Advertisement

ಬಿಜೆಪಿ ಕೋಟೆಗಾಗಿ ಜಿದ್ದಾಜಿದ್ದಿ

12:55 PM May 09, 2018 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಹೆಸರಿನಿಂದಲೇ ಗುರುತಿಸಿಕೊಳ್ಳುವ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಮಲದ ಕೋಟೆ ಒಡೆಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪೈಪೋಟಿ ನಡೆಸುತ್ತಿದೆ.

Advertisement

ಹಾಲಿ ಶಾಸಕ ಎಸ್‌. ಆರ್‌. ವಿಶ್ವನಾಥ್‌ ಎರಡು ಬಾರಿ ಗೆದ್ದು ಈ ಬಾರಿ ಹ್ಯಾಟ್ರಿಕ್‌ ಸಾಧಿಸಲು ಕ್ಷೇತ್ರದಲ್ಲಿ ನಿರಂತರ ಸಂಚಾರ ನಡೆಸಿದ್ದಾರೆ. ಚುನಾವಣೆಗೂ ಮೊದಲೇ ಪ್ರಚಾರ ಆರಂಭಿಸಿರುವ ಅವರು ಈಗಾಗಲೇ ಸಂಫ‌ೂರ್ಣ ಕ್ಷೇತ್ರವನ್ನು ಒಂದು ಹಂತ ಸುತ್ತಿ ಮತ್ತೂಂದು ಹಂತದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. 

ಕಳೆದ ಹತ್ತು ವರ್ಷದಲ್ಲಿ ತಾವು ಮಾಡಿರುವ ಕೆಲಸಗಳನ್ನೇ ಮುಂದಿಟ್ಟುಕೊಂಡು ಜನರ ಬಳಿ ತೆರಳುತ್ತಿರುವ ವಿಶ್ವನಾಥ್‌ಗೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪ್ರಶ್ನೆ ಎದುರಾಗುತ್ತಿದೆ. ಆದರೆ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಬಲವಾಗಿ ಇರುವುದರಿಂದ ಮತದಾರರೊಂದಿಗೆ ನಿರಂತರವಾಗಿ ಸಂಪ‌ರ್ಕದಲ್ಲಿದಲ್ಲಿರುವುದು ಪ್ಲಸ್‌ ಪಾಯಿಂಟ್‌.

ಹತ್ತು ವರ್ಷದ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಹಂಚಿರುವ ವಿಶ್ವನಾಥ್‌, ಮುಂದಿನ ಐದು ವರ್ಷಕ್ಕೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿ, ಮತದಾರರ ಸೆಳೆಯಲು ಮುಂದಾಗಿದ್ದಾರೆ. ಶಾಸಕರ ಪತ್ನಿಯೂ ನಿರಂತರ ಪ್ರಚಾರ ನಡೆಸುತ್ತಿದ್ದು, ಮಹಿಳಾ ಮತದಾರರಿಗೆ ಹತ್ತಿರವಾಗುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಕೃಷ್ಣಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಬೆನ್ನೆಲುಬಾಗಿ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅವರಿಗೆ ಪಕ್ಷದಲ್ಲಿನ ಸ್ಥಳೀಯ ನಾಯಕರ ನಡೆಯೇ ಮುಳುವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಪಂ ಸದಸ್ಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚಂದ್ರಪ್ಪ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ ಜೆಡಿಎಸ್‌ ಪಾಳಯ ಸೇರಿದ್ದಾರೆ. 

Advertisement

ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮೊದಲಿನಿಂದಲೂ ನಿರ್ದಿಷ್ಟ ಮತದಾರರಿದ್ದು, ಅವರಷ್ಟೇ ಗೆಲುವು ತಂದು ಕೊಡುವುದಿಲ್ಲ ಎಂಬ ಸತ್ಯ ಅಭ್ಯರ್ಥಿ ಅರಿತುಕೊಂಡಿದ್ದು, ಗೆಲುವಿಗೆ ಅಗತ್ಯವಿರುವ ಹೆಚ್ಚಿನ ಮತಗಳನ್ನು ಸೆಳೆಯುವ ಕಾರ್ಯತಂತ್ರ ನಡೆಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಯಾದವ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಜಾತಿಯ ಬಲ ಹೆಚ್ಚು ಇಲ್ಲ. ಆದರೂ ಅದನ್ನು ಮೀರಿ ಗೋಪಾಲಕೃಷ್ಣ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಾಹಸ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೊನೆ ಕ್ಷಣದಲ್ಲಿ ಪ್ರಚಾರ ನಡೆಸುತ್ತಿರುವುದರಿಂದ ಅದು ತಮ್ಮನ್ನು ಗೆಲುವಿನ ದಡ ಸೇರಿಸುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. 

ಇನ್ನು ಜೆಡಿಎಸ್‌ ಅಭ್ಯರ್ಥಿ ಹನುಮಂತೇಗೌಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು ಜಾದೂ ಮಾಡುತ್ತೇನೆ ಎಂದು ಹೇಳುತ್ತಿರುವುದು ಕ್ಷೇತ್ರದ ಜನತೆಗೆ ಅಷ್ಟೇ ಅಲ್ಲದೆ‌ ಇತರ ಅಭ್ಯರ್ಥಿಗಳೂ ಕುತೂಹಲದಿಂದ ನೋಡುವಂತೆ ಮಾಡಿದೆ. ಜಿಪಂ ಸದಸ್ಯ ಚಂದ್ರಪ್ಪ ಕೂಡ ಅವರಿಗೆ ಬೆಂಬಲವಾಗಿ ನಿಂತಿರುವುದು ಜೆಡಿಎಸ್‌ ಅಭ್ಯರ್ಥಿಯ ಶಕ್ತಿಯನ್ನು ವೃದ್ಧಿಸಿದಂತೆ ಕಾಣುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ದಲಿತ ಸಮುದಾಯ ತಲಾ ಸುಮಾರು 60 ಸಾವಿರದಷ್ಟಿದ್ದು, ಎರಡೂ ಸಮುದಾಯಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ನಂತರ ಕುರುಬ, ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದ ಮತದಾರರು ಪ್ರಮುಖವಾಗಿದ್ದಾರೆ. 

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next