Advertisement

ಭ್ರಷ್ಟಾಚಾರ ದಾಖಲೆ ತೆರೆದಿರಿಸಿದ ಬಿಜೆಪಿ

12:13 PM Mar 08, 2018 | |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಅಕ್ರಮ, ಅವ್ಯವಹಾರದ ಕುರಿತು ಇತ್ತೀಚೆಗೆ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಇದೀಗ 2013-14ನೇ ಸಾಲಿನಿಂದ ಇದುವರೆಗೆ ನಡೆದಿರುವ 74 ಹಗರಣಗಳ ಕುರಿತಾದ 21,700 ಪುಟಗಳ ದಾಖಲೆ ಬಿಡುಗಡೆ ಮಾಡಿದೆ.

Advertisement

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌, ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಮತ್ತು ವಕ್ತಾರರಾದ ಎಸ್‌.ಪ್ರಕಾಶ್‌, ಮಾಳವಿಕಾ ಅವಿನಾಶ್‌, ಮುಖಂಡರಾದ ಶಶಿಲ್‌ ನಮೋಶಿ, ಹರೀಶ್‌ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್‌, ಸಚಿವ ಎಂ.ಆರ್‌.ಸೀತಾರಾಂ, ರೋಷನ್‌ ಬೇಗ್‌, ಯು.ಟಿ.ಖಾದರ್‌, ಕೃಷ್ಣಬೈರೇಗೌಡ, ಶಾಸಕರಾದ ಆರ್‌.ವಿ.ದೇವರಾಜ್‌, ಎನ್‌.ಎ.ಹ್ಯಾರಿಸ್‌, ಮುನಿರತ್ನ, ಭೈರತಿ ಬಸವರಾಜು,

ಎಸ್‌.ಟಿ.ಸೋಮಶೇಖರ್‌, ವಿಧಾನ ಪರಿಷತ್‌ ಸದಸ್ಯರಾದ ವಿ.ಎಸ್‌.ಉಗ್ರಪ್ಪ, ಕೆ.ಸಿ.ಕೊಂಡಯ್ಯ, ಸಿ.ಎಂ.ಇಬ್ರಾಹಿಂ, ಭೈರತಿ ಸುರೇಶ್‌, ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತ್ರವಲ್ಲದೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಪಾಲಿಕೆ ಸದಸ್ಯರು, ಅಧಿಕಾರಿಗಳ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳಿವೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಮುನ್ನ “ಲೆಕ್ಕ ಕೊಡಿ ಬೆಂಗಳೂರಿಗೆ’ ಎಂಬ ಘೋಷಣೆಯೊಂದಿಗೆ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಬಿಡುಗಡೆ ಮಾಡಲಾಗಿತ್ತು.

Advertisement

ಆದರೆ, ದಾಖಲೆಗಳಿಲ್ಲದೆ ಆರೋಪ ಪಟ್ಟಿ ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಹೇಳಿದ್ದರು. ಹೀಗಾಗಿ ಆರೋಪ ಪಟ್ಟಿಯಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಈ ಪ್ರಕರಣಗಳ ಕುರಿತು ಎಸಿಬಿ, ಲೋಕಾಯುಕ