Advertisement
ಮೊದಲು ನಾನು ಬೆಳ್ಳಾರೆಯ ಬಗ್ಗೆ ಕೇಳಿದ್ದು ನಿರಂಜನರ ಕಲ್ಯಾಣಸ್ವಾಮಿ ಎಂಬ ಕಾದಂಬರಿಯ ಮೂಲಕ. ಕಲ್ಯಾಣಸ್ವಾಮಿ ಕೊಡಗಿನಿಂದ ಸೈನ್ಯ ತೆಗೆದುಕೊಂಡು ಹೊರಟು ಬೆಳ್ಳಾರೆಯ ಮೂಲಕ ದಕ್ಷಿಣಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ ಎಂದು ನಿರಂಜನರು ತಮ್ಮ ಕಾದಂಬರಿಯಲ್ಲಿ ಬರೆಯುತ್ತಾರೆ. ಬ್ರಿಟಿಷರು ಅವನನ್ನು ಬಂಧಿಸಿ ಮಂಗಳೂರಿನಲ್ಲಿ ಬಾವುಟಗುಡ್ಡೆಯ ಮೇಲೆ ಗಲ್ಲಿಗೇರಿಸಿದ ತನಕದ ಕತೆಯನ್ನು ನಿರಂಜನರು ಅತ್ಯಂತ ರೋಚಕವಾಗಿ ಬರೆದಿದ್ದಾರೆ. ಅವನೊಬ್ಬ ಕೊಳ್ಳೆಹೊಡೆಯುವ ಪುಂಡ, ದರೋಡೆಕೋರ ಎಂದು ಚರಿತ್ರೆ ಬರೆದಿದ್ದಾರಾದರೂ ನಿರಂಜನರು ಅವನೊಬ್ಬ ಸ್ವಾತಂತ್ರ್ಯ ಸೇನಾನಿ, ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1836)ದ ರೂವಾರಿ ಎಂದು ಹೇಳುತ್ತಾರೆ. ಬೇಕಲ ರಾಮನಾಯಕರ ಐತಿಹ್ಯದ ಕತೆಗಳು ಎಂಬ ಕೃತಿಯಲ್ಲಿ ಕಲ್ಯಾಣಪ್ಪನ ಕಾಟುಕಾಯಿ ಎಂಬ ಕತೆಯಿದೆ. ಅದರಲ್ಲಿ ಬೆಳ್ಳಾರೆ ಬರುತ್ತದೋ ಇಲ್ಲವೋ ಈಗ ನನಗೆ ನೆನಪಿಲ್ಲ. ಮಾಸ್ತಿಯವರ ಚಿಕವೀರರಾಜೇಂದ್ರ ಕಾದಂಬರಿಯಲ್ಲಿ ಕಲ್ಯಾಣಸ್ವಾಮಿಯ ಪ್ರಸ್ತಾಪವಿದ್ದರೂ ಅವನು ಕಾದಂಬರಿಯ ನಾಯಕನಲ್ಲದೇ ಇರುವುದರಿಂದ ಹೆಚ್ಚಿನ ವಿವರಗಳಿಲ್ಲ. ಕಲ್ಯಾಣಪ್ಪನ ಬಗ್ಗೆ ಲಾವಣಿಗಳಿದ್ದಾವೆ, ನಾಟಕಗಳನ್ನು ಬರೆದು ಆಡಿದ್ದಾರೆ, ಹೆಚ್ಚಿನ ವಿವರಗಳಿಗಾಗಿ ಸಂಪಾಜೆಯ ಎನ್. ಎಸ್. ದೇವಿಪ್ರಸಾದರು 1999ರಲ್ಲಿ ಪ್ರಕಟಿಸಿದ ಅಮರಸುಳ್ಯದ ಸ್ವಾತಂತ್ರ್ಯ ಸಮರ ಎಂಬ ಕೃತಿಯನ್ನೂ ಓದಬಹುದು. ಈ ಬಗ್ಗೆ ನನಗೆ ಕುತೂಹಲ ಮೂಡಲು ಕಾರಣ ಈ ಕಲ್ಯಾಣಪ್ಪ ನನ್ನ ಊರಿಗೂ ಬಂದು ಕೊಳ್ಳೆ ಹೊಡೆಯಬಹುದು ಎನ್ನುವ ಭೀತಿಯಿಂದ ನಮ್ಮ ಊರಿನ ಜನರು ತಮ್ಮ ಬಂಗಾರದ ಆಭರಣಗಳನ್ನು ಬಾವಿಗಳಲ್ಲಿ ಎಸೆದದ್ದನ್ನೂ, ಅಕ್ಕಿ ಮುಂತಾದ ದವಸಧಾನ್ಯಗಳನ್ನು ಗುಹೆಗಳಲ್ಲಿ ಬಚ್ಚಿಟ್ಟದ್ದನ್ನೂ ಹೇಳಿ ಈಗಲೂ ಇರುವ ಆ ಗುಹೆಗಳನ್ನು ಉಕ್ಕಿನಡ್ಕ ದೇವಣ್ಣ ಎನ್ನುವವರು ತೋರಿಸಿದ್ದರು.
