Advertisement
ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಿಜೆಪಿಗೆ ಉತ್ತಮ ನೆಲೆ ಇದೆ. ಒಂದೂವರೆ ದಶಕದಿಂದೀಚೆಗೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಹೆಚ್ಚು ಸ್ಥಾನ ಪಡೆಯುತ್ತಿದ್ದು, ಬಿಜೆಪಿಯ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ ಪಕ್ಷ ತಳಮಟ್ಟದಿಂದ ಬೇರೂರಲು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರ ಪರಿಶ್ರಮ ದೊಡ್ಡದಿತ್ತು.
Related Articles
Advertisement
ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವರಿಷ್ಠರು, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಈ ನಡುವೆ ಅನಂತ ಕುಮಾರ್ ಅಕಾಲಿಕವಾಗಿ ನಿಧನರಾದರು. ನಂತರ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಎಂದು ನಿರೀಕ್ಷಿಸಲಾಗಿತ್ತು. ತೇಜಸ್ವಿನಿ ಸಹ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ರಾಜ್ಯ ಕೋರ್ ಕಮಿಟಿಯೂ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಆದರೂ, ವರಿಷ್ಠರು ಅಂತಿಮವಾಗಿ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿದರು. ಬಳಿಕ ತೇಜಸ್ವಿನಿ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಅಂದರೆ ಸಾಮಾನ್ಯ ಕಾರ್ಯಕರ್ತರಂತೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಅದರ ಆಧಾರದ ಮೇಲೆ ಸ್ಥಾನಮಾನ ಪಡೆಯಲಿ ಎಂಬ ಸಂದೇಶವನ್ನು ವರಿಷ್ಠರು ಸ್ಪಷ್ಟವಾಗಿ ರವಾನಿಸಿದ್ದಾರೆ ಎಂಬುದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರ ಅನಿಸಿಕೆ.
ಅಭ್ಯರ್ಥಿ ಆಯ್ಕೆಯಲ್ಲೂ ದಿಟ್ಟ ನಿಲುವು: ಇನ್ನೊಂದೆಡೆ, ಯಡಿಯೂರಪ್ಪ ಅವರು ಪ್ರಭಾವಿ ನಾಯಕರಾಗಿ ಮುಂದುವರಿದಿದ್ದರೂ ಅವರ ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ ಒಪ್ಪುವುದಿಲ್ಲ ಎಂಬ ಸಂದೇಶವನ್ನು ಆಗಾಗ್ಗೆ ರವಾನಿಸುತ್ತಿತ್ತು. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವೇಳೆ ಇದು ಸ್ಪಷ್ಟವಾಗಿತ್ತು. ಯಡಿಯೂರಪ್ಪ ನೇತೃತ್ವದ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಬಹುತೇಕರಿಗೆ ಟಿಕೆಟ್ ನೀಡಿದರೂ ಕೆಲವರಿಗೆ ನಿರಾಕರಿಸಲಾಗಿತ್ತು. ರಾಜ್ಯದ ಹಾಲಿ ಸಂಸದರಿಗೆಲ್ಲಾ ಟಿಕೆಟ್ ಕೊಟ್ಟರೂ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೆಸರು ಮೊದಲ ಪಟ್ಟಿಯಲ್ಲಿರಲಿಲ್ಲ.
ಕೆಲ ದಿನಗಳ ಬಳಿಕ ಟಿಕೆಟ್ ಅಂತಿಮಗೊಳಿಸಲಾಗಿತ್ತು. ಚಿಕ್ಕೋಡಿ ಕ್ಷೇತ್ರದಿಂದ ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡಬೇಕು ಎಂಬ ಯಡಿಯೂರಪ್ಪ ಒತ್ತಡದ ಹೊರತಾಗಿಯೂ ಅಣ್ಣಾ ಸಾಹೇಬ ಜೊಲ್ಲೆಗೆ ಟಿಕೆಟ್ ನೀಡಿದ್ದರು. ನಂತರ, ಯಡಿಯೂರಪ್ಪ ಅವರು ರಮೇಶ್ ಕತ್ತಿ, ಉಮೇಶ್ ಕತ್ತಿ ಅವರನ್ನು ಸಮಾಧಾನಪಡಿಸಬೇಕಾಯಿತು.
