Advertisement

ಬೆಂಗಳೂರು ಕೇಪ್‌ಟೌನ್‌ ಆಗಲು ಬಿಜೆಪಿ ಬಿಡದು

12:02 PM Feb 13, 2018 | |

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ವಿಚಾರದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ನಗರದಂತೆ ಆಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

Advertisement

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಸಿದ್ಧತೆ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಬಿಜೆಪಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಯೋಜನೆಗಳನ್ನು ರೂಪಿಸಲಿದೆ. ಇದನ್ನು ಮುಂಬರುವ ವಿಧಾನಸಭೆ ಚುನಾವಣೆಯ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಕೆಲವೇ ದಿನಗಳಲ್ಲಿ ಕುಡಿಯಲು ನೀರೇ ಇರುವುದಿಲ್ಲ. ಕೇಪ್‌ಟೌನ್‌ ಮಾತ್ರವಲ್ಲ, ಜಗತ್ತಿನ ಇತರ 11 ನಗರಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಬಿಬಿಸಿ ವರದಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ನಿಸರ್ಗದತ್ತವಾಗಿ ಬಂದಿರುವ ನೀರಿನ ಭಂಡಾರವೇ ಇದೆ. ಅದನ್ನು ಸಮರ್ಥವಾಗಿ ನಿರ್ವಹಿಸಿ, ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಬಿಜೆಪಿ ಬಳಿ ಐದು ವರ್ಷ, 10 ವರ್ಷ ಮತ್ತು 15 ವರ್ಷ ಅವಧಿಯ ಮೂರು ಪೂರ್ಣ ಪ್ರಮಾಣದ ಯೋಜನೆಗಳಿದ್ದು, ಅದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗುವುದು. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕೇಪ್‌ಟೌನ್‌ ಆಗಲು ಅವಕಾಶ ನೀಡುವುದಿಲ್ಲ ಎಂದರು.

ಅನುದಾನ ಬಳಸಿಕೊಂಡಿಲ್ಲ: “ನಗರದಲ್ಲಿ 100ಕ್ಕೂ ಹೆಚ್ಚು ಕೆರೆಗಳಿದ್ದು, ಒಂದಕ್ಕೊಂದು ಸಂಪರ್ಕ ಹೊಂದಿವೆ. ನಾನು ಪರಿಸರ ಖಾತೆ ಸಚಿವನಾಗಿದ್ದಾಗ ಮೂರು ಸಭೆಗಳನ್ನು ನಡೆಸಿ ಈ ಕೆರೆಗಳನ್ನು ಸ್ವತ್ಛಗೊಳಿಸಿ ಶುದ್ಧ ನೀರು ತುಂಬಿಸಲು ಮೂರು ಹಂತದ ಯೋಜನೆ ರೂಪಿಸಲಾಗಿತ್ತು. ಯೋಜನೆಗೆ ರಾಜ್ಯ ಸರ್ಕಾರವನ್ನೂ ಒಪ್ಪಿಸಿ ಕೇಂದ್ರ ಸರ್ಕಾರ 890 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಆದರೆ, ಸರ್ಕಾರ ಅದನ್ನು ಬಳಕೆ ಮಾಡಿಕೊಂಡಿಲ್ಲ,’ ಎಂದು ಆರೋಪಿಸಿದರು.

Advertisement

ಕೊಳಕಾದ ನೀರಿನ ಭಂಡಾರ: ಬೆಂಗಳೂರಿನಲ್ಲಿ ನೈಸರ್ಗಿಕ ನೀರಿನ ಭಂಡಾರವಿದೆ. ಆದರೆ, ಅದಕ್ಕೆ ಕೊಳಚೆ ನೀರು ಹೋಗುತ್ತದೆ. ಇದನ್ನು ತಪ್ಪಿಸಲು ತ್ಯಾಜ್ಯ ನೀರು ಕೆರೆಗೆ ಸೇರದಂತೆ ಶುದ್ಧೀಕರಣ ಘಟಕಗಳನ್ನು ಆರಂಭಿಸಬೇಕು. 50ಕ್ಕಿಂತ ಹೆಚ್ಚು ಅಪಾರ್ಟ್‌ಮೆಂಟ್‌ಗಳಿರುವ ಫ್ಲಾಟ್‌ಗಳಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂಬ ನಿಯಮವಿದ್ದರೂ ಅದನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿಲ್ಲ. ಇಂತಹ ದೊಡ್ಡ ನಗರದಲ್ಲಿ ಒಳಚರಂಡಿ ವ್ಯವಸ್ಥೆಯೇ ಸರಿ ಇಲ್ಲ ಎಂದರೆ ಅದು ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯತೆಯಲ್ಲವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next