Advertisement

ನನ್ನೊಳಗಿನ ಅವಳು : ಹೆಣ್ಣಿನ ಮುಸುಕಿನೊಳಗಿನ ಗುದ್ದಾಟ 

06:00 AM Dec 28, 2018 | |

ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನಗಳು ಹೆಣ್ಣಿನ ಪಾಲಿಗೆ ಇಂದು ಸ್ವೀಕೃತ ವಿಚಾರಗಳಾಗಿ ಬಿಟ್ಟಿವೆ. ಆದರೆ ಈ ಎಲ್ಲ ಅವಕಾಶಗಳೂ ಕೇವಲ ಹೊರನೋಟಕ್ಕೆ ಮಾತ್ರ ಕಾಣಿಸುವಂಥವು. ಹೆಣ್ಣಿನ ಬದುಕಿನಲ್ಲಿ ಮೂಲಭೂತ ಬದಲಾವಣೆಗಳು ಇನ್ನೂ ಆಗಿಲ್ಲ ಎನ್ನುವ ಸತ್ಯವನ್ನು ತಮ್ಮ ಏಕವ್ಯಕ್ತಿ ಪ್ರದರ್ಶನ “ನನ್ನೊಳಗಿನ ಅವಳು’ ಮೂಲಕ ತಮ್ಮ ಮನಮುಟ್ಟುವ ಅಭಿನಯ ಮತ್ತು ಮಾತುಗಳಿಂದ ಹೇಳುತ್ತಿದ್ದಾರೆ ಉಡುಪಿಯ ಕಲಾದೆ ಶಿಲ್ಪಾ ಜೋಶಿ. 

Advertisement

ಏಕವ್ಯಕ್ತಿ ಪ್ರದರ್ಶನದಲ್ಲಿ ಒಂದೇ ವಸ್ತುವಿನ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳ ಮೇಲೆ ಬೇರೆ ಬೇರೆ ಘಟನೆ ಹಾಗೂ ಸನ್ನಿವೇಶಗಳ ಮೂಲಕ ದೃಷ್ಟಾಂತಗಳನ್ನು ಸೃಷ್ಟಿಸಿ, ಸಮಸ್ಯೆಯ ಗಂಭೀರತೆಯನ್ನು ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ಹೇಳುವುದು ಮುಖ್ಯವಾಗುತ್ತದೆ. ಒಂದು ಪೂರ್ಣಪ್ರಮಾಣದ ನಾಟಕದಂತೆ ನಿರ್ದೇಶಕರು, ಹಿನ್ನೆಲೆ ಸಂಗೀತ ಮತ್ತು ಧ್ವನಿಗಳನ್ನು ನೀಡುವವರು, ಬೆಳಕು ತಜ್ಞರು ಮತ್ತು ನಿರ್ವಾಹಕರು ಇರುತ್ತಾರೆ. ಸಂಭಾಷಣೆಗಳನ್ನು ಮತ್ತು ಹಾಡುಗಳನ್ನು ಸ್ವತಃ ತಾವೇ ಬರೆದು ರಂಗದ ಮೇಲೆ ಅಭಿನಯವನ್ನೂ ಅವರೇ ಮಾಡಿದ್ದಾರೆ. ರವಿರಾಜ್‌ ಹೆಚ್‌.ಪಿ. ಅವರ ವಿನ್ಯಾಸ ಮತ್ತು ನಿರ್ದೇಶನ, ಗೀತಂ ಗಿರೀಶ್‌ ಅವರ ಸಂಗೀತ, ಸಂಗೀತಾ ಬಾಲಚಂದ್ರ ಮತ್ತು ನಗರ ಸುಬ್ರಹ್ಮಣ್ಯ ಆಚಾರ್‌ ಅವರ ಹಾಡುಗಾರಿಕೆ, ನಿತಿನ್‌ ಪೆರಂಪಳ್ಳಿ ಅವರ ಬೆಳಕಿನ ಪ್ರಯೋಗ, ನಂದಾ ಪಾಟ್ಕರ್‌ ಅವರ ಸಹಕಾರ ಮತ್ತು ಹರೀಶ್‌ ಜೋಶಿಯವರ ನಿರ್ವಹಣೆಯಲ್ಲಿ ವಿಟ್ಲ ಜೋಶಿ ಪ್ರತಿಷ್ಠಾ® (ರಿ) ಪರ್ಕಳ ಇವರ ಆಶ್ರಯದಲ್ಲಿ ಕೋಟದ ಶಿವರಾಮ ಕಾರಂತ ಥೀಮ್‌ ಪಾರ್ಕಿನ ರಂಗವೇದಿಕೆಯಲ್ಲಿ ಈ ಏಕವ್ಯಕ್ತಿ ಪ್ರದರ್ಶನದ ಎರಡನೆಯ ಪ್ರಯೋಗ ಅದ್ಭುತವಾಗಿ ಮೂಡಿಬಂತು. 

 ಮೂರು ತಲೆಮಾರುಗಳಿಗೆ ಸೇರಿದ ಸ್ತ್ರೀಯರು ಇಲ್ಲಿ ಬರುತ್ತಾರೆ. ಆರಂಭದಲ್ಲಿ ಬರುವ ಕವನಾ ಮದುವೆಯ ಬಗ್ಗೆ ಸುಂದರ ಕನಸುಗಳನ್ನು ಕಂಡವಳು. ದುಡಿದು ಬರುವ ಗಂಡ, ಗೃಹ ಕೃತ್ಯಗಳನ್ನು ನಿಭಾಯಿಸುವ ತಾನು-ಸಂಸಾರದ ನಿರ್ವಹಣೆ ತುಂಬಾ ಚೆನ್ನಾಗಿ ಸಾಗಬಹುದೆಂದು ಅವಳು ಎಣಿಸಿರುತ್ತಾಳೆ. ಆದರೆ ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸದೆ ಎಂದು ಸುಳ್ಳು ಹೇಳಿ ಮದುವೆಯಾಗುವ ಗಂಡನಿಂದ ಮೋಸಹೋಗುತ್ತಾಳೆ. ಕನಸುಗಳು ನುಚ್ಚುನೂರಾಗಿದ್ದುದರ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾರದೆ, ಮಕ್ಕಳನ್ನು ನೋಡಿಕೊಳ್ಳಲು ಕೈಯಲ್ಲಿ ಹಣವಿಲ್ಲದೆ ಯಾರ್ಯಾರಧ್ದೋ ಸಹಾಯದಿಂದ ಅವಳು ಕೆಲಸಕ್ಕೆ ಸೇರುತ್ತಾಳೆ. 

ಎರಡನೆಯ ಚಿತ್ರ ಭಾವನಾಳದ್ದು. ಮೊಣಕಾಲೂರಿ ಗುಲಾಬಿ ಕೊಟ್ಟು ಪ್ರೇಮಭಿಕ್ಷೆ ಬೇಡಿ ಮದುವೆಯಾದ ಗಂಡ ಹತ್ತು ವರ್ಷಗಳ ಒಳಗೆ ಆಕೆಗೆ ಮೂರು ಮಕ್ಕಳನ್ನಷ್ಟೇ ಕೊಟ್ಟು ಪ್ರೀತಿಯೆಲ್ಲವನ್ನೂ ಮರೆತು ಬೇರೊಬ್ಬ ಹೆಣ್ಣಿನಲ್ಲಿ ಆಸಕ್ತನಾದಾಗ ಅವನಿಂದ ವಿಚ್ಛೇದನ ಪಡೆದವಳು. ಮನೆ-ಮಕ್ಕಳನ್ನು ಏಕಾಂಗಿಯಾಗಿ ನಿಭಾಯಿಸಲು ಆಕೆ ಹರಸಾಹಸ ಪಟ್ಟರೂ ವಿಚ್ಛೇದನಕ್ಕೆ ಕಾರಣ ಹೆಣ್ಣೇ ಎಂದು ಯಾವಾಗಲೂ ಆರೋಪಿಸುವುದೇ ಅಭ್ಯಾಸವಾಗಿ ಬಿಟ್ಟಿರುವ ಸಮಾಜದಿಂದಾಗಿ ಆಕೆ ಹಲವು ರೀತಿಯಲ್ಲಿ ಕಿರುಕುಳವನ್ನೂ ಸೋಲನ್ನೂ ಅನುಭಸುತ್ತಾಳೆ. 

ಮೂರನೆಯ ಚಿತ್ರ ಒಬ್ಬ ವಯಸ್ಸಾದ ಹೆಂಗಸಿನದ್ದು. ವೈವಾಹಿಕ ಜೀವನಕ್ಕೋಸ್ಕರ ತನ್ನ ಶಿಕ್ಷಣವನೂ,° ಸಂಗೀತದ ಪ್ರತಿಭೆಯನ್ನೂ, ಓದುವ ಆಸಕ್ತಿಯನ್ನೂ ತ್ಯಾಗ ಮಾಡಿದ ಆಕೆ ಮದುವೆಯಾದ ಹೊಸತರಲ್ಲಿ ಗಂಡನ ದಬ್ಟಾಳಿಕೆಗೆ ಒಳಗಾದರೆ ಮುಂದೆ ಮಕ್ಕಳ ಮತ್ತು ಮೊಮ್ಮಕ್ಕಳ ಮೂಲಕವೂ ಶೋಷಣೆಗೆ ಒಳಗಾಗುತ್ತಾಳೆ. ಅವರೆಲ್ಲರ ಕತ್ತೆ ಚಾಕರಿ ಮಾಡುವುದು ಮಾತ್ರವಲ್ಲದೆ‌ ಅವರ ಕಟು ಮಾತುಗಳನ್ನೂ ಆಕೆ ಕೇಳಬೇಕಾಗುತ್ತದೆ. 

Advertisement

 ಈ ಮೂರೂ ಪಾತ್ರಗಳಲ್ಲಿ ಹೆಣ್ಣಿನ ಅಸಹಾಯಕ‌ ಸ್ಥಿತಿಯ ಹೃದಯ ವಿದ್ರಾವಕ ಚಿತ್ರಣದೆ. ಸುಮಾರು ಒಂದು ಗಂಟೆಯ ಈ ಪ್ರಸ್ತುತಿ ಇನ್ನೂ ಮುಂದುವರಿಯಲು ಸಾಕಷ್ಟು ಅವಕಾಶವಿದೆೆ. ಏಕೆಂದರೆ ಇದಕ್ಕಿರುವುದು ಒಂದು ತೆರೆದ ಅಂತ್ಯ. ತನ್ನ ಬವಣೆಗಳ ಮಧ್ಯೆ ಮುಸುಕಿನೊಳಗೆಯೇ ಗುದ್ದಾಡುತ್ತಿರುವ ಪ್ರತಿಯೊಬ್ಬ ಹೆಣ್ಣಿನಲ್ಲೂ ಕಂಡೂ ಕಾಣದಂತೆ ಅಡಗಿಕೊಂಡಿರುವ “ಅವಳು’ ಈ ಏಕವ್ಯಕ್ತಿ ಪ್ರದರ್ಶನದ ಮೂಲಕ ತನ್ನ ಕಷ್ಟಗಳನ್ನು ಅರ್ಥಮಾಡಿಕೊಂಡು ತನ್ನನ್ನು ಒಬ್ಬ ಮನುಷ್ಯಳಂತೆ ಗುರುತಿಸಿ ಎಂಬ ಸಂದೇಶವನ್ನು ನೀಡುತ್ತಾಳೆ. 

 ಸರಾಗವಾಗಿ ಬಂದ ಧ್ವನಿಪೂರ್ಣ ಸಂಭಾಷಣೆಗಳ ಸಮರ್ಥ ನಿರ್ವಹಣೆ, ಚುರುಕಾದ ಚಲನ‌ವಲನಗಳು, ಸೂಕ್ತ ಸನ್ನಿವೇಶಗಳ ಮನೋಜ್ಞ ಅಭಿವ್ಯಕ್ತಿ, ಔಚಿತ್ಯಪೂರ್ಣ ವೇಷಭೂಷಣಗಳು, ಸರಳ ರಂಗ ಪರಿಕರಗಳು, ಮಧುರವಾಗಿ ಮೂಡಿಬಂದ ಅರ್ಥಪೂರ್ಣ ಹಾಡುಗಳು, ಸಂದರ್ಭಕ್ಕೆ ಪೂರಕವಾಗಿ ಬಂದ ಹಿನ್ನೆಲೆ ಸಂಗೀತ ಮತ್ತು ಉತ್ತಮ ಬೆಳಕಿನ ನಿರ್ವಹಣೆಗಳು ಪ್ರದರ್ಶನದ ಯಶಸ್ಸಿಗೆ ಕಾರಣವಾದ ಅಂಶಗಳು.

ಡಾ| ಪಾರ್ವತಿ ಜಿ. ಐತಾಳ್‌

Advertisement

Udayavani is now on Telegram. Click here to join our channel and stay updated with the latest news.

Next