ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದ ಅಸಮಾಧಾನಕ್ಕೆ ತೆರೆ ಎಳೆವ ಪ್ರಯತ್ನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡಿದ್ದು, ಬೂತ್ ಸಮಿತಿ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿಗಳ ಪಟ್ಟಿ ಅಂತಿಮಗೊಳಿಸಿ, ಅಮಾನತುಗೊಂಡಿದ್ದ ವರಿಗೂ ಅವಕಾಶ ಕಲ್ಪಿಸಿದ್ದಾರೆ.
ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಮತ್ತು ಗಿರೀಶ್ ಪಟೇಲ್ ಅವರನ್ನು ಆಧುನಿಕ ಪ್ರಚಾರ ಸಮಿತಿಗೆ ನೇಮಿಸಲಾಗಿದೆ. ಇದರೊಂದಿಗೆ ಸಮಿತಿ ಸದಸ್ಯರ ಸಂಖ್ಯೆ 47ಕ್ಕೆ ಹೆಚ್ಚಿದೆ. ಅದೇರೀತಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಸೊಗಡು ಶಿವಣ್ಣ ಮತ್ತು ಅಮಾನತುಗೊಂಡಿದ್ದ ಎಂ.ಬಿ.ನಂದೀಶ್ ರನ್ನು ಸಾಂಪ್ರದಾಯಿಕ ಪ್ರಚಾರ ಸಮಿತಿಗೆ ನೇಮಿಸಿದ್ದು, ಸಮಿತಿ ಸದಸ್ಯಬಲ 37ಕ್ಕೇರಿದೆ.
ಕೇಶವಪ್ರಸಾದ್‌ರನ್ನು ಬೂತ್ ಸಮಿತಿಗೆ ನೇಮಿಸಿದ್ದು, ಈ ಸಮಿತಿ ಬಲವೂ 37ಕ್ಕೇರಿದೆ. ಈ ಹಿಂದೆ ಬೂತ್ ಸಮಿತಿ ನೇತೃತ್ವ ವಹಿಸಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ.ಅರುಣ್ ಕುಮಾರ್ ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ನೇಮಕಗೊಂಡಿರುವ ಕಾರಣ ಯಾವುದೇ ಸ್ಥಾನ ನೀಡಿಲ್ಲ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಂತಿಮಗೊಳಿಸಿದ್ದ ಬೂತ್ ಸಮಿತಿ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪಟ್ಟಿಯನ್ನು ಯಡಿಯೂರಪ್ಪ ಅವರ ಗಮನಕ್ಕೆ ತಾರದೆ ಅಂತಿಮಗೊಳಿಸಲಾಗಿದೆ ಮತ್ತು ಬೂತ್ ಸಮಿತಿಯಲ್ಲಿ ಸಂತೋಷ್ ಕಡೆಯವರೇ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಪಕ್ಷದಲ್ಲಿ ಅಸಮಾಧಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಧಿಕೃತವಾಗಿ ಮೂರೂ ಸಮಿತಿಗಳ ಹೊಸ ಪಟ್ಟಿ ಪ್ರಕಟಿಸಿ. ಪಟ್ಟಿಯಲ್ಲಿ ಕೈಬಿಟ್ಟವರನ್ನೂ ಸೇರಿಸಿಕೊಂಡಿದ್ದಾರೆ ಎಂದು
ಮೂಲಗಳು ತಿಳಿಸಿವೆ.