ಪುತ್ತೂರು: ಎಲ್ಲಾ ಜಿಲ್ಲೆಗಳಿಗೂ ಪ್ರವೇಶ ಮಾಡುತ್ತಿರುವ ಡಿಕೆಶಿ ಕಡಲ ಕಿನಾರೆಗೆ ಕಡೆಗೂ ತನ್ನ ಪ್ರವೇಶ ಮಾಡಿದ್ದಾರೆ. ರಾಜಕೀಯವಾಗಿ ದ.ಕ. ಜಿಲ್ಲೆಗೆ 10 ಡಿಕೆಶಿ ಬಂದರೂ ಏನು ಮಾಡಲು ಆಗುವುದಿಲ್ಲ ಎಂದು ಹೇಳಿದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಸಿದ್ದರಾಮಯ್ಯ ಮತ್ತು ದೇವೇಗೌಡರು ಒಟ್ಟಾದ ಬಳಿಕ ಅವರಿಬ್ಬರೂ ಡಿಕೆಶಿಯವರನ್ನು ರಾಜಕೀಯವಾಗಿ ದೂರ ಇರಿಸಿದ್ದಾರೆ. ರಾಜಕೀಯವಾಗಿ ಡಿಕೆಶಿ ಒಬ್ಬಂಟಿಯಾಗಿದ್ದಾರೆ ಎಂದು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಏನು ಅಭಿವೃದ್ಧಿ ಮಾಡಿದ್ದಾರೆ? ಹಾಗೆಯೇ ಈಗಿನ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕೂಡಾ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಪ್ರಶ್ನಿಸಿ ಮೊನ್ನೆ ನಡೆದ ಕಲ್ಲು ತೂರಾಟ ಖಾದರ್ ಅವರ ಕೊಡುಗೆಯೇ?. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ, ಕರಾವಳಿ ಜನತೆಯ ಕುರಿತು ಲಘುವಾಗಿ ಹೇಳಿಕೆ ನೀಡಿದ್ದರು. ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಮೂಲಕ ಪ್ರಕಟಪಡಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿಯ ಕುರಿತು ಹೇಳಿಕೆ ನೀಡುವಾಗ ಎಚ್ಚರದಿಂದ ನೀಡಬೇಕಾಗಿದೆ ಎಂದರು ಸಂಜೀವ್ ಮಟ್ಟಂದುರ್ .
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 40ಸಾವಿರ ಅಂತರದಲ್ಲಿ ಮುನ್ನೆಡೆ ಸಾಧಿಸಲಿದೆ. ದ.ಕ.ಜಿಲ್ಲೆಯ ಬಿಜೆಪಿ ಪಕ್ಷದ ಕಾರ್ಯಕರ್ತರು 1861 ಬೂತ್‍ಗಳಿಗೂ ಭೇಟಿ ನೀಡಿದ್ದು, ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿಯು ಇನ್ನಷ್ಟು ಮಜಬೂತ್ ಆಗಿವೆ. ಬಿಜೆಪಿಯು ತನ್ನ ಅಭಿವೃದ್ಧಿಯನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ, ನರೇಂದ್ರ ಮೋದಿಯನ್ನು ಗೆಲ್ಲಿಸಬೇಕು. ಅಲ್ಲದೇ ನಳಿನ್ ಕುಮಾರ್ ಕಟೀಲ್ ಅವರನ್ನು ಈ ಬಾರಿಯು ಗೆಲ್ಲಿಸಿ ಅವರಿಗೆ ಹ್ಯಾಟ್ರಿಕ್ ಗೆಲುವನ್ನು ತಂದುಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ್ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.