Advertisement
ಬನಶಂಕರಿ 2ನೇ ಹಂತದಲ್ಲಿ ಸೋಮವಾರ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ನಾಯಕರು ಭರ್ಜರಿ ರೋಡ್ ಶೋ ನಡೆಸಿ ಯಶಸ್ವಿಗೊಳಿಸಲು ಕಾರ್ಯತಂತ್ರ ಹೆಣೆಯುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಸಜ್ಜಾಗಿದ್ದಾರೆ.
Related Articles
Advertisement
ವಿ.ಸೋಮಣ್ಣ ಮಾತನಾಡಿ, ಎಲ್ಲರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಭರ್ಜರಿ ಗೆಲುವು ಸಾಧಿಸಲು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ತೋರಿ ಸಮಸ್ಯೆಗಳು ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು ಎನ್ನಲಾಗಿದೆ. ಅಭ್ಯರ್ಥಿ ತೇಜಸ್ವಿ ಸೂರ್ಯ, ವಯಸ್ಸು, ಅನುಭವದಲ್ಲಿ ಕಿರಿಯನಾದ ನನಗೆ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಬೆಂಬಲಿಸಬೇಕು ಎಂದು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.
ಸೋಮಣ್ಣ-ರವಿಸುಬ್ರಹ್ಮಣ್ಯ ಮಾತುಕತೆ: ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ, ಟಿಕೆಟ್ ನಿರಾಕರಣೆಗೆ ಕಾರಣ ಹೇಳಿದರಷ್ಟೇ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದ್ದರು.
ಈ ಹಿನ್ನಲೆಯಲ್ಲಿ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಅಭ್ಯರ್ಥಿ ತೇಜಸ್ವಿ ಸೂರ್ಯ ಭಾನುವಾರ ಸೋಮಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಇತ್ತೀಚಿನ ಕೆಲ ಬೆಳವಣಿಗೆ ಬಗ್ಗೆ ರವಿಸುಬ್ರಹ್ಮಣ್ಯ ಬಳಿ ಸೋಮಣ್ಣ ಅಸಮಾಧಾನ ತೋಡಿಕೊಂಡಿದ್ದರು. ಮಾತುಕತೆ ಬಳಿಕವಷ್ಟೇ ಸೋಮಣ್ಣ ಅವರು ಸೋಮವಾರದ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ತೇಜಸ್ವಿನಿ ಅನಂತ ಕುಮಾರ್ ನಡೆ ನಿಗೂಢ: ಈ ನಡುವೆ ತೇಜಸ್ವಿನಿ ಅನಂತ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಪಕ್ಷದ ಕೇಂದ್ರ ನಾಯಕರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿಕೊಂಡಿದ್ದಾರೆ. “ಗೊಂದಲಗಳನ್ನು ನಿವಾರಿಸುತ್ತೇನೆ. “ದೇಶ ಮೊದಲು- ನಮೋ ಮತ್ತೂಮ್ಮೆ’ ಎಂಬ ನನ್ನ ಬೇಷರತ್ ನಿಲುವು ದೃಢ ಹಾಗೂ ನಿಶ್ಚಿತವಾಗಿದೆ.
ಬಿಜೆಪಿ ಕೇಂದ್ರ ನಾಯಕತ್ವ ನನ್ನಿಂದ ಅಪೇಕ್ಷಿಸುವುದನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿರುವ ತೇಜಸ್ವಿನಿ ಅನಂತ ಕುಮಾರ್, “ಮೋದಿ ಮತ್ತೂಮ್ಮೆ’, “ರಾಷ್ಟ್ರ ಮೊದಲು’ ಎಂಬ ಹ್ಯಾಷ್‌ಟ್ಯಾಗ್ ಹಾಕಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ಬಗ್ಗೆ ಯಾವುದೇ ಸುಳಿವು ನೀಡದಿರುವುದು ಅವರ ನಡೆ ಬಗ್ಗೆ ಕುತೂಹಲ ಮೂಡಿಸಿದೆ.