ಕಂಪ್ಲಿ: ಇತ್ತೀಚೆಗೆ ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಮಣ್ಣು ಮುಕ್ಕಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮೋದಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದಂತಾಗಿದೆ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತದ ಭ್ರಮೆಯಲ್ಲಿದ್ದಾರೆ. ಆದರೆ, ದೇಶದಲ್ಲಿ 100 ಜನ ಮೋದಿಯವರು ಬಂದರೂ, ಕಾಂಗ್ರೆಸ್ ಭಾರತ ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.
ಮೋದಿಯವರು ಸುಳ್ಳಿನ ಸರದಾರರೇ ಹೊರತು, ದೇಶವನ್ನು ಅಭಿವೃದ್ಧಿ ಮಾಡುವ ಮನುಷ್ಯನಲ್ಲ. ಮೋದಿಯವರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಸುಳ್ಳಿನ ಮೋದಿಯವರಿಗೆ ನೋಬಲ್ ಪ್ರಶಸ್ತಿ ನೀಡಬೇಕಾಗಿದೆ. ಕಪ್ಪುಹಣ ವಾಪಸ್ ತರುವ ನೆಪದಲ್ಲಿ ದೇಶದ ಜನರಿಗೆ ಮಹಾಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಎಸ್‌ಟಿ ತಂದು ಜನರ ಬದುಕು ನುಚ್ಚನೂರು ಮಾಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ, ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಉದ್ಯೋಗ ಸೃಷ್ಟಿಸದೆ ಇರುವ ಉದ್ಯೋಗಗಳನ್ನು ಕಸಿದುಕೊಂಡು ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದ್ದು, ಹೂಳು ತೆಗೆದರೆ ಮಾತ್ರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಹರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಗಮನ ಹರಿಸಲಾಗುವುದು. ಜಿಲ್ಲೆಯ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡು ದಾಖಲೆಯ ಮತಗಳ ಅಂತರದಿಂದ ಆಯ್ಕೆ ಮಾಡಿದ್ದು, ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆ.ಶ್ರೀನಿವಾಸರಾವ್, ಕೆ.ಷಣ್ಮುಕಪ್ಪ, ಎಚ್.ಈರಣ್ಣ, ಎಂ.ಸುಧೀರ್, ನಾಯಕರ ವೆಂಕೋಬಣ್ಣ, ದೊಡ್ಡ ಬಸಪ್ಪ, ಗಿರಿಮಲ್ಲಪ್ಪ, ಕಲ್ಲಕಂಬ ಪಂಪಾಪತಿ,ಇಟಗಿ ಬಸವರಾಜಗೌಡ, ಬಿ.ನಾರಾಯಣಪ್ಪ, ಪಿ.ಮೂಕಯ್ಯಸ್ವಾಮಿ ಇನ್ನಿತರರಿದ್ದರು.