೆ ಮೇಘಾಲಯ ಹಾಗೂ ತ್ರಿಪುರದಲ್ಲೂ ಗೆಲ್ಲಲು ಬೇಕಾದ ತಂತ್ರವನ್ನು ಈಗಾಗಲೇ ರೂಪಿಸಿ  ದ್ದೇವೆಂದು ಸಚಿವ ಅನಂತ್‌ ಕುಮಾರ್‌ ಹೇಳಿದರು.

Advertisement

ಬಿಜೆಪಿ ಸಮಾವೇಶ ಭರಾಟೆ
ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದೆ. ಇದಾದ ಕೂಡಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆ.15ರಿಂದ ಯುವಮೋರ್ಚಾದಿಂದ ಜನಜಾಗೃತಿ ಯಾತ್ರೆ, ಬೂತ್‌ಗಳಲ್ಲಿ ಸದಸ್ಯತ್ವಕ್ಕಾಗಿ ನವಶಕ್ತಿ ಸಮಾವೇಶ, ಫೆ.1ರಿಂದ 28ರವರೆಗೆ ಎಲ್ಲಾ ವಿಧಾನಸಭಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಒಬಿಸಿ, ದಲಿತರ ಹಾಗೂ ಮಹಿಳೆಯರ ಸಮಾವೇಶ ನಡೆಸುವ ತೀರ್ಮಾನವನ್ನು ರಾಜ್ಯ ಬಿಜೆಪಿ ತೆಗೆದುಕೊಂಡಿದೆ.

ಕಾಂಗ್ರೆಸ್‌ ಸರ್ಕಾರದ ದುರಾಡಳಿತವನ್ನು ಕಿತ್ತೆಸೆಯುವುದು ಹೇಗೆ ಮತ್ತು ಮುಂದಿನ 60 ದಿನದಲ್ಲಿ ಏನು ಮಾಡಬೇಕೆಂಬ
ಸೂಚನೆಯನ್ನು ಅಮಿತ್‌ ಶಾ ನೀಡಿದ್ದಾರೆ. ಪರಿವರ್ತನಾ ಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸೂಚನೆಯಂತೆ
ಚುನಾವಣೆ ಗೆಲ್ಲಲು ಸಿದ್ಧತೆ ನಡೆಯುತ್ತಿದೆ.

 ●ಅನಂತ ಕುಮಾರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next