Advertisement

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕಡಿವಾಣ​​​​​​​

06:00 AM Nov 19, 2018 | Team Udayavani |

ಧಾರವಾಡ/ಹುಬ್ಬಳ್ಳಿ: ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಟಾಗಿಲು ಮುಚ್ಚಲು ತೃತೀಯ ರಂಗದಿಂದ ಎಲ್ಲ ಪ್ರಯತ್ನಗಳು ನಡೆದಿವೆ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ವ್ಯವಸ್ಥೆಗೆ ಅಪಾಯ ತರುವ ಕಾರ್ಯ ಆಗುತ್ತಿದೆ. ಇದರಿಂದ ಜನ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಆದ್ದರಿಂದ ಜಾತ್ಯತೀತ ವ್ಯವಸ್ಥೆ ಉಳಿಸಿಕೊಳ್ಳಲು ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕಡಿವಾಣ ಹಾಕಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಪರಸ್ಪರ ಸಹಮತದಿಂದ ಸೀಟು ಹಂಚಿಕೊಳ್ಳುತ್ತೇವೆ. ಅದಕ್ಕೂ ಮೊದಲು ಸಿದ್ದರಾಮಯ್ಯ ಜತೆ ಹಲವು ಒಡಂಬಡಿಕೆ ಕುರಿತು ಚರ್ಚಿಸುತ್ತೇವೆ. ಇನ್ನು 2-3 ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೇರೆ ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೊಳ್ಳಲಿವೆ ಎಂದರು.

ರಾಜ್ಯದಲ್ಲಿ ಬಹುಮತ ಹೊಂದಿದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೂ ಐದು ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಲಾಯಿತು. ಹೀಗಿರುವಾಗ ತೃತೀಯ ರಂಗದ ಸರಕಾರದಲ್ಲೂ ಐದು ವರ್ಷಗಳ ಅವಧಿಯಲ್ಲಿ ಮೂವರು ಪ್ರಧಾನಿಗಳಾಗಿದ್ದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ 1996ರ ಫಲಿತಾಂಶ ಮರುಕಳಿಸಲಿದೆ ಎಂದರು.

ಸಚಿವ ಸ್ಥಾನ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ತಿಂಗಳಾಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ, ಬೋರ್ಡ್‌, ನಿಗಮ-ಮಂಡಳಿ ನೇಮಕ ಕೂಡ ನಡೆಯಲಿದೆ. ಖಾಲಿ ಇರುವ ಸ್ಥಾನ ಭರ್ತಿ ಮಾಡುವುದು ಅತಿ ಅವಶ್ಯ. ಇದನ್ನು ಮಾಧ್ಯಮದವರಿಂದ ನಾನು ಕಲಿಯಬೇಕಾಗಿಲ್ಲ. ಕೆಲ ಮಾಧ್ಯಮಗಳು ಎಲ್ಲವನ್ನು ತಪ್ಪಾಗಿ ಬಿಂಬಿಸುತ್ತವೆ. ಸಮಾಧಾನದಿಂದ ಮಾತನಾಡಬೇಕು. ಪ್ರಚೋದನೆ ನೀಡುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

ಐದೂ ವರ್ಷ ಕುಮಾರಸ್ವಾಮಿ ಸಿಎಂ: ಎಚ್‌.ಡಿ. ಕುಮಾರಸ್ವಾಮಿ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಈ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಈಗಾಗಲೇ ಹೇಳಿದೆ. ಡಿಸಿಎಂ ಡಾ| ಜಿ. ಪರಮೇಶ್ವರ ಯಾವ ಅರ್ಥದಲ್ಲಿ ನಾನು ಸಿಎಂ ಆಗುವೆ ಎಂದಿದ್ದಾರೋ ಗೊತ್ತಿಲ್ಲ.  ಬಸವರಾಜ ಹೊರಟ್ಟಿ ಹಿರಿಯ ಸದಸ್ಯರಾಗಿದ್ದು, ಅವರ ಅನುಭವಕ್ಕೆ ಗೌರವ ನೀಡಲಾಗುವುದು. ಸಚಿವ ಸಂಪುಟ ವಿಸ್ತರಣೆ ಸಂದರ್ಭ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಯೋಚಿಸಲಾಗುವುದು. ಇದೇ ವೇಳೆ ಅನಿತಾ ಕುಮಾರಸ್ವಾಮಿ ಸಚಿವರಾಗುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಿ ಎಂದರು.

Advertisement

ಪ್ರಧಾನಿ ಅಭ್ಯರ್ಥಿ ಊಹಾಪೋಹ:  ನಾನು ಲೋಕಸಭೆ ಚುನಾವಣೆಗೆ ನಿಲ್ಲುವುದರ ಬಗ್ಗೆಯೇ ತೀರ್ಮಾನ ಮಾಡಿಲ್ಲ. ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿ ಎನ್ನುವುದು ಕೇವಲ ಊಹಾಪೋಹ ಮಾತ್ರ. ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಈ ಬಗ್ಗೆ ತೀರ್ಮಾನ ಮಾಡಬೇಕಿದ್ದು, ನಾವೀಗ ಕಾಂಗ್ರೆಸ್‌ ಬೆಂಬಲದಲ್ಲಿದ್ದೇವೆ. ಹೀಗಾಗಿ ಆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next