Advertisement

ಮಹಾರಾಷ್ಟ್ರದಂತೆ ರಾಜ್ಯದಲ್ಲಿಯೂ ಬಿಜೆಪಿಗೆ ಮುಖಭಂಗ: ಉಗ್ರಪ್ಪ

10:00 AM Dec 03, 2019 | Team Udayavani |

ಬೆಂಗಳೂರು: ಬಿಜೆಪಿ ಮಹಾರಾಷ್ಟ್ರದಲ್ಲಿ ಮುಖಭಂಗ ಅನುಭವಿಸಿದಂತೆ ಕರ್ನಾಟಕದಲ್ಲಿಯೂ ತೀವ್ರ ಮುಖಭಂಗ ಅನುಭವಿಸಲಿದ್ದು, ಬಿಜೆಪಿಯ ದುರಾಡಳಿತದಿಂದ ಬೇಸತ್ತು ಜನರೇ ಬಿಜೆಪಿ ಮುಕ್ತ ಭಾರತ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ. ಎಸ್‌. ಉಗ್ರಪ್ಪ ಹೇಳಿದ್ದಾರೆ.

Advertisement

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಪರ ಗಾಳಿ ಬೀಸುತ್ತಿದ್ದು ಅನರ್ಹರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಲೆ ಎದ್ದಿದೆ. ಹದಿನೈದು ಕ್ಷೇತ್ರಗಳಲ್ಲಿ ಗೆದ್ದೇ ಬಿಟ್ಟಿದ್ದೇವೆ ಎಂದು ಯಡಿಯೂರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ. ಅನರ್ಹರ ತ್ಯಾಗದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅನರ್ಹರ ಹಿತಕಾಪಾಡಿ ಅವರನ್ನು ಸಚಿವರನ್ನಾಗಿಸುತ್ತೇವೆ ಎಂದು ನೀತಿ ಸಂಹಿತೆ ಉಲ್ಲಂ ಸಿ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೂ, ಚುನಾವಣಾ ಆಯೋಗ ಮೌನ ವಹಿಸಿದ್ದು ಏಕೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಬಹುಮತವಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮಾಡಿತು. ಸಂಸದ ಅನಂತಕುಮಾರ್‌ ಹೆಗಡೆ ಮಹಾರಾಷ್ಟ್ರ ಸರ್ಕಾರದ ಬಳಿ 40 ಸಾವಿರ ಕೋಟಿ ಹಣ ಉಳಿಸಲು ಬಹುಮತವಿಲ್ಲದಿದ್ದರೂ ಫ‌ಡ್ನವಿಸ್‌ ಸರ್ಕಾರ ಮಾಡಿದ್ದರು ಎಂದು ಹೇಳಿದ್ದಾರೆ. ಸರ್ಕಾರದ ದುಡ್ಡು ಯಾರ ಮನೆ ಆಸ್ತಿಯಲ್ಲ. ಕರ್ನಾಟಕದಲ್ಲಿ ಬಹುಮತವಿಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣಕ್ಕಾಗಿ ಸರ್ಕಾರ ರಚಿಸಿದೆ. ಬಿಜೆಪಿ ಎಲ್ಲಿಯೂ ಅಭಿವೃದ್ಧಿ ಕಾರಣಕ್ಕಾಗಿ ಸರ್ಕಾರ ರಚಿಸಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಲೂಟಿ ಮಾಡಲು ಸರ್ಕಾರ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಆದರೆ, ಜನರೇ ಬಿಜೆಪಿ ಮುಕ್ತ ರಾಷ್ಟ್ರವನ್ನು ದೇಶದ ಜನರೇ ಮಾಡಲು ಹೊರಟಿದ್ದಾರೆ. ಗೋವಾ ಮತ್ತು ಹರಿಯಾಣ, ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಭ್ರಷ್ಟಾಚಾರ, ವಾಮಮಾರ್ಗ ಇಲ್ಲದೇ ಇದ್ದಿದ್ದರೆ ಕರ್ನಾಟಕದಲ್ಲಿಯೂ ಬಿಜೆಪಿಮುಕ್ತ ರಾಜ್ಯವಾಗುತ್ತಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ವೈಯಕ್ತಿಕ ಅಭಿವೃದ್ಧಿ ಆಗುತ್ತಿದೆಯೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ಅನರ್ಹರನ್ನು ಶಾಶ್ವತವಾಗಿ ಅನರ್ಹರನ್ನಾಗಿ ಮಾಡುವ ಗಾಳಿ ಬೀಸುತ್ತಿದ್ದು, ಉಪಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವುದು ಖಚಿತ ಎಂದರು.

Advertisement

ಜೆಡಿಎಸ್‌ ಜೊತೆ ಚುನಾವಣಾ ಮೈತ್ರಿ ಇಲ್ಲ. ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವತಂತ್ರವಾಗಿ ಸೆಣಸಾಡುತ್ತಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಹಿರಿಯ ಕಿರಿಯ ನಾಯಕರು ತಮಗೆ ಸೂಚಿಸಿದ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂದು ಆರೋಪಿಸುವ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್‌ ಶಾ, ನರೇಂದ್ರ ಮೋದಿ ಏಕೆ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಎಂದು ಉಗ್ರಪ್ಪ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next