ಲೋಕಸಭಾ ಚುನಾವಣೆಗೆ ಮೋದಿ ಪ್ರಚಾರ ಸಭೆ ಹಾಗೂ ಅಮಿತ್ ಶಾ ಪ್ರಚಾರದ ಹೊರತಾಗಿ ಉಳಿದ ನಾಯಕರ ಪ್ರಚಾರಕ್ಕೆ ವಿಶೇಷ ಆದ್ಯತೆ ಇರಲಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಪ್ರಚಾರ ಎಂಬಂತೆ ಎಲ್ಲಿಯೂ ಬಿಂಬಿತವಾಗಲಿಲ್ಲ. ಬದಲಿಗೆ ರಾಜ್ಯಾಧ್ಯಕ್ಷರಾಗಿ ಅವರು ಎಲ್ಲೆಡೆ ಪ್ರಚಾರ ನಡೆಸಿದರು. ಇತರ ನಾಯಕರು ತಮಗೆ ಗೊತ್ತುಪಡಿಸಿದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸೀಮಿತರಾದರು. ಈ ಎಲ್ಲ ದಿಟ್ಟ ನಿಲುವುಗಳ ಮೂಲಕ ವರಿಷ್ಠರು ವ್ಯಕ್ತಿಗಿಂತ ಪಕ್ಷ ಸಂಘಟನೆ ಮುಖ್ಯ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದ್ದಾರೆ.
ಇದರ ಸುಳಿವು ಸಿಕ್ಕಿದೆ ಎಂಬಂತೆ ಯಡಿಯೂರಪ್ಪ ಅವರು ಪ್ರತಿಪಕ್ಷ ಹಾಗೂ ರಾಜ್ಯಾಧ್ಯಕ್ಷ ಎರಡೂ ಜವಾಬ್ದಾರಿ ನಿರ್ವಹಿಸುವುದು ಕಷ್ಟ ಎಂದು ಹೇಳಿದ್ದಾರೆ. ಆ ಮೂಲಕ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಇಂಗಿತ ತೋರಿದ್ದಾರೆ. ಇವೆಲ್ಲಾ ಬೆಳವಣಿಗೆಗಳು ಸಂಘಟನೆ ಕೇಂದ್ರಿತವಾಗಿ ಪಕ್ಷ ಬೆಳವಣಿಗೆಗೆ ಹೊಂದಲು ಸಹಕಾರಿಯಾಗಲಿದೆ ಎಂದು ಉನ್ನತ ನಾಯಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೆಡ್ಡಿ ಸಹೋದರರ ಪ್ರಭಾವಳಿ ಗೌಣ: ದಶಕದ ಹಿಂದೆ ಉಚ್ಛಾ†ಯ ಸ್ಥಿತಿಯಲ್ಲಿದ್ದ ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಸಹೋದರರ ಪ್ರಭಾವಳಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಗೌಣವಾಗಿತ್ತು. ಎಲ್ಲ ನಾಯಕರು ಪಕ್ಷದ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸಿದರೆ ಹೊರತು ಎಲ್ಲಿಯೂ ಪ್ರಧಾನವಾಗಿ ಕಾಣಿಸಿಕೊಳ್ಳಲಿಲ್ಲ. ಮಾಜಿ ಸಚಿವ ಬಿ.ಶ್ರೀರಾಮುಲು ಸಹ ತಾರಾ ಪ್ರಚಾರಕ್ಕಷ್ಟೇ ಸೀಮಿತರಾದರು. ಆ ಮೂಲಕ ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಮೇಲಿದ್ದ ಅವರ ಹಿಡಿತ ತಪ್ಪಿಸುವುದರ ಜತೆಗೆ ಪಕ್ಷದಲ್ಲೂ ಕೆಲ ಚಟುವಟಿಕೆಗಷ್ಟೇ ಸೀಮಿತಗೊಳಿಸಿದ್ದು ಗಮನಾರ್ಹ ಬೆಳವಣಿಗೆ.
* ಎಂ. ಕೀರ್ತಿಪ್ರಸಾದ್