Advertisement
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆ ಮಾಡುವುದು ವಿಳಂಬವಾದರೂ ಬಹುತೇಕ ಕ್ಷೇತ್ರಗಳಲ್ಲಿ ಇಂಥವರಿಗೇ ಟಿಕೆಟ್ ಎಂದು ಹೇಳಿ ಕೆಲಸ ಆರಂಭಿಸುವಂತೆ ಚುನಾವಣೆಗೆ 5-6 ತಿಂಗಳು ಇರುವಾಗಲೇ ಸೂಚನೆ ನೀಡಲಾಗುತ್ತದೆ. ಆದರೆ, ಈ ಬಾರಿ ಬಹುತೇಕ ಹಾಲಿ ಶಾಸಕರಿಗೆ ಮತ್ತು 2008ರಲ್ಲಿ ಗೆದ್ದು 2013ರಲ್ಲಿ ಸೋತಿದ್ದ ಸುಮಾರು 15-20 ಮಂದಿಗೆ ಮಾತ್ರ ಟಿಕೆಟ್ ಖಾತರಿಯಾಗಿದೆ. ಹೀಗಾಗಿ ಚುನಾವಣಾ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕ ಆಕಾಂಕ್ಷಿಗಳಲ್ಲಿ ಕಾಣಿಸಿಕೊಂಡಿದೆ.
Related Articles
Advertisement
ಹೀಗಾಗಿ ಒಂದೊಮ್ಮೆ ಯಡಿಯೂರಪ್ಪ ಅವರಿಗೆ ಟಿಕೆಟ್ ಹಂಚಿಕೆ ಅಧಿಕಾರ ನೀಡಿದರೆ ಆಗ ಅವರೊಂದಿಗೆ ಕೆಜೆಪಿಯಲ್ಲಿದ್ದವರಿಗೆ ಆದ್ಯತೆ ನೀಡುವ ಸಾಧ್ಯತೆಯಿದ್ದು, ಆಗ ಪಕ್ಷದಲ್ಲಿ ಮತ್ತೆ ಅಸಮಾಧಾನ ಹೊಗೆಯಾಡುತ್ತದೆ. ಇದು ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ದೂರನ್ನು ರಾಜ್ಯದ ಬಿಜೆಪಿ ಮುಖಂಡರು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮೂಲಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ 2ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತ ಸಮೀಕ್ಷಾ ವರದಿ ಆಧರಿಸಿ ತಮ್ಮೊಂದಿಗೆ ಚರ್ಚಿಸದೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಅಮಿತ್ ಶಾ ಸೂಚಿಸಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಖಾತರಿಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಬೆಳಗಾವಿ ದಕ್ಷಿಣದಲ್ಲಿ ಅಭಯ್ ಪಾಟೀಲ್, ಬೈಲಹೊಂಗಲದಲ್ಲಿ ಜಗದೀಶ್ ಮೆಟಗುಡ್ಡ, ತೇರದಾಳದಲ್ಲಿ ಸಿದ್ದು ಸವದಿ, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ, ಅಫಜಲಪುರದಲ್ಲಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂ.ವೈ.ಪಾಟೀಲ್, ಸುರಪುರದಲ್ಲಿ ರಾಜೂಗೌಡ, ಕನಕಗಿರಿಯಲ್ಲಿ ಕೆಜೆಪಿಯಿಂದ ಸೋತಿದ್ದ ಬಸವರಾಜ ದಡೇಸೂಗೂರು, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ನರಗುಂದದಲ್ಲಿ ಸಿ.ಸಿ.ಪಾಟೀಲ್, ಶಿರಹಟ್ಟಿಯಲ್ಲಿ ರಾಮಪ್ಪ ಲಮಾಣಿ, ಹಾನಗಲ್‌ನಲ್ಲಿ ಸಿ.ಎಂ.ಉದಾಸಿ, ಬೀಳಗಿ ಅಥವಾ ಜಮಖಂಡಿಯಲ್ಲಿ ಮುರುಗೇಶ್ ನಿರಾಣಿ ಅವರಿಗೆ ಟಿಕೆಟ್ ಬಹುತೇಕ ಖಾತರಿ ಎಂದು ಹೇಳಲಾಗಿದೆ.
ಪೈಪೋಟಿ ತೀವ್ರ: ಉಳಿದಂತೆ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಎರಡಕ್ಕಿಂತ ಹೆಚ್ಚಾಗಿದ್ದು, ಈ ಕ್ಷೇತ್ರಗಳಲ್ಲಿ ಯಾರ ಹೆಸರನ್ನು ಅಂತಿಮಗೊಳಿಸಬೇಕು ಎಂಬ ಬಗ್ಗೆ ಸಮೀಕ್ಷೆ ವರದಿ ಆಧರಿಸಿ ಡಿಸೆಂಬರ್ ಅಂತ್ಯದ ವೇಳೆ ಚರ್ಚೆ ಆರಂಭವಾಗಲಿದೆ. ಬೇರೆ ಬೇರೆಯವರಿಂದ ಮೂರು ಸಮೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ಎರಡು ಸಮೀಕ್ಷೆಗಳಲ್ಲಿ ಯಾರ ಹೆಸರು ಮೊದಲು ಬರುತ್ತದೋ ಅವರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
– ಪ್ರದೀಪ್ ಕುಮಾರ್ ಎಂ.