ಬದಿಯಡ್ಕ: ಭಾಗ್ಯವನ್ನು ನಾವಾಗಿ ಹುಡುಕಿ ಕೊಂಡು ಹೋಗಬಾರದು ಅದು ತಾನಾಗಿಯೇ ಬಂದು ಸೇರಬೇಕು ಎಂಬ ಮಾತಿಗೆ ಉದಾಹರಣೆ ಎಂಬಂತಿದ್ದಾನೆ ಕಾಸರಗೋಡಿನ ಬದಿಯಡ್ಕ ಪೆರಡಾಲ ಕೊರಗ ಕಾಲನಿಯ ಪುಟ್ಟ ಬಾಲಕ ವಿಜಯ.
‘ಪುಲ್ಲಾಂಜಿ’ ಎಂಬ ಕಿರುಚಿತ್ರದಲ್ಲಿ ಅಭಿನಯಿಸಿ ಈತ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಅಭಿನಯ ಏನೆಂದು ತಿಳಿಯದ ನಾಲ್ಕು ವರ್ಷ ವಯಸ್ಸಿನ ಈ ಬಾಲಕ ಸಿನೆಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾನೆ.
‘ಪುಲ್ಲಾಂಜಿ’ಯನ್ನು ಗಿರೀಶ್ ಮಕ್ರೇರಿ ರಚಿಸಿ ನಿರ್ದೇಶಿಸಿ, ವಿನೋದ್ ಕೋಯಿಪರಂಬತ್ತ್ ನಿರ್ಮಿಸಿದ್ದಾರೆ.ಎರಡು ಸಿನೆಮಾ ಉತ್ಸವಗಳಲ್ಲಿ ಜೋಡಿ ಪ್ರಶಸ್ತಿಗಳು ವಿಜಯನನ್ನು ಹುಡುಕಿ ಬಂದಿವೆ. ಪಾಲಕ್ಕಾಡ್‌ನಲ್ಲಿ ಜರಗಿದ ಲೀಡ್ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಎರ್ನಾಕುಳಂನಲ್ಲಿ ನಡೆದ ಐಎಸ್‌ಟಿಎ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವಗಳಲ್ಲಿ ‘ಪುಲ್ಲಾಂಜಿ’ಯ ಅಭಿನಯಕ್ಕಾಗಿ ವಿಜಯನಿಗೆ ಪ್ರಶಸ್ತಿ ಲಭಿಸಿದೆ.
ವಿಜಯನ ಅಕ್ಕ ರೇಖಾಳೂ ಇದೇ ಸಿನೆಮಾದಲ್ಲಿ ಅಭಿನಯಿಸಿದ್ದಾಳೆ. ಕೆಲವೇ ನಿಮಿಷಗಳ ಅಭಿನಯದಲ್ಲಿ ಹಸಿವಿನ ಯಾತನೆಯನ್ನು, ಬಡತನದ ಕರಾಳತೆಯನ್ನು ವಿಜಯ ಪಡಿಮೂಡಿಸಿದ್ದಾನೆ ಎಂದು ಜ್ಯೂರಿ ಪ್ಯಾನೆಲ್ನ ಚೇರ್‌ಮನ್ ಉದಯ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಅತ್ಯುತ್ತಮ ಕಿರುಚಿತ್ರದ ಹೊರತಾಗಿ ಬಾಲನಟ, ನಿರ್ದೇಶನ, ರಚನೆ, ಛಾಯಾಚಿತ್ರಗ್ರಹಣ, ಎಡಿಟಿಂಗ್ ಮೊದಲಾದ ವಿಭಾಗಗಳಲ್ಲಿಯೂ ‘ಪುಲ್ಲಾಂಜಿ’ಗೆ ಪುರಸ್ಕಾರ ಲಭಿಸಿದೆ. ಎರ್ನಾಕುಳಂನಲ್ಲಿ ನಡೆದ ಅವಾರ್ಡ್ ನೈಟ್‌ನಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಮಲೆಯಾಳ ಸಿನೆಮಾ ನಟಿ ಮಂಜು ವಾರಿಯರ್ ಹಸ್ತಾಂತರಿಸಿದರು.