ಊರು ಪ್ರವೇಶಿಸಿದರೆ ಕಣ್ಣಿಗೆ ಕುಕ್ಕುವಂತೆ ಕಾಣುವುದು ಸ್ವತ್ಛತೆಗೆ ಬದ್ಧವಾಗಿರುವ ವಾತಾವರಣ. ರಸ್ತೆಯ ಎರಡೂ ಪಕ್ಕಗಳಲ್ಲಿ ಹೊಸ ವಿನ್ಯಾಸದ ಕಟ್ಟಡಗಳಿದ್ದು, ದಂಡಿಯಾಗಿ ವ್ಯಾಪಾರ ಮಾಡುವ ಮಂಡಿಗಳಿದ್ದಾವೆ. ಅವುಗಳ ಹಿಂದೆ ಇರುವ ಹಳೆಯ ವಾಸ್ತುವಿರುವ ಮನೆಗಳಿಗೆ ಹೋಗಲು ಆ ಕಟ್ಟಡಗಳ ಸಂದಿಯಿಂದ ಹೋಗಬೇಕು. ಸುಂದರವಾದ ಹಜಾರಗಳುಳ್ಳ ಹಂಚಿನ ಮನೆಗಳು. ಪಕ್ಕದಲ್ಲಿ ಬಾವಿ. ಊರಿನ ಸುತ್ತ ಅಡಿಕೆ, ತೆಂಗು, ರಬ್ಬರ್-ಕೋಕೋ ತೋಟಗಳು. ಆ ತೋಟಗಳಲ್ಲಿ ಅವಲ್ಲದೇ ಬಾಳೆ, ಕರಿಮೆಣಸು ಇತ್ಯಾದಿ ಬೆಳೆಯುತ್ತಾರೆ. ಅದರಾಚೆ ಹಸುರಾದ ಕಾಡು.
Related Articles
Advertisement
ನನ್ನ ಆಸಕ್ತಿ ಮೂಡಿದ್ದು ಬಂಗ್ಲೆಗುಡ್ಡೆ ಎನ್ನುವ ಪ್ರದೇಶ. ಅಲ್ಲಿ ಒಂದು ಹಳೆಯ ಕಟ್ಟಡವಿದೆ. ಹಿಂದೆ ಅಲ್ಲಿ ಬ್ರಿಟಿಷರು ವಾಸವಿದ್ದು ಸುತ್ತಮುತ್ತಣ ಊರವರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು. ಅವರ ಖಜಾನೆ ಅಲ್ಲಿಯೇ ಇತ್ತು. ಕಲ್ಯಾಣಪ್ಪ ಇದೇ ಖಜಾನೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ಬ್ರಿಟಿಷರು ತಮ್ಮ ಸಕೀìಟು ಮಾಡುತ್ತ ಆ ದಿನಗಳಲ್ಲಿ ಅಲ್ಲಿಯೇ ವಾಸಮಾಡಲು ಬರುತ್ತಿದ್ದರಂತೆ. ಪುತ್ತೂರಿನಿಂದ ಸಂಪಾಜೆಯ ಮೂಲಕ ಮಡಿಕೇರಿಗೆ ಹೋಗುವ ಹೈವೇ ಆದ ಮೇಲೆ ಸುಳ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದುದರಿಂದ ಬೆಳ್ಳಾರೆಯ ಪ್ರಾಮುಖ್ಯ ಕಮ್ಮಿಯಾಯಿತು. ಬಂಗ್ಲೆಗುಡ್ಡೆಯ ಮೇಲೆ ನಿಂತು ಸುತ್ತ ನೋಡಿದರೆ ಸೊಗಸಾದ ದೃಶ್ಯ ಕಾಣಿಸುತ್ತದೆಯಾದುದರಿಂದ ಬ್ರಿಟಿಷರಿಗೆ ಆ ಪ್ರದೇಶದ ಮೇಲೆ ಒಲವು ಹುಟ್ಟಿರಬೇಕು.
