Advertisement

ಕೋಮು ಗಲಭೆಗೆ ಸಾವು,ನೋವಿಗೆ ಬಿಜೆಪಿ ಕಾರಣ

06:00 AM Mar 05, 2018 | Team Udayavani |

ಬೆಂಗಳೂರು/ಕೆಂಗೇರಿ: ರಾಜ್ಯದಲ್ಲಿ ಕೋಮುಗಲಭೆಯಿಂದ ಯಾವುದೇ ಸಾವುಗಳು ಸಂಭವಿಸಿದ್ದರೆ, ಅದಕ್ಕೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರೇ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ನಗರದ ನೈಸ್‌ ಜಂಕ್ಷನ್‌ ಬಳಿ ಮೈದಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭಾನುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಮತ್ತು ಮುಖ್ಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರಾವಧಿಗೆ ಹೋಲಿಸಿದರೆ, ಕಾಂಗ್ರೆಸ್‌ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಕುಗ್ಗಿದೆ. ಹಾಗೊಂದು ವೇಳೆ ರಾಜ್ಯದಲ್ಲಿ ಕೋಮುಗಲಭೆಯಿಂದ ಸಾವು-ನೋವು ಸಂಭವಿಸಿದ್ದರೆ, ಅದಕ್ಕೆ ಬಿಜೆಪಿ, ಆರೆಸ್ಸೆಸ್‌, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ನೇರ ಕಾರಣ ಎಂದು ದೂರಿದರು.

ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಮಾಜದ ಹಿತಕ್ಕೆ ಧಕ್ಕೆ ಉಂಟುಮಾಡುವ ಡೋಂಗಿ ಮತ್ತು ಲೂಟಿಕೋರರನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬಾರದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ಒಂಬತ್ತು ವರ್ಷ ಮುಖ್ಯಮಂತ್ರಿ ಆಗಿದ್ದರು. ಆಗ, ಲೋಕಾಯುಕ್ತರನ್ನು ನೇಮಕ ಮಾಡಲಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಲೋಕಪಾಲರನ್ನು ನೇಮಿಸಲಿಲ್ಲ. ಹೀಗಿರುವಾಗ, ಪ್ರಧಾನಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಪ್ರಧಾನಿಗಳು ಅಭಿವೃದ್ಧಿ, ರೈತರ ಸಾಲಮನ್ನಾ ಬಗ್ಗೆ ಚರ್ಚೆ ಮಾಡುವುದಿಲ್ಲ. ಬರೀ ಸುಳ್ಳುಗಳ ಸರಮಾಲೆ ಜೋಡಿಸುತ್ತಾರೆ. ಆದರೆ, ಎಷ್ಟೇ ಭಾಷಣ ಮಾಡಿದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.

Advertisement

ದೇಶದ ಸಂಪತ್ತು ರಕ್ಷಣೆಗಾಗಿ ಚೌಕಿದಾರನಾಗಿ ಕೆಲಸ ಮಾಡುವುದಾಗಿ ಈ ಹಿಂದೆ ನರೇಂದ್ರ ಮೋದಿ ಹೇಳಿದ್ದರು. ಆದರೆ, ನೀರವ್‌ ಮೋದಿ, ವಿಜಯ ಮಲ್ಯ, ಲಲಿತ್‌ ಮೋದಿ ಅವರು ಕೊಳ್ಳೆಹೊಡೆದು, ಪರಾರಿಯಾಗಿದ್ದರ ಹಿಂದೆ ಈ “ಚೌಕಿದಾರ’ (ಪ್ರಧಾನಿ)ರ ಕುಮ್ಮಕ್ಕು ಇದೆ ಎಂದು ತೀಕ್ಷ್ಣವಾಗಿ ಹೇಳಿದರು.

ಜೈಲಿಗೆ ಬೀಗತನಕ್ಕೆ ಹೋಗಿದ್ರಾ?
“ಭ್ರಷ್ಟರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಹಾಗಿದ್ದರೆ, ಈ ಹಿಂದೆ ಯಡಿಯೂರಪ್ಪ ಅವರು ಬೀಗತನ ಮಾಡಲು ಜೈಲಿಗೆ ಹೋಗಿದ್ದರೇ ಎಂದು ಮೂದಲಿಸಿದ ಮುಖ್ಯಮಂತ್ರಿ, ದೇಶದ ಇತಿಹಾಸದಲ್ಲೇ ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ. ಪ್ರಧಾನಿಗೆ ಇರುವ ಗೌರವ ಹಾಳುಮಾಡಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಇವರೆಲ್ಲರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಿಡಿತವಿಲ್ಲದ ನಾಲಿಗೆ
“ಸಂಸದೆ ಶೋಭಾ ಕರಂದ್ಲಾಜೆಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಮುಂಬರುವ ಚುನಾವಣೆಯಲ್ಲಿ ಕೂಡ ಅವರು ಗೆಲ್ಲಲು ಸಾಧ್ಯವೇ ಇಲ್ಲ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. “2013ರ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಹೆದರಿ ಓಡಿಹೋದ ಶೋಭಾ, ರಾಜಾಜಿನಗರದಿಂದ ಸ್ಪರ್ಧಿಸಿದರು. ಅಲ್ಲಿಯೂ ಹೀನಾಯವಾಗಿ ಸೋಲುಂಡರು. ಹೇಗೋ ಸಂಸದರಾದ ಅವರು, ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾಲಿಗೆ ಮೇಲೆ ಹಿಡಿತವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next