Advertisement

ಸಾವಂತ್, ಬಿರೇನ್ ಸಿಂಗ್ ಗೆ ಎರಡನೇ ಅವಧಿಗೆ ಸಿಎಂ ಹುದ್ದೆ ಖಚಿತ

04:46 PM Mar 16, 2022 | Team Udayavani |

ನವದೆಹಲಿ : ಗೋವಾ ಮತ್ತು ಮಣಿಪುರದಲ್ಲಿ ಹಂಗಾಮಿ ಮುಖ್ಯಮಂತ್ರಿಗಳಾಗಿ ಕಾರ್ಯ ನಿರವಹಿಸುತ್ತಿರುವ ಪ್ರಮೋದ್ ಸಾವಂತ್ ಮತ್ತು ಎನ್ . ಬಿರೇನ್ ಸಿಂಗ್ ಅವರಿಗೆ ಎರಡನೇ ಅವಧಿಗೆ ಹುದ್ದೆ ನೀಡುವುದು ಖಚಿತವಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

Advertisement

ಪ್ರಮೋದ ಸಾವಂತ್ ಮತ್ತು ಬಿರೇನ್ ಸಿಂಗ್ ಅವರು ಬುಧವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗೋವಾ ಉಸ್ತುವಾರಿ ಸಿ.ಟಿ.ರವಿ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.

ಹೋಳಿ ಹಬ್ಬದ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

‘ಗೋವಾದಲ್ಲಿ ಮತ್ತೊಮ್ಮೆ ಸೇವೆ ಸಲ್ಲಿಸಲು ಜನತೆ ಆಶೀರ್ವದಿಸಿದ್ದಕ್ಕೆ ನಮ್ಮ ಪಕ್ಷದ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ನಾವು ಗೋವಾದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯ ಬಳಿಕ ಟ್ವೀಟ್ ಮಾಡಿದ್ದಾರೆ.

Advertisement

ಬಿರೇನ್ ಸಿಂಗ್ ಅವರನ್ನು ಭೇಟಿಯಾದೆ ಮತ್ತು ಅವರನ್ನು ಅಭಿನಂದಿಸಿದೆ. ಬಿಜೆಪಿ ಮಣಿಪುರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ನಮ್ಮ ಪಕ್ಷವು ಮಣಿಪುರದ ಜನರ ಆಶೋತ್ತರಗಳನ್ನು ಈಡೇರಿಸಲು ಇನ್ನಷ್ಟು ಶ್ರಮಿಸಲು ಬದ್ಧವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಗೋವಾದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂಬ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದಿದೆ.

ಇಬ್ಬರು ನಾಯಕರ ಆಯ್ಕೆ ಕುರಿತು ಪಕ್ಷ ಇನ್ನಷ್ಟೇ ಘೋಷಣೆ ಮಾಡಬೇಕಾಗಿದ್ದು, ಈಗಾಗಲೇ ಪ್ರತ್ಯೇಕ ದಿನಗಳಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳಲು ಸಿದ್ಧ

ವಾಳಪೈ ಶಾಸಕರಾಗಿರುವ ನನ್ನ ಪತಿ ವಿಶ್ವಜಿತ್ ರಾಣೆ ರವರಿಗೆ 15 ವರ್ಷಗಳ ರಾಜಕೀಯ ಅನುಭವವಿದ್ದು ಪಕ್ಷದ ವರಿಷ್ಠರು ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನೀಡಿದರೆ ನಿಭಾಯಿಸಲು ಅವರು ಸಿದ್ಧರಿದ್ದಾರೆ ಎಂದು ಪರ್ಯೆ ಕ್ಷೇತ್ರದ ಬಿಜೆಪಿ ಶಾಸಕಿ ಡಾ.ದಿವ್ಯಾ ರಾಣೆ ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಭಿನ್ನಾಭಿಪ್ರಾಯದ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಕುರಿತು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಯಾವುದೇ ಚುನಾಯಿತ ಪ್ರತಿನಿಧಿ ಮುಖ್ಯಮಂತ್ರಿ ಹುದ್ಧೆ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧರಾಗಿರುತ್ತಾರೆ. ನನ್ನ ಪತಿ ವಿಶ್ವಜಿತ್ ರಾಣೆ ರವರು ಕಳೆದ 15 ವರ್ಷಗಳ ಅನುಭವಿ ರಾಜಕಾರಣಿ ಎಂದು ನಾನು ಭಾವಿಸುತ್ತೇನೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ರಾಣೆ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದನ್ನು ಮಾಧ್ಯಮಗಳು ಸೃಷ್ಠಿಸಿವೆ. ನಾನು ಕೂಡ ಸಂಪುಟಕ್ಕೆ ಅರ್ಹನೆಂದು ಪಕ್ಷ ಭಾವಿಸಿದರೆ ಅದರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ದಿವ್ಯಾ ಹೇಳಿದರು.

ವಾಳಪೈ ಕ್ಷೇತ್ರದಲ್ಲಿ ವಿಶ್ವಜಿತ್ ರಾಣೆ ಜಯಗಳಿಸಿದ್ದರೆ, ಪರ್ಯೆ ಕ್ಷೇತ್ರದಲ್ಲಿ ಪತ್ನಿ ದಿವ್ಯಾ ಜಯಗಳಿಸಿದ್ದಾರೆ. ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಸುಲಭ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next