ಇಲ್ಲಿನ ಇನ್ನೊಂದು ಆಕರ್ಷಣೆಯೆಂದರೆ ಬೆಳ್ಳಾರೆಯಲ್ಲಿ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರೆಂಬವರು ತಮ್ಮ ದಿವಂಗತ ಪತ್ನಿಯ ಹೆಸರಿನಲ್ಲಿ ಸ್ಥಾಪಿಸಿದ ಒಂದು ಗ್ರಂಥಾಲಯ. ಬೆಳ್ಳಾರೆ ಪೇಟೆಯ ತುಸು ಹೊರವಲಯದಲ್ಲಿರುವ ಈ ಗ್ರಂಥಾಲಯದಲ್ಲಿ ಅಪೂರ್ವವಾದ ಹಳೆಯ ಗ್ರಂಥಗಳಿದ್ದಾವಲ್ಲದೇ ಹಳೆಯ ಪತ್ರಿಕೆಗಳೂ ಲಭ್ಯವಿವೆ. ಸಂಶೋಧಕರಿಗೆ ಇದರಿಂದ ಉಪಯೋಗವಾಗಬಹುದು. ಈ ಸುಸಜ್ಜಿತ ಗ್ರಂಥಾಲಯ ಶ್ಯಾನುಭಾಗರ ವೈಯುಕ್ತಿಕ ಆಸಕ್ತಿಯ ಫಲ. ಅವರಿಗೀಗ ಎಂಬತ್ತರ ವಯಸ್ಸು ದಾಟಿದೆ. ಆದರೂ ಚಟುವಟಿಕೆಯಿಂದ ಓಡಾಡುವ, ಸಾಹಿತ್ಯ ಮತ್ತು ಸಂಗೀತಗಳಲ್ಲಿ ಅಪಾರ ಆಸಕ್ತಿ ಇರುವ, ಬರವಣಿಗೆಯನ್ನೂ ಮಾಡುತ್ತಿರುವ, ವ್ಯವಸಾಯದಲ್ಲಿ ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾದ ಅವರು ವರ್ಷಕ್ಕೊಮ್ಮೆ ಕೆಲವು ಸಾಹಿತಿಗಳನ್ನು ಕರೆದು ಚಿಕ್ಕ ಮಟ್ಟದ ಸಾಹಿತ್ಯೋತ್ಸವ ನಡೆಸುತ್ತಿರುತ್ತಾರೆ ಎಂಬುದನ್ನು ಕೇಳಿಬಲ್ಲೆ. ಶ್ಯಾನುಭಾಗರ ಗ್ರಂಥಾಲಯ ನೋಡಿದಾಗ ನನಗೆ ಕರ್ನಾಟಕದ ಇತರ ಕೆಲವು ಖಾಸಗಿ ಗ್ರಂಥಾಲಯಗಳ ನೆನಪಾಗುತ್ತದೆ.
