ಬೆಂಗಳೂರು: ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಖರೀದಿ ಪದ್ಧತಿಯ ಸರ್ಕಾರ ರಚನೆಗೆ ಬಿಜೆಪಿ ನಾಂದಿ ಹಾಡಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಕಿಡಿಕಾರಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜ್ ಪರ ಭಾನುವಾರ ವೃಷಾಭವತಿನಗರ ವಾರ್ಡ್‌ನ ವಿವಿಧೆಡೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಾದೇಶಕ್ಕೆ ವಿರುದ್ಧವಾಗಿ ಹಣ, ಅಧಿಕಾರದ ಆಮಿಷ, ಬೆದರಿಕೆ ಒಡ್ಡಿ ಶಾಸಕರನ್ನು ಖರೀದಿಸಿ ದೇಶದೆಲ್ಲೆಡೆ ಸರ್ಕಾರ ರಚನೆ ಮಾಡುವ ಮೂಲಕ ಬಿಜೆಪಿ ಸಂವಿಧಾನಕ್ಕೆ ಅಪಚಾರವೆಸಗುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅನರ್ಹ ಶಾಸಕರಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದು, ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಮಾತನಾಡಿ, ದೇಶದಲ್ಲೇ ನುಡಿದಂತೆ ನಡೆದ ಏಕೈಕ ಸರ್ಕಾರ, ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸಿದ ದೇಶದ ಪ್ರಥಮ ಸರ್ಕಾರ ಎಂಬ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದರು.
ಬಸವಣ್ಣನವರ ಆಶಯದಂತೆ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಲ್ಲ ಜಾತಿ, ವರ್ಗ, ಧರ್ಮದ ಜನರಿಗೆ ಅನುಕೂಲವಾಗುವಂಥ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ವಿದ್ಯಾಸಿರಿ ರೀತಿಯ ಉಪಯುಕ್ತ ಕಾರ್ಯಕ್ರಮ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೂ ಸಹಕಾರ ನೀಡಿದ್ದಾರೆ.
ಜನತೆ ನನ್ನನ್ನು ಕೈಹಿಡಿದರೆ ಕ್ಷೇತ್ರಕ್ಕೆ ಹೊಸ ರೂಪ ನೀಡುವುದಾಗಿ ತಿಳಿಸಿದರು. ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮೋಟಮ್ಮ, ಭಾರತಿ ಶಂಕರ್, ಕಾಂಗ್ರೆಸ್ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್, ಗಿರೀಶ್ ಲಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್ ಮತ ಯಾಚಿಸಿದರು.