Advertisement

ಬ್ಲಾಕ್‌ಮೇಲ್‌ ಮಾಡಿದ ಡೈರೆಕ್ಟರ್‌ ಪೊಲೀಸರ ಬಲೆಗೆ

12:09 PM May 22, 2018 | Team Udayavani |

ಬೆಂಗಳೂರು: ಸಿನಿಮಾದಲ್ಲಿ ಹಣ ಹೂಡಿಕೆ ಮಾಡಲು ವಿಳಂಬ ಮಾಡಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಅವರ ಪತ್ನಿ ಒಟ್ಟಿಗಿರುವ ಖಾಸಗಿ ಫೋಟೋಗಳನ್ನು ತೋರಿಸಿ, ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಸಿನಿಮಾ ನಿರ್ದೇಶಕ ಸೇರಿ ನಾಲ್ವರು ಆರೋಪಿಗಳು ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದಿದ್ದಾರೆ.

Advertisement

ಚಾಮರಾಜನಗರ ಮೂಲದ ಕೆಂಗೇರಿಯ ಕಾನ್ಸೆಪ್ಟ್ ಸಿಟಿ ಲೇಔಟ್‌ನ ನಿವಾಸಿ ಸಿನಿಮಾ ನಿರ್ದೇಶಕ ಸಂತೋಷ್‌ ಕುಮಾರ್‌(27), ಕಾರು ಚಾಲಕ ಪ್ರಶಾಂತ್‌(26) ಮತ್ತು ಟೈಲ್ಸ್‌ ಕೆಲಸ ಮಾಡುವ ಸುರೇಶ್‌ (24), ಪ್ರದೀಪ್‌ (22) ಬಂಧಿತರು. ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದಾರೆ.

ಈ ಪೈಕಿ ಸಂತೋಷ್‌ ಕುಮಾರ್‌ ತನಗೆ ಪರಿಚಯವಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ದಂಪತಿ ಜತೆ ಪ್ರವಾಸಕ್ಕೆ ಹೋದಾಗ ದಂಪತಿಯ ಖಾಸಗಿ ಫೋಟೋಗಳನ್ನು ಅವರ ಮೊಬೈಲ್‌ನಿಂದಲೇ ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಂಡು ಪ್ರಶಾಂತ್‌ ಮೂಲಕ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತೋಷ್‌ ಕುಮಾರ್‌ ಕನ್ನಡ, ತೆಲುಗು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಇತ್ತೀಚೆಗೆ “ಮೈಸೂರಿನಲಿ ರಾಜಾರಾಣಿ’ ಎಂಬ ಕನ್ನಡ ಸಿನಿಮಾದ ಟೈಟಲ್‌ ಕೂಡ ಬಿಡುಗಡೆ ಮಾಡಿದ್ದು, ನಿರ್ಮಾಪಕರಿಗಾಗಿ ಹುಡುಕಾಟ ನಡೆಸುತ್ತಿದ್ದ.

ಈ ಮಧ್ಯೆ ಒಂದು ವರ್ಷಗಳ ಹಿಂದೆ ಪರಿಚಯವಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಅವರ ಕುಟುಂಬ ಸದಸ್ಯರ ಪರಿಚಯ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ದೂರುದಾರ ಕುಟುಂಬ ಹಾಗೂ ಆರೋಪಿ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದರು.

Advertisement

ಈ ವೇಳೆ ಸಂತೋಷ್‌ ಕುಮಾರ್‌ ಮೊಬೈಲ್‌ಗ‌ಳಲ್ಲಿ ಸೆರೆ ಹಿಡಿದಿದ್ದ ಪ್ರವಾಸಿ ತಾಣಗಳ ಫೋಟೋಗಳನ್ನು ವರ್ಗಾವಣೆ ಮಾಡಿಕೊಳ್ಳುವುದಾಗಿ ಹೇಳಿ ದೂರುದಾರರ ಮೊಬೈಲ್‌ ಪಡೆದು ಉದ್ಯಮಿ ದಂಪತಿಯ ಖಾಸಗಿ ಫೋಟೋಗಳನ್ನು ಅಕ್ರವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ.

ಹೂಡಿಕೆಗೆ ವಿಳಂಬ, ಬ್ಲಾಕ್‌ಮೇಲ್‌: ಅನಂತರ ತನ್ನ ನಿರ್ದೇಶನದ ಸಿನಿಮಾಕ್ಕೆ ಹಣ ಹೂಡಿಕೆ ಮಾಡುವಂತೆ ಉದ್ಯಮಿಗೆ ಕೇಳಿಕೊಂಡಿದ್ದಾನೆ. ವಿಳಂಬ ಮಾಡಿದಾಗ ಕೋಪಗೊಂಡ ಆರೋಪಿ ತನ್ನ ಇತರೆ ಆರೋಪಿಗಳ ಜತೆ ಸೇರಿಕೊಂಡು ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ.

ಸ್ನೇಹಿತರ ಮೊಬೈಲ್‌,ಸಿಮ್‌ ಕಾರ್ಡ್‌ ಕಳವು: ಚಾಮರಾಜನಗರದ ಹುಡಿಗಾಲದಲ್ಲಿ ಟೈಲ್ಸ್‌ ಕೆಲಸ ಮಾಡಿಕೊಂಡಿದ್ದ ಸುರೇಶ್‌ ಮತ್ತು ಪ್ರದೀಪ್‌ನನ್ನು ಸಂತೋಷ್‌ ಕರೆಸಿಕೊಂಡಿದ್ದು, ಅಪರಿಚಿತರ ಮೊಬೈಲ್‌ ಮತ್ತು ಸಿಮ್‌ಕಾರ್ಡ್‌ ತರಲು ಹೇಳಿದ್ದ.

ಆದರೆ, ಆರೋಪಿಗಳು ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಚಾರ್ಜ್‌ಗೆ ಹಾಕಿದ್ದ ಸ್ನೇಹಿತನ ಮೊಬೈಲ್‌ ಹಾಗೂ ಎರಡು ಸಿಮ್‌ಕಾರ್ಡ್‌ಗಳನ್ನು ಕಳವು ಮಾಡಿ, ಸಂತೋಷಗೆ ಕೊಟ್ಟಿದ್ದಾರೆ. ಕಳವು ಮಾಡಿದ್ದ ಸಿಮ್‌ಕಾರ್ಡ್‌ಗಳನ್ನು ಆರೋಪಿ ಪ್ರಶಾಂತ್‌ ತನ್ನ ಮೊಬೈಲ್‌ಗೆ ಹಾಕಿಕೊಂಡು ದೂರುದಾರ ಹಾಗೂ ಅವರ ಪತ್ನಿಗೆ ಖಾಸಗಿ ದೃಶ್ಯಗಳನ್ನು ಕಳುಹಿಸಿದಲ್ಲದೇ, 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.

ಮತ್ತೂಂದೆಡೆ ಸುರೇಶ್‌ ಮತ್ತು ಪ್ರದೀಪ್‌ ದೂರುದಾರರ ಮತ್ತು ಕುಟುಂಬಸ್ಥರ ಚಲವಲನಗಳ ಬಗ್ಗೆ ನಿಗಾವಹಿಸಿ ಸಂತೋಷ್‌ಗೆ ಮಾಹಿತಿ ನೀಡುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿರುವುದಾಗಿ ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next