ಹೀಗೆ ಖಾಸಗಿ ಗ್ರಂಥಾಲಯ ಮಾಡುವ ಹವ್ಯಾಸ ಕೆಲವರಿಗಿದೆ. ಯಾರ ಬಳಿಯಾದರೂ ಹಳೆಯ, ಅಪರೂಪದ ಪುಸ್ತಕಗಳಿದ್ದರೆ ಅವರನ್ನು ಸಂಪರ್ಕಿಸಿ ಖರೀದಿ ಮಾಡಿ ರಕ್ಷಿಸಿಡುತ್ತಾರೆ. ಅವುಗಳನ್ನೆಲ್ಲ ಓದುತ್ತಾರೆ ಎನ್ನುವ ಹಾಗಿಲ್ಲ. ಆದರೆ, ಮುದ್ರಣಗೊಂಡ ಯಾವುದೂ ಅವರಿಗೆ ತ್ಯಾಜ್ಯದ ವಸ್ತುವಲ್ಲ. ಅದಕ್ಕಾಗಿ ಅವರು ಬಹಳ ಹಣವನ್ನು ವ್ಯಯಿಸುತ್ತಾರೆ. ಬಹಳ ಹಿಂದೆ ಮಂಗಳೂರಿನಲ್ಲಿ ಕುಲಕರ್ಣಿ ಎಂಬವರ ಬಳಿ ಇಂಥ ಒಂದು ಖಾಸಗಿ ಗ್ರಂಥಾಲಯವಿತ್ತೆಂದು ಕೇಳಿದ್ದೆ. ಯಾವುದಾದರೂ ಅಪರೂಪದ ಪುಸ್ತಕ ಬೇಕಾಗಿದ್ದಲ್ಲಿ ಕುಲಕರ್ಣಿಯವರ ಬಳಿ ಹೋಗಿ ಎಂದು ಹೇಳುತ್ತಿದ್ದರು. (ನನಗೆ ಆ ಗ್ರಂಥಾಲಯವನ್ನು ನೋಡುವುದು ಸಾಧ್ಯವಾಗಲಿಲ್ಲ) ಸುರತ್ಕಲ್‌ನಲ್ಲಿ ಶೇಖರ ಇಡ್ಯರ ಬಳಿ ಅಂಥ ಒಂದು ಅಪೂರ್ವ ಗ್ರಂಥಾಲಯವಿತ್ತು. ಅವುಗಳನ್ನು ಅವರ ಮರಣಾನಂತರ ಸ್ಥಳೀಯ ವಿದ್ಯಾದಾಯಿನಿ ಕಾಲೇಜಿಗೆ ಅವರ ಪತ್ನಿ ದಾನ ಮಾಡಿದರು. ಆಗ, ಅವರು ಸಂಗ್ರಹಿಸಿಟ್ಟ ಅನೇಕ ಪತ್ರಿಕೆಗಳು ಗೆದ್ದಲು ಹಿಡಿದಿದ್ದುದರಿಂದ ಸುಡಬೇಕಾಯಿತಂತೆ. ಬೆಂಗಳೂರಿನಲ್ಲಿ ನನಗೆ ತಿಳಿದಿರುವ ಮಾಯಣ್ಣ ಹಾಗೂ ನಾರಾಯಣಸ್ವಾಮಿ ಎಂಬವರ ಬಳಿ ಹತ್ತತ್ತು ಸಾವಿರಕ್ಕಿಂತಲೂ ಹೆಚ್ಚು ಅಪರೂಪದ ಗ್ರಂಥಗಳಿ¨ªಾವೆ. ಅವರು ಅವುಗಳನ್ನು ಯಾವುವನ್ನೂ ಮಾರುವುದಿಲ್ಲ. ಆದರೆ, ಅಲ್ಲೇ ಕೂತು ಓದಲು ಸಾಧ್ಯವಿದೆ.
