ಬೆಂಗಳೂರು: ಮುಂಬರುವ 10 ವರ್ಷಗಳಲ್ಲಿ ರಾಜ್ಯದಲ್ಲಿ ಬಡತನ, ಹಸಿವು ನಿವಾರಣೆ ಹಾಗೂ ಲಿಂಗ ಸಮಾನತೆಯನ್ನು ಖಾತ್ರಿ ಪಡಿಸುವ “2030 ಸುಸ್ಥಿರ ಅಭಿವೃದ್ಧಿ ಗುರಿ ಯೋಜನೆ’ ಅನುಷ್ಠಾನಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖೀಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ “2030 ಸುಸ್ಥಿರ ಅಭಿವೃದ್ಧಿ ಗುರಿ ಯೋಜನೆ’ಯಲ್ಲಿರುವ ಹಸಿವು ನಿವಾರಣೆ, ಆಹಾರ ಭದ್ರತೆ ಮತ್ತು ಪೌಷ್ಟಿಕತೆ, ಸುಸ್ಥಿರ ಕೃಷಿ, ಆರೋಗ್ಯಕರ ಜೀವನ, ಗುಣಮಟ್ಟದ ಶಿಕ್ಷಣ, ಕಲಿಕೆಗೆ ಉತ್ತೇಜನ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಸುಸ್ಥಿರ ಇಂಧನ, ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರ ಕೈಗಾರಿಕೆ, ಹವಾಮಾನ ಬದಲಾವಣೆ, ಸಾಗರ ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿಯುತ ಸಮಾಜಗಳ ನಿರ್ಮಾಣ ಕುರಿತಂತೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿವರವಾದ ಚರ್ಚೆ ನಡೆಯಿತು.
ವಿಶ್ವಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಶ್ವದಾದ್ಯಂತ 2015ರಿಂದ ಜಾರಿಗೆ ತಂದಿದೆ. ಇದುವರೆಗೆ 193 ರಾಷ್ಟ್ರಗಳು ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಭಾರತ ಸಹ ದೇಶದಲ್ಲಿ ಯೋಜನೆ ಜಾರಿಗೊಳಿಸಲು ಬದ್ಧತೆ ತೋರಿ ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟು 17 ಸುಸ್ಥಿರ ಅಭಿವೃದ್ಧಿ ಸಮಿತಿಗಳನ್ನು ನಿಗದಿ ಪಡಿಸಿಕೊಂಡು ಪ್ರತಿ ವಲಯಕ್ಕೂ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಪರಿಣತ ತಜ್ಞರುಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು 169 ವಿವಿಧ ಗುರಿ ಸೂಚ್ಯಂಕಗಳನ್ನು ನಿಗದಿ ಪಡಿಸಿದ್ದು, ಅವುಗಳನ್ನು ಸಾಧಿಸುವ ಮೂಲಕ 2030ರ ವೇಳೆಗೆ ಸಮೃದ್ಧ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ರಚನೆಯಾಗಿರುವ 17 ಸಮಿತಿಗಳು ಸರ್ಕಾರದ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಚರ್ಚೆ ನಡೆಸಿ 2030ರ ವೇಳೇಗೆ ಸಾಧಿಸಬೇಕಾದ ಸೂಚ್ಯಂಕಗಳನ್ನು ಗುರುತಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಸ್ತುತ ಸ್ಥಿತಿಗತಿ ಹಾಗೂ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ರೂಪಿಸಬೇಕಾದ ತಂತ್ರಗಾರಿಕೆ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಿತಿಯು ಕ್ರಿಯಾಯೋಜನೆ ಸಿದ್ಧಪಡಿಸಿದೆ. ಶನಿವಾರದ ಸಭೆಯಲ್ಲಿ ಈ ಕ್ರಿಯಾ ಯೋಜನೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
ಜಲಸಂಪನ್ಮೂಲಗಳ ಕೊರತೆ, ಸಂರಕ್ಷಣೆ ಹಾಗೂ ನಿರ್ವಹಣೆ, ಲಿಂಗ ಅಸಮಾನತೆ, ಅರೋಗ್ಯ ವಲಯದ ಕೊರತೆಗಳು, ಅಪೌಷ್ಟಿಕತೆ ನಿವಾರಣೆ, ಕೃಷಿಯಲ್ಲಿ ಸುಸ್ಥಿರತೆ ತರುವ ಕುರಿತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳೊಡನೆ ಚರ್ಚಿಸಲಾಯಿತು.
ಗುರಿಗಳನ್ನು ಸಾಧಿಸಲು ನಿಗದಿ ಪಡಿಸಿಕೊಂಡಿರುವ ಸೂಚ್ಯಂಕಗಳಿಗೆ ಸಂಬಂಧಿಸಿದಂತೆ ಕ್ರೋಢೀಕರಿಸಿರುವ ಹಾಗೂ ವಿಶ್ಲೇಷಣೆಗೆ ಒಳಪಡಿಸಿರುವ ಮಾಹಿತಿಗಳು ಮತ್ತು ದತ್ತಾಂಶಗಳು ಎರಡು ಮೂರು ವರ್ಷಗಳ ಹಿಂದಿನವಾಗಿದ್ದು, ಬದಲಾಗಿರುವ ಪರಿಸ್ಥಿತಿಗೆ ಅನುಗುಣವಾಗಿ ಇತ್ತೀಚಿನ ಮಾಹಿತಿಗಳನ್ನು ಕೇಂದ್ರ ಸರ್ಕಾರದ ಸಾಂಖೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಿಂದ ಮಾಹಿತಿ ಒದಗಿಸಲು ಕೋರಿ ನೀತಿ ಆಯೋಗಕ್ಕೆ ಪತ್ರ ಬರೆಯುವಂತೆ ಮುಖ್ಯಕಾರ್ಯದರ್ಶಿಗಳು ರಾಜ್ಯದ ಯೋಜನಾ ಇಲಾಖೆಗೆ ಸೂಚಿಸಿದರು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಸುಬೀರ್ ಹರಿಸಿಂಗ್, ಡಾ.ಅಲೆಕ್ಸಾಂಡರ್ ಥಾಮಸ್, ಸುಧಾಕರ ರಾವ್, ನೀಲಾ ಗಂಗಾಧರನ್, ಎಂ.ಆರ್.ಶ್ರೀನಿವಾಸ ಮೂರ್ತಿ, ಕೆ.ಜೈರಾಜ್, ಎಂ.ಎನ್.ವಿದ್ಯಾಶಂಕರ್, ಎನ್.ಸಿ.ಮುನಿಯಪ್ಪ, ಮೊಹಮದ್ ಸನಾವುಲ್ಲಾ, ಕನ್ವರ್ ಪಾಲ್, ರುದ್ರ ಗಂಗಾಧರನ್ ಹಾಗೂ ಡಿ. ತಂಗರಾಜ್ ಅವರು 17 ಸಮಿತಿಗಳ ಅಧ್ಯಕ್ಷರಾಗಿದ್ದಾರೆ.