ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮುಂದುವರಿದಿದ್ದು, ಸೋಮವಾರ ಸಿ.ವಿ.ರಾಮನ್‌ನಗರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದಾರೆ.
ಬೆಳಗ್ಗೆ ಸಿ.ವಿ.ರಾಮನ್‌ನಗರ ಕ್ಷೇತ್ರದ ಹಲಸೂರು ಲಕ್ಷ್ಮೀಪುರದಿಂದ ಹೊರಟ ಪಾದಯಾತ್ರೆ ಸಿಎಂಎಚ್ ರಸ್ತೆ. 100 ಅಡಿ ರಸ್ತೆ ಮಾರ್ಗವಾಗಿ ನ್ಯೂತಿಪ್ಪಸಂದ್ರದವರೆಗೆ ನಡೆಯಿತು. ಪಾದಯಾತ್ರೆ ವೇಳೆ ನ್ಯೂತಿಪ್ಪಸಂದ್ರದಲ್ಲಿ ರಸ್ತೆ ಬದಿ ಅಂಗಡಿಯಲ್ಲಿ ಬಿಜೆಪಿ ನಾಯಕರು ಚಹಾ ಸೇವಿಸಿದರು. ಈ ವೇಳೆ ಅಲ್ಲಿ ಬಂದ ವೃದ್ಧೆಯೊಬ್ಬರಿಗೆ ಆರ್.ಅಶೋಕ್ ಅವರು ಚಹಾ ಕೊಡಿಸಿದರಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಆರೋಪ ಪಟ್ಟಿ ಇರುವ ಕರಪತ್ರವನ್ನೂ ನೀಡಿದರು.
ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಸ್ಥಳೀಯ ಶಾಸಕ ಎಸ್.ರಘು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಆಡಳಿತಾರೂಢ ಕಾಂಗ್ರೆಸ್ ಅದನ್ನು ತಡೆಯುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ದುಡ್ಡು ಹೊಡೆಯುವ ಸರ್ಕಾರ ಅಧಿಕಾರದಲ್ಲಿದ್ದು, ವೈಟ್ ಟ್ಯಾಪಿಂಗ್ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ. ಮಂಗಳಯಾನಕ್ಕೆ ಆದ ಖರ್ಚಿಗಿಂತ ಹೆಚ್ಚು ವೆಚ್ಚ ಮಾಡಿ 12 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು. ಶಾಸಕ ಎ.ರಘು ಮತ್ತಿತರರು ಇದ್ದರು.
ಸಂಜೆ ಸಚಿವ ಕೃಷ್ಣಬೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಸಲಾಯಿತು. ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಆರಂಭವಾದ ಪಾದಯಾತ್ರೆಯಲ್ಲಿ ಆರ್.ಅಶೋಕ್ ಜತೆಗೆ ಶಾಸಕ ಎಸ್.ಮುನಿರಾಜು ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ಪಾದಯಾತ್ರೆ ಆರಂಭಕ್ಕೂ ಮುನ್ನ ಮಹಿಳಾ ಬಿಜೆಪಿ ಕಾರ್ಯಕರ್ತರು ಬಿಜೆಪಿ ಮುಖಂಡರಿಗೆ ಆರತಿ ಎತ್ತಿ ಹಣೆಗೆ ತಿಲಕ ಇಟ್ಟು ಕಳುಹಿಸಿದ್ದು ವಿಶೇಷವಾಗಿತ್ತು.