Advertisement

ಹೂಳೆತ್ತದ ಕಾರಣ ಬೋಟ್‌ ನಿಲುಗಡೆಯಾಗದು

11:39 AM Mar 31, 2022 | Team Udayavani |

ಕೋಟ: ಕೋಡಿಕನ್ಯಾಣ ಮೀನುಗಾರಿಕೆ ಜೆಟ್ಟಿಯನ್ನು 1.9 ಕೋಟಿ ರೂ. ನಬಾರ್ಡ್‌ ಅನುದಾನದಲ್ಲಿ 60 ಮೀ. ವಿಸ್ತರಿಸುವ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಹೂಳೆತ್ತುವ ಕಾಮಗಾರಿ ನಡೆಸದಿರುವುದರಿಂದ ಬೋಟ್‌ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಮೀನುಗಾರರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

Advertisement

ಇಲ್ಲಿ ಹಂಗಾರಕಟ್ಟೆಯಿಂದ ಕುಂದಾಪುರ ತನಕದ ಸುಮಾರು 500ಕ್ಕೂ ಬೋಟ್‌ಗಳು ನಿಲುಗಡೆಗೊಳ್ಳುತ್ತವೆ. ಮೂಲಸೌಕರ್ಯಗಳ ಕೊರತೆಯಿಂದ ಮೀನುಗಾರರು ಬೋಟ್‌ಗಳನ್ನು ಲಂಗರು ಹಾಕುತ್ತಿಲ್ಲ. ಹೆಚ್ಚುವರಿ ಬೋಟ್‌ಗಳ ನಿಲುಗಡೆಗೆ ಜೆಟ್ಟಿ ವಿಸ್ತರಿಸಬೇಕು ಎನ್ನುವ ಮನವಿಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಮೂಲ ಯೋಜನೆಯಲ್ಲಿ ಕೇವಲ ಜೆಟ್ಟಿ ನಿರ್ಮಾಣ ಕಾಮಗಾರಿ ಮಾತ್ರ ಒಳಗೊಂಡಿರುವುದರಿಂದ ಹೂಳೆತ್ತುವ ಕಾಮಗಾರಿ ನಡೆಸಿಲ್ಲ.

ಹೊಸ ಜೆಟ್ಟಿ ನಿರ್ಮಾಣಗೊಂಡಿರುವ 60 ಮೀ. ಉದ್ದ ಹಾಗೂ 40 ಮೀ. ಅಗಲಕ್ಕೆ ಹೂಳೆತ್ತುವ ಕಾಮಗಾರಿ ನಡೆಸಿದ್ದರೆ ಬೋಟ್‌ ನಿಲುಗಡೆಗೆ ಅವಕಾಶವಾಗುತ್ತಿತ್ತು. ಈಗ ಕೋಟ್ಯಂತರ ವೆಚ್ಚದ ಕಾಮಗಾರಿ ವ್ಯರ್ಥವಾಗುತ್ತಿದೆ.

ಮೀನುಗಾರರ ಅಸಮಾಧಾನ

ಒಂದೆರಡು ತಿಂಗಳಲ್ಲಿ ಮೀನುಗಾರಿಕೆ ಋತುವಿನ ರಜಾ ಅವಧಿ ಆರಂಭವಾಗುತ್ತದೆ. ಅಷ್ಟರೊಳಗೆ ಹೂಳೆತ್ತಿದ್ದರೆ ಬೋಟ್‌ಗಳನ್ನು ಲಂಗರು ಹಾಕಲು ಸಾಕಷ್ಟು ಅನುಕೂಲವಾಗುತ್ತಿತ್ತು. ಇಲಾಖೆ ಮೊದಲೇ ಗಮನ ಹರಿಸಬೇಕಿತ್ತು ಎನ್ನುವುದು ಮೀನುಗಾರರ ಅಸಮಾಧಾನವಾಗಿದೆ.

Advertisement

ಸಾರ್ವತ್ರಿಕ ಬಂದರು ಕನಸು

ಜೆಟ್ಟಿ ವಿಶಾಲವಾಗಿದ್ದು ಸಾವಿರಾರು ಬೋಟ್‌ಗಳು ಒಂದೇ ಕಡೆ ನಿಲ್ಲಲು ನೈಸರ್ಗಿಕವಾದ ಸ್ಥಳಾವಕಾಶವಿದೆ. ಸೌಕರ್ಯದ ಕೊರತೆಯಿಂದ ಇಲ್ಲಿನ ಬೋಟ್‌ಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕುತ್ತವೆ. ಅಲ್ಲಿ ಸ್ಥಳಾವಕಾಶದ ಕೊರತೆಯಿಂದ ಬೋಟ್‌ಗಳ ನಿಲುಗಡೆಗೆ ಸಮಸ್ಯೆ ಇದೆ. ಹೀಗಾಗಿ ಕೋಡಿ ಕನ್ಯಾಣವನ್ನು ಸಾರ್ವತ್ರಿಕ ಬಂದರಾಗಿ ಅಭಿವೃದ್ಧಿಪಡಿಸಿದರೆ ಈ ಭಾಗದ ಎಲ್ಲ ಬೋಟ್‌ಗಳನ್ನು ಇಲ್ಲಿಯೇ ನಿಲುಗಡೆ ಮಾಡಬಹುದು. ಇದರಿಂದ ಮಲ್ಪೆಯ ಒತ್ತಡ ಕಡಿಮೆಯಾಗಲಿದೆ ಎನ್ನುವುದು ಇಲ್ಲಿನ ಮೀನುಗಾರರ ಯೋಜನೆಯಾಗಿತ್ತು.

ಸಾಕಷ್ಟು ಸಮಸ್ಯೆ

ಜೆಟ್ಟಿ ವಿಸ್ತರಿಸುವ ಸಂದರ್ಭ ಬೋಟ್‌ ನಿಲುಗಡೆಯಾಗುವ ಸ್ಥಳದಲ್ಲಿ ಹೂಳೆತ್ತುವ ಕಾಮಗಾರಿಗೂ ಆದ್ಯತೆ ನೀಡಬೇಕಿತ್ತು. ಮೂಲ ಯೋಜನೆಯಲ್ಲಿ ಇದನ್ನು ಸೇರ್ಪಡೆ ಗೊಳಿಸ ದಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಹೆಚ್ಚುವರಿ ಯೋಜನೆ ಪ್ರಸ್ತಾವ ಸರಕಾರಕ್ಕೆ ರವಾನೆ ಗೊಂಡು ಈ ಸಾಲಿನಲ್ಲಿ ಕಾಮಗಾರಿ ನಡೆಯು ವುದು ಅನುಮಾನ. ಜೆಟ್ಟಿ ವಿಸ್ತರಣೆಗೊಂಡರೂ ಮೀನುಗಾರರಿಗೆ ಪ್ರಯೋಜನವಿಲ್ಲವಾಗಿದೆ. ಚಂದ್ರ ಕಾಂಚನ್‌, ಕೋಡಿ ಮೀನುಗಾರರ ಸಂಘದ ಅಧ್ಯಕ್ಷರು

ಸರಕಾರಕ್ಕೆ ಶೀಘ್ರ ಪ್ರಸ್ತಾವನೆ

ಕೋಡಿಕನ್ಯಾಣ ಮೀನುಗಾರಿಕೆ ಜೆಟ್ಟಿ ವಿಸ್ತರಣೆಯ ಸಂದರ್ಭ ಹೂಳೆತ್ತುವ ಕಾಮಗಾರಿ ಮೂಲ ಯೋಜನೆಯಲ್ಲಿ ಇರಲಿಲ್ಲ. ಇದರಿಂದಾಗಿ ಪ್ರಸ್ತುತ ಬೋಟ್‌ ನಿಲುಗಡೆಗೆ ಸಮಸ್ಯೆ ಆಗುತ್ತಿದೆ ಎಂದು ಮೀನುಗಾರರು ದೂರಿದ್ದಾರೆ. ಹೆಚ್ಚುವರಿ ಕಾಮಗಾರಿಗಾಗಿ ಸರ್ವೆ ನಡೆಸಿ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ತಾರಕೇಶ್‌ ಪಾಯ್ದೆ, ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next