Advertisement

ಅಂಧ ದಂಪತಿ ವಂಚಿಸಿ ಮಗು ಕದ್ದೊಯ್ದ ದುಷ್ಕರ್ಮಿಗಳು

12:40 AM Apr 30, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದ ಅಂಧ ದಂಪತಿಯ ಎಂಟು ತಿಂಗಳ ಮಗುವನ್ನು ನೀರು ಕುಡಿಸುವ ನೆಪದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಕದ್ದೊಯ್ದ ಘಟನೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ.

Advertisement

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಮೂಲದ ಬಸವರಾಜು ಹಾಗೂ ಬಿ.ಕೆ.ಚಿನ್ನು ದಂಪತಿಯ ಪುತ್ರ ಸಾಗರ್‌ ಅಪಹರಣಗೊಂಡ ಮಗು. ಈ ಸಂಬಂಧ ದಂಪತಿ, ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿರುವ ಬಸವರಾಜು ದಂಪತಿ ಸಂಗೀತ ಶಾಲೆ ಹಾಗೂ ಆರ್ಕೆಸ್ಟ್ರಾದಲ್ಲಿ ಹಾಡು ಹಾಡಿ ಜೀವನ ನಡೆಸುತ್ತಿದ್ದಾರೆ. ದಂಪತಿ ತಾವು ಹೋದಲ್ಲೆಲ್ಲಾ ಮಗುವನ್ನು ಕರೆದೊಯ್ಯುತ್ತಿದ್ದರು. ಬೆಂಗಳೂರಿನಲ್ಲಿ ಬಸವರಾಜು ಅವರ ಸಂಬಂಧಿಗಳಿದ್ದ ಕಾರಣ, ಆಗಾಗ ಬಂದು ಹೋಗುತ್ತಿದ್ದರು.

ಪ್ರತಿ ಬಾರಿಯಂತೆ ಏ.26ರಂದು ಊರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದು ಏ.27ರಂದು ಮೆಜೆಸ್ಟಿಕ್‌ನಲ್ಲಿ ಇಳಿದುಕೊಂಡಿದ್ದಾರೆ. ಬೆಳಗ್ಗೆ 7.30ಕ್ಕೆ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಪ್ಲಾಟ್‌ಫಾರಂ 19(ಡಿ)ನಲ್ಲಿ ದಂಪತಿ ಪುತ್ರನ ಜತೆ ಕುಳಿತಿದ್ದರು.

ಮಗು ಜೋರಾಗಿ ಅಳುತ್ತಿದ್ದರಿಂದ ತಾಯಿ ಮಗುವಿಗೆ ನೀರು ಕುಡಿಸಲು ಹೊರಟಿದ್ದಾರೆ. ಇದೇ ವೇಳೆ ನಿಲ್ದಾಣದಲ್ಲಿದ್ದ ಅಪರಿಚಿತ ಮಹಿಳೆ, “ಮಗು ಕೊಡಿ, ನಾನು ನೀರು ಕುಡಿಸುತ್ತೇನೆ’ ಎಂದು ಮತ್ತೆ ಮತ್ತೆ ಕೇಳಿದ್ದಾಳೆ. ಆದರೆ, ದಂಪತಿ ನಿರಾಕರಿಸಿದ್ದರು.

Advertisement

ಈ ನಡುವೆ ಸಾಗರ್‌ ಅಳುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಸ್ವಲ್ಪ ಸಮಾಧಾನವಾಗಬಹದು ಎಂದು ಮಹಿಳೆಗೆ ಮಗು ಕೊಟ್ಟು, ನೀರು ಕುಡಿಸುವಂತೆ ನೀರಿನ ಲೋಟ ನೀಡಿದ್ದಾರೆ. ನೀರು ಕುಡಿಸಿದ ಮಹಿಳೆ, ನೀರಿನ ಲೋಟವನ್ನು ಹಿಂದಿರುಗಿಸಿದ್ದಾಳೆ.

ನಂತರ “ನನ್ನ ಮಗು ಕೊಡಿ ತಾಯಿ’ ಎಂದು ಕೇಳಿದಾಗ ಯಾವುದೇ ಉತ್ತರ ಬಂದಿಲ್ಲ. ದಂಪತಿಗೆ ಕಣ್ಣು ಕಾಣದ ಹಿನ್ನೆಲೆಯಲ್ಲಿ ತಾವು ಕುಳಿತಿದ್ದ ಸುತ್ತ-ಮುತ್ತ ಕೈ ಆಡಿಸಿದಾಗ ಮಗುವಾಗಲಿ, ಮಗುವನ್ನು ಪಡೆದ ಅಪರಿಚಿತ ಮಹಿಳೆಯಾಗಲಿ ಸಿಕ್ಕಿಲ್ಲ.

ಆತಂಕಗೊಂಡ ದಂಪತಿ, ಪುತ್ರ ಎಲ್ಲಿ ಹೋದ ಸಹ ಪ್ರಯಾಣಿಕರನ್ನು ಕೇಳಿದ್ದಾರೆ. ಆದರೆ, ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಕೊನೆಗೆ ಸಹಾಯಕ್ಕೆ ಬಂದ ಕೆಲವರು, ನಿಲ್ದಾಣದ ಸುತ್ತ-ಮುತ್ತ ಹುಡುಕಾಡಿದರೂ, ಮಹಿಳೆ, ಮಗು ಪತ್ತೆಯಾಗಿಲ್ಲ. ಕೊನೆಗೆ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ: ಮಹಿಳೆ ಮಗುವನ್ನು ಕರೆದೊಯ್ದ ಸ್ಥಳದ ಆಸುಪಾಸು ಇರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದ್ದು, ಯಾವುದೇ ಸುಳಿವು ಸಿಗುತ್ತಿಲ್ಲ. ಹೀಗಾಗಿ ಬಸವರಾಜು ಅವರ ಸೋದರ ಸಂಬಂಧಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

ಸಿಎಂ ಭೇಟಿಯಾಗಲು ಬಂದಿದ್ದೇವು: ಉದಯವಾಣಿ ಜತೆ ಮಾತನಾಡಿದ ಬಸವರಾಜು, ಅಂಗವಿಕಲರ ಅನುದಾನ ಹಾಗೂ ತಾವು ನಡೆಸುತ್ತಿರುವ ಆರ್ಕೆಸ್ಟ್ರಾಗೆ ಧನ ಸಹಾಯ ಕೇಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದೆವು.

ಇಲ್ಲಿಗೆ ಬಂದ ನಂತರ ಮುಖ್ಯಮಂತ್ರಿ ಬಳಿ ಹೇಗೆ ಹೋಗಬೇಕು ಎಂದು ತೋಚದೆ, ಬಸ್‌ ನಿಲ್ದಾಣದಲ್ಲೇ ಕಾಲ ಕಳೆಯುತ್ತಿದ್ದೆವು. ನೀರು ಕುಡಿಸುವ ನೆಪದಲ್ಲಿ ಮಹಿಳೆ ಮಗುವನ್ನು ಕರೆದೊಯ್ದಿದ್ದಾಳೆ. ಪೊಲೀಸರು ಸೇರಿ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಸ್‌ ನಿಲ್ದಾಣದಲ್ಲೇ ದಿನದೂಡುತ್ತಿದ್ದೇವೆ ಎಂದು ಭಾವುಕರಾದರು.

ಮಗು ಸಿಗುವವರೆಗೂ ಬೆಂಗಳೂರು ಬಿಟ್ಟು ಹೋಗುವುದಿಲ್ಲ. ಒಂದು ವೇಳೆ ಮಗು ಸಿಗದಿದ್ದರೆ, ನಾವು ಬದುಕುವುದಿಲ್ಲ.
-ಬಸವರಾಜು, ಮಗುವಿನ ತಂದೆ

Advertisement

Udayavani is now on Telegram. Click here to join our channel and stay updated with the latest news.

Next