ಕಲಬುರಗಿ: ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಪಕ್ಷಕ್ಕೆ ಆಗಮಿಸಿದ್ದರಿಂದ ಆನೆಬಲ ಬಂದಂತಾಗಿದೆ. ಅವರು ಬಿಜೆಪಿಗೆ ಬರುವುದಾಗಿ ವರ್ಷದ ಮೊದಲೇ ಹೇಳಿದ್ದರು. ಮಧ್ಯಂತರ ಚುನಾವಣೆ ಮಾಡಿ ಜನರಿಗೆ ಹೊರೆ ಮಾಡುವುದು ಬೇಡ ಎಂದು ನಾನೇ ಹೇಳಿದ್ದೆ.
ಹೀಗಾಗಿ ಈಗ ಪಕ್ಷಕ್ಕೆ ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿಯಾಗುತ್ತೇನೆ. ನನ್ನ ಮೊದಲ ಸಂಪುಟದಲ್ಲಿ ಮಾಲಿಕಯ್ಯ ಗುತ್ತೇದಾರ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಜಾಗಿರದಾರ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಲಿಕಯ್ಯ ಗುತ್ತೇದಾರ ಪಕ್ಷಕ್ಕೆ ಬರುವ ವಿಚಾರ ಎಂ.ವೈ. ಪಾಟೀಲ್ ಅವರಿಗೂ ತಿಳಿದಿತ್ತು. ಮೂರು ಬಾರಿ ಸೋತರೂ ಹಿರಿಯರು ಎನ್ನುವ ಕಾರಣಕ್ಕೆ ಎಂ.ವೈ. ಪಾಟೀಲ್ ಅವರಿಗೆ ಗೌರವ ನೀಡಿ, ಸ್ಥಾನಮಾನ ನೀಡುವುದಾಗಿ ತಿಳಿಸಿದ್ದೆವು.
ಆದರೆ ಅವರು ಮಾಲಿಕಯ್ಯ ಗುತ್ತೇದಾರ ಆಗಮನವಾಗುತ್ತಿದ್ದಂತೆ ಪಕ್ಷ ತೊರೆದು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಮನೆಯಲ್ಲೇ ಜಗಳ ಹಚ್ಚುವ ಕುತಂತ್ರಿಗಳು ಕಾಂಗ್ರೆಸ್ಸಿಗರು.
ನನ್ನ ಸಹೋದರರ ಮನ ಕೆಡಿಸುವ ಪ್ರಯತ್ನ ಮಾಡಿದ್ದರು. ಆದರೆ ನಾವು ಜೇನಿನ ಗೂಡಿನಂತೆ ಸದಾ ಒಂದಾಗಿದ್ದೇವೆ. ಸ್ವಾರ್ಥ ರಾಜಕಾರಣ, ಪುತ್ರ ವ್ಯಾಮೋಹ, ಹಿಂದುಳಿದ ವರ್ಗಕ್ಕೆ ಅನ್ಯಾಯ ಹೀಗೆ ಅನೇಕ ಕಾರಣಗಳಿಂದ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇನೆ. ಈ ಬಾರಿ ಹೈಕ ಭಾಗ ಕಾಂಗ್ರೆಸ್ ಮುಕ್ತವಾಗುವುದು ನಿಶ್ಚಿತ ಎಂದರು.
ಮುಖಂಡ ಬಿ.ಜಿ. ಪುಟ್ಟಸ್ವಾಮಿ, ರಾಜಕುಮಾರ ಪಾಟೀಲ್ ತೆಲ್ಕೂರ, ದೊಡ್ಡಪ್ಪಗೌಡ ಪಾಟೀಲ, ಅವ್ವಣ್ಣ ಮ್ಯಾಕೇರಿ, ಅಶೋಕ ಬಗಲಿ, ಮಲ್ಲಿಕಾರ್ಜುನ ನಿಂಗದಳ್ಳಿ, ಶೈಲೇಶ ಗುಣಾರಿ, ಶೋಭಾ ಬಾಣಿ, ಬಸವರಾಜ ಸಪ್ಪನಗೋಳ, ರಮೇಶ ನೀಲಗಾರ, ಚಂದಮ್ಮ ಪಾಟೀಲ್, ಡಾ| ಜ್ಯೋತಿ, ವಿಶ್ವನಾಥ ರೇವೂರ, ನಿತೀನ್ ಗುತ್ತೇದಾರ, ಬಿ.ವೈ. ಪಾಟೀಲ್, ಶಿವಪುತ್ರಪ್ಪ ಕರೂರ, ರಾಜಶೇಖರ ಹಿರೇಮಠ, ಪಾಶಾ ಮಣೂರ, ಶ್ರೀಶೈಲ ಬಳೂರ್ಗಿ ಇದ್ದರು.