ಚಿತ್ರದುರ್ಗ: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಪಕ್ಷ ಮತ್ತು ಆ ಪಕ್ಷದ ಮುಖಂಡರು ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿರುವ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಅಧಿಕಾರದ ಹಿಂದೆ ಬಿದ್ದಿರುವ ಬಿಜೆಪಿಯವರಿಗೆ ಬಹುಮತವಿಲ್ಲದಿದ್ದರೂ ಸದಾ ಗೊಂದಲಮಯ ಹೇಳಿಕೆ ನೀಡುವ ಮೂಲಕ ರಾಜ್ಯದ ಜನತೆಯನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಸಂವಿಧಾನಬದ್ಧವಾಗಿ ಬಹುಮತ ಇದ್ದವರಿಗೆ ಆಡಳಿತ ನಡೆಸಲು ಬಿಡದೆ ಸಮ್ಮಿಶ್ರ ಸರ್ಕಾರದಲ್ಲಿನ ಶಾಸಕರ ಖರೀದಿ ಮಾಡುವ ಷಡ್ಯಂತ್ರವನ್ನು ರಾಜ್ಯ ಸರ್ಕಾರ ರಚನೆಯಾದ ದಿನದಿಂದಲೂ ಮಾಡಲಾಗುತ್ತಿದೆ. ಏನಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ಕೆಟ್ಟ ಹಂಬಲದಿಂದ ಶಾಸಕರ ಖರೀದಿಗೆ ಮುಂದಾಗಿರುವುದು ಅತ್ಯಂತ ಹೇಡಿತನದ ಕೃತ್ಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಹಸನ್ ತಾಹೀರ್ ಮಾತನಾಡಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸೂಚನೆಯಂತೆ ಅರ್ಧ ಗಂಟೆ ಕಾಲ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮನೆ ಎದುರು ಪ್ರತಿಭಟನೆ ನಡೆಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಿಗದ ಕಾರಣ ನಿರಾಸೆಗೊಂಡ ಬಿಜೆಪಿ, ಅಧಿಕಾರ ಕೈತಪ್ಪಿ ಹೋಗಿದ್ದರಿಂದ ಮೈತ್ರಿ ಸರ್ಕಾರ ಆಡಳಿತ ನಡೆಸಲು ಬಿಡದೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ನೀಡಲಾಗುತ್ತಿದೆ. ಆರಂಭದಿಂದಲೇ ಸರ್ಕಾರಕ್ಕೆ ಅಡ್ಡಿಪಡಿಸುತ್ತಲೇ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಶಾಸಕರನ್ನು ಖರೀದಿಸಲು ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟಿದ್ದಾರೆ. ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕೆಂಬ ತಂತ್ರಗಾರಿಕೆ ಫಲಿಸುವುದಿಲ್ಲ. ಇನ್ನಾದರೂ ಬಿಜೆಪಿ ನಾಯಕರು ಅಧಿಕಾರದ ಆಸೆ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಾಕೀತು ಮಾಡಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕುವ ವಿಚಾರ ತಿಳಿದ ಪೊಲೀಸರು ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಶಾಸಕರ ನಿವಾಸದ ಗೇಟ್ ಬಂದ್ ಮಾಡಿ ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟಿದ್ದರು. ಇದರಿಂದ ಕುಪಿತಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು. ಇದರಿಂದ ವಾಹನ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿತ್ತು.
ಯುವ ಕಾಂಗ್ರೆಸ್ ವತಿಯಿಂದ ಬಿಜೆಪಿ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎನ್ನುವ ವಿಷಯ ಅರಿತ ಪೊಲೀಸರು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ಮನೆಗಳಿಗೆ ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧು ಪಾಲೇಗೌಡ, ವಸೀಂ, ಅಶೋಕ್ ನಾಯ್ಡು, ಸಾದತ್ ಬಗ್ಗು, ಜಮೀಲ್, ಆಜಾಂ, ಇಮ್ತಿಯಾಜ್, ಫಾರೂಖ್, ಯೂನೂಸ್, ಕರಿಯಪ್ಪ, ರೆಹಮಾನ್, ಶಶಾಂಕ್, ಖುದ್ದೂಸ್ ಮೊದಲಾದವರು ಭಾಗವಹಿಸಿದ್ದರು.