ಕರ್ನಾಟಕದಲ್ಲಿ ಇಂಥ ಬಹುದೊಡ್ಡ ಖಾಸಗಿ ಗ್ರಂಥಾಲಯ ಮೈಸೂರಿನ ಬಳಿಯ ಪಾಂಡವಪುರದಲ್ಲಿರುವ ಕೃಷ್ಣಗೌಡರ ಗ್ರಂಥಾಲಯ. ಅಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಪುಸ್ತಕಗಳಿವೆ. ಕೆಲವು ವರ್ಷಗಳ ಹಿಂದೆ ಪ್ರಸಿದ್ಧ ಉದ್ಯಮಿಯಾದ ಖೋಡೆಯವರು ಆ ಮಾರ್ಗದಲ್ಲಿ ಹೋಗುತ್ತಿದ್ದಾಗ ನೋಡಿ ಕೃಷ್ಣ ಗೌಡರಿಗೆ ಒಂದು ಜಾಗ ಖರೀದಿಸಿ ದೊಡ್ಡದೊಂದು ಕಟ್ಟಡ ಕಟ್ಟಿಸಿ ಕೊಟ್ಟುದರಿಂದ ಪಾಂಡವಪುರದ ಲೈಬ್ರೆರಿ ಈಗ ಸುಸಜ್ಜಿತವಾಗಿದೆ.
ಇದು ತಣ್ಣಗೆ ಕನ್ನಡ ಸೇವೆ ಮಾಡುವ ಪರಿಚಾರಿಕೆ. ಇವರಿಗೆ ಯಾವ ಫಲಾಪೇಕ್ಷೆಯೂ ಇಲ್ಲ. ಹೆಸರು ಬರಬೇಕೆಂಬ ಹಪಾಹಪಿ ಇಲ್ಲ. ಎಂದೋ ಒಮ್ಮೊಮ್ಮೆ ಯಾರಾದರೊಬ್ಬರು ಬರುತ್ತಾರೆ. ತಮ್ಮ ಸಂಶೋಧನೆಗೋ ಜ್ಞಾನದ ಹಸಿವಿನಿಂದಲೋ ಈ ಗ್ರಂಥಾಲಯಗಳಿಗೆ ಭೇಟಿ ಕೊಟ್ಟು ತಮಗೆ ಬೇಕಾದ ಪುಸ್ತಕಗಳಿವೆಯೇ ಎಂದು ವಿಚಾರಿಸುತ್ತಾರೆ. ಇದ್ದರೆ ಅದನ್ನು ಅಲ್ಲಿಯೇ ಕೂತು ಓದಿ, ಟಿಪ್ಪಣಿ ಮಾಡಿ ಇವರ ಪ್ರಯತ್ನಕ್ಕೆ ನಾಲ್ಕು ಉಪಚಾರದ ಮಾತುಗಳನ್ನಾಡಿ ಹೋಗಿಬಿಡುತ್ತಾರೆ. ನಮ್ಮಲ್ಲಿ ಅನೇಕ ಜನರಿಗೆ ಪುಸ್ತಕಗಳನ್ನು ಕೊಳ್ಳುವ ಅಭ್ಯಾಸವಿದೆ. ತಮ್ಮದು ಓದಿಯಾದ ಮೇಲೆ ಅವನ್ನು ಯಾರಾದರೂ ಓದಲೆಂದು ಕೊಂಡು ಹೋದರೆ ಅವುಗಳು ಮರಳಿ ಬರುವುದು ನಿಶ್ಚಿತವಿಲ್ಲ. ಮತ್ತೆ ವರ್ತಮಾನ ಪತ್ರಿಕೆಗಳು ತುಸು ಸಮಯದ ಮೇಲೆ ರದ್ದಿ ಅಂಗಡಿಗಳಿಗೆ ಹೋಗುತ್ತವೆ. ಹಿಂದಿನ ಸಂಚಿಕೆಗಳು ಬೇಕಾಗಿದ್ದಲ್ಲಿ, ಅಥವಾ ಅಪರೂಪದ ಪುಸ್ತಕಗಳು ಬೇಕಾಗಿದ್ದಲ್ಲಿ ಇಂಥ ಖಾಸಗಿ ಗ್ರಂಥಾಲಯಗಳಿಗೇ ಹೋಗಬೇಕು. ಆಗ ಇಂಥವು ಕೊಡುವ ಸೇವೆ ಮೌಲಿಕವಾದದ್ದು ಅನಿಸುತ್ತದೆ.
ಗೋಪಾಲಕೃಷ್ಣ ಪೈ