ಎನ್.ಆರ್.ಪುರ: ಸರ್ಕಾರವು ಬೀದಿ ಬದಿಯ ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ತಂದಿರುವ ಬಡವರ ಬಂಧು ಯೋಜನೆಯಡಿ ಡಿ.ಸಿ.ಸಿ.ಬ್ಯಾಂಕಿನಿಂದ ಈಗಾಗಲೇ ಕಳೆದ 3 ದಿನದಿಂದ 25 ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲ ನೀಡಲಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕಿನ ವ್ಯವಸ್ಥಾಪಕ ಪುಟ್ಟಸ್ವಾಮಿ ತಿಳಿಸಿದರು.
ಅವರು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ ನಲ್ಮಾ) ಶಹರಿ ಸಮೃದ್ಧಿ ಉತ್ಸವ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಿದರು.
ಬಡವರ ಬಂಧು ಯೋಜನೆಯಡಿ ಬೀದಿ ಬದಿಯಲ್ಲಿ ಎಳ ನೀರು, ಹೂ, ತರಕಾರಿ, ಹಣ್ಣುಗಳನ್ನು ಮಾರುವ ವ್ಯಾಪಾರಿಗಳಿಗೆ ಬಡ್ಡಿ ಇಲ್ಲದೆ 10 ಸಾವಿರ ರೂ.ವರೆಗೆ ಸಾಲ ನೀಡುತ್ತೇವೆ. ಸಾಲ ಪಡೆದ ವ್ಯಾಪಾರಿಗಳು ಪ್ರತಿ ದಿನ ಪಿಗ್ನಿಯ ರೂಪದಲ್ಲಿ 120 ರೂ. ಸಾಲ ವಾಪಾಸು ಮಾಡಬೇಕಾಗಿದೆ. ಈ ಸಾಲದ ಬಡ್ಡಿಯನ್ನು ಸರ್ಕಾರವೇ ಕಟ್ಟಲಿದೆ. ಹಣವನ್ನು ಪ್ರತಿ ದಿನ ಸರಿಯಾಗಿ ಕಟ್ಟದಿದ್ದರೆ ಬಡ್ಡಿಯನ್ನು ಸೇರಿಸಿ ಕಟ್ಟಬೇಕಾಗುತ್ತದೆ.
ಬಿ.ಪಿ.ಎಲ್.ಹೊಂದಿದ ಸ್ವಸಹಾಯ ಗುಂಪುಗಳಿಗೆ ಬಡ್ಡಿ ಇಲ್ಲದೆ 3 ಲಕ್ಷ ರೂ.ವರೆಗೆ ಸಾಲ ನೀಡುತ್ತೇವೆ. ಸಾಲ ಪಡೆದು 1 ವರ್ಷದ ಒಳಗೆ ಸಾಲ ಮರುಪಾವತಿ ಮಾಡಬೇಕು. ಸಾಲದ 12 ತಿಂಗಳ ಬಡ್ಡಿಯನ್ನು ಗುಂಪಿನವರು ಮೊದಲು ಬ್ಯಾಂಕಿಗೆ ಕಟ್ಟಬೇಕು. ಸಾಲ ತೀರಿದ ಮೇಲೆ ಬಡ್ಡಿಯನ್ನು ವಾಪಾಸು ಮಾಡಲಾಗುವುದು. ಎ.ಪಿ.ಎಲ್ ಕಾರ್ಡುದಾರರು ಹಾಗೂ ಇತರ ಸ್ವಸಹಾಯ ಗುಂಪುಗಳಿಗೆ ಶೇ.4 ರ ಬಡ್ಡಿಯಲ್ಲಿ ಸಾಲ ನೀಡುತ್ತೇವೆ. ಪ್ರತಿ ತಿಂಗಳು ಸರಿಯಾಗಿ ಸಾಲದ ಕಂತು ಕಟ್ಟಬೇಕು. ಇಲ್ಲದಿದ್ದರೆ ಸುಸ್ತಿ ಬಡ್ಡಿ ಬೀಳಲಿದೆ. ಬಡವರಿಗಾಗಿ ಸರ್ಕಾರವು ಈ ಯೋಜನೆಗಳನ್ನು ತಂದಿದ್ದು, ಬ್ಯಾಂಕಿನ ಮಿತಿಯೊಳಗೆ ಸಾಲ ನೀಡುತ್ತೇವೆ ಎಂದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುರಿಯಾಕೋಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡೇ ನಲ್ಮಾ ಯೋಜನೆಯಡಿ ಶಹರಿ ಸಮೃದ್ದಿ ಉತ್ಸವ ಕಾರ್ಯಕ್ರಮವನ್ನು ಫೆ.1 ರಿಂದ 19 ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗಿದೆ. ಈ ಯೋಜನೆಯಡಿ ಪಟ್ಟಣದಲ್ಲಿರುವ ಮಹಿಳೆಯರು, ಸ್ತ್ರೀ ಶಕ್ತಿ ಗುಂಪುಗಳು,ಸ್ವಸಹಾಯ ಗುಂಪುಗಳ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಮಾಹಿತಿ ನೀಡುತ್ತಿದ್ದೇವೆ ಎಂದರು.
ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಬೇದಾ ಮಾತನಾಡಿದರು. ಪಪಂ ಅಧ್ಯಕ್ಷ ಆರ್.ರಾಜಶೇಖರ್ ಸಮಾರಂಭ ಉದ್ಘಾಟಿಸಿದರು. ಪಪಂ ಉಪಾಧ್ಯಕ್ಷೆ ಸಾವಿತ್ರಿ ಮಂಜುನಾಥ್, ಹಿರಿಯ ಸದಸ್ಯ ಲಕ್ಷ್ಮಣ ಶೆಟ್ಟಿ, ನಾಮಿನಿ ಸದಸ್ಯ ನಾಗಭೂಷಣ, ಸ್ವಸಹಾಯ ಸಂಘಗಳು ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ ಉಪಸ್ಥಿತರಿದ್ದರು.