Advertisement

ಬಿಜೆಪಿಯೇ ಗುರಿ: ಮತ್ತೆ ಗಣಿ ಸದ್ದು

11:14 AM Jan 19, 2018 | Team Udayavani |

ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಅಕ್ರಮ ಗಣಿಗಾರಿಕೆ ಪ್ರಕರಣ ಇದೀಗ ಮತ್ತೂಮ್ಮೆ ಮುನ್ನೆಲೆಗೆ ಬರುವ ಸಾಧ್ಯತೆ ಕಾಣಿಸಿದೆ. ರಾಜ್ಯದ ಬೇಲೆಕೇರಿ, ನವ ಮಂಗಳೂರು ಹಾಗೂ ಗೋವಾದ ಮರ್ಮಗೋವಾ ಮತ್ತು ಪಣಜಿ ಬಂದರುಗಳ ಮೂಲಕ ವಿದೇಶಗಳಿಗೆ ಅಕ್ರಮವಾಗಿ ಅದಿರು ರಫ್ತು ಮಾಡಲಾಗಿರುವ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೊಪ್ಪಿಸಲು ಸರಕಾರ ನಿರ್ಧರಿಸಿದೆ. ಈ ಪ್ರಕರಣಗಳನ್ನು ಈಗಾಗಲೇ ಸಿಬಿಐ ತನಿಖೆ ನಡೆಸಿದೆ ಹಾಗೂ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ತನಿಖೆ ಮುಕ್ತಾಯಗೊಳಿಸಿದೆ. ಇದೇ ಪ್ರಕರಣಗಳನ್ನು ಶುರುವಿನಿಂದ ಸಿಟ್‌ ತನಿಖೆ ನಡೆಸಲಿದೆ. ಸಿಬಿಐ ತನಿಖೆ ಮಾಡಿದ ಪ್ರಕರಣವನ್ನು ಸಿಟ್‌ ಮತ್ತೆ ತನಿಖೆ ಮಾಡುವ ಅಪರೂಪದ ವಿದ್ಯಮಾನವಿದು. 

Advertisement

  ಗಣಿ ಪ್ರಕರಣಗಳಲ್ಲಿ ಸಿಬಿಐ ತನಿಖೆಯೂ ಅನುಮಾನಾಸ್ಪದವಾಗಿತ್ತು. ಹಿಂದಿನ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖಾ ವರದಿಗೆ ಲಗತ್ತಿಸಿ ನೀಡಿದ್ದರೂ ಸಿಬಿಐ ಸಾಕ್ಷ್ಯಾಧಾರಗಳು ಇಲ್ಲ ಎಂದಿರುವುದು ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ಹಗರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಸ್ತುತ ಕಾಂಗ್ರೆಸ್‌ ಸರಕಾರ ಚುನಾವಣೆ ನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಗಣಿ ಧೂಳು ಕೆದಕಲು ಹೊರಟಿರುವುದು ಏಕೆ ಎನ್ನುವುದು ಚಿಕ್ಕ ಮಕ್ಕಳಿಗೂ ಗೊತ್ತಿರುವ ವಿಷಯ. ಸರಕಾರಕ್ಕೆ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ನಿಜವಾದ ಕಾಳಜಿ ಇದ್ದಿದ್ದರೆ ಸಿಟ್‌ ರಚಿಸಲು ಇಷ್ಟು ಸಮಯ ಕಾಯುವ ಅಗತ್ಯವಿರಲಿಲ್ಲ. ಅಂದಹಾಗೆ 2013ರಲ್ಲಿ ಕಾಂಗ್ರೆಸ್‌ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲು ನೆರವಾಗಿದ್ದು ಗಣಿ ಹಗರಣವೇ. ಹೀಗಾಗಿ ಸರಕಾರ ಮತ್ತೂಮ್ಮೆ ಗಣಿಯನ್ನು ಕೆದಕಿ ಮತ ಹುಡುಕುವ ಪ್ರಯತ್ನದಲ್ಲಿರುವಂತಿದೆ. 

ಸದ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಹೆಚ್ಚು ಕಡಿಮೆ ಸಮಾನ ಬಲಶಾಲಿಗಳಾಗಿವೆ. ಹೆಚ್ಚಿನೆಲ್ಲ ಸಮೀಕ್ಷೆಗಳು ಎರಡೂ ಪಕ್ಷಗಳ ನಡುವೆ ಸೀಟಿನ ಅಂತರ ಬಹಳ ಕಡಿಮೆ ಇರುತ್ತದೆ ಎಂದು ಭವಿಷ್ಯ ನುಡಿದಿವೆ. ಹೀಗಾದರೆ ಯಾರಿಗೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇದು ತಪ್ಪ ಬೇಕಾದರೆ ಹೇಗಾದರೂ ಮಾಡಿ ಬಿಜೆಪಿಯ ಬಲಗುಂದಿಸಬೇಕು. ಹೀಗಾಗಿ ಸರಕಾರ ಹಳೆ ಪ್ರಕರಣಗಳಿಗೆಲ್ಲ ಮತ್ತೆ ಜೀವ ತುಂಬಲು ಮುಂದಾಗಿದೆ. ಅರ್ಥಾತ್‌ ಸರಕಾರ ಗುರಿಯಿಟ್ಟಿರುವುದು ಬಿಜೆಪಿ ನಾಯಕರ ಮೇಲೆ. ಇನ್ನೂ ಒಂದು ಕಾರಣವೆಂದರೆ ಗಣಿ ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ವರ್ಷ ಜೈಲು ವಾಸ ಅನುಭವಿಸಿ ಬಂದಿರುವ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ತನ್ನ ರೊಕ್ಕದ ಥೈಲಿ ಬಿಚ್ಚುವ ಸಾಧ್ಯತೆಯಿದೆ. ಈ ಕುರಿತು ಅವರು ಈಗಾಗಲೇ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ. 

ರೆಡ್ಡಿ ಫೀಲ್ಡಿಗಿಳಿದರೆ ಗೆಲವು ಕಷ್ಟವಾಗುತ್ತದೆ ಎನ್ನುವುದು ಎಲ್ಲರಿಗಿಂತ ಹೆಚ್ಚಾಗಿ ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ. ರೆಡ್ಡಿಯನ್ನು ತಡೆಯಲು ಮತ್ತೆ ಗಣಿ ಅಸ್ತ್ರ ಝಳಪಿಸುವುದೇ ಸೂಕ್ತ ಎಂದು ಅವರು ನಿರ್ಧರಿಸಿರಬೇಕು. ಹಾಗೊಂದು ವೇಳೆ ಈ ನಿರ್ಧಾರದ ಹಿಂದೆ ರಾಜಕೀಯ ದುರುದ್ದೇಶ ಇಲ್ಲ ಎನ್ನುವುದಾದರೆ ಸಿಐಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಸಚಿವರು ಮತ್ತು ಶಾಸಕರ ವಿರುದ್ಧ ಕ್ಲೀನ್‌ಚಿಟ್‌ ನೀಡಿದ ಪ್ರಕರಣಗಳನ್ನು ಮತ್ತೆ ತನಿಖೆಗೊಳಪಡಿಸಲು ಸರಕಾರ ತಯಾರಿದೆಯೇ? ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಪಡೆಯಲ್ಲಿ ಅನೇಕ ದೂರುಗಳು ದಾಖಲಾಗಿವೆ. ಇವುಗಳ ತನಿಖೆ ನಡೆಯಲಿದೆಯೇ? 

ಗಣಿ ಹಗರಣದಲ್ಲಿ ಭಾರತೀಯ ಜನತಾ ಪಾರ್ಟಿ ಮಾತ್ರವಲ್ಲದೆ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರೂ ಶಾಮೀಲಾಗಿದ್ದಾರೆ. ಸಿಟ್‌ ತನಿಖೆ ನಡೆದರೆ ಎಲ್ಲರಿಗೂ ಕಂಟಕ ಎದುರಾಗುತ್ತದೆ. ಸಿಟ್‌ ತನಿಖೆ ಮಾಡುವುದಲ್ಲದೆ ಅಕ್ರಮದಲ್ಲಿ ಭಾಗಿಗಳಾಗಿದ್ದಾರೆ ಎಂದು ಸಾಬೀತಾದವರ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳುವ ಇರಾದೆಯೂ ಸರಕಾರಕ್ಕಿದೆ. ಇದಕ್ಕಾಗಿ ಕಾನೂನು ರಚಿಸುವ ಪ್ರಸ್ತಾವ ಇಡಲಾಗಿದೆ. ಇದು ಅಪೆಕ್ಷಣೀಯ ನಡೆಗಳಾಗಿದ್ದರೂ ಇನ್ನು ಮೂರು ತಿಂಗಳಲ್ಲಿ ಕಾರ್ಯಗತಗೊಳಿಸಿಕೊಳ್ಳಲು ಸಾಧ್ಯವಾದೀತೆ? ಒಟ್ಟಾರೆಯಾಗಿ ಅಂದಾಜು 35,000 ಕೋ. ರೂ.ಯ ಹಗರಣ ನಡೆದಿದೆ ಎನ್ನಲಾಗಿದೆ. ಈ ಹಗರಣವನ್ನು ಮೊದಲು ಬೆಳಕಿಗೆ ತಂದವರು ಕುಮಾರಸ್ವಾಮಿ. ಅನಂತರ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ತನಿಖೆ ನಡೆಸಿದಾಗ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರ ಬಿದ್ದಿದ್ದವು. ಆದರೆ ಎಲ್ಲ ಭ್ರಷ್ಟಾಚಾರ ಪ್ರಕರಣಗಳಂತೆ ಗಣಿ ಹಗರಣವೂ ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವುದು ಮಾತ್ರ ದುರದೃಷ್ಟಕರ.

Advertisement
Advertisement

Udayavani is now on Telegram. Click here to join our channel and stay updated with the latest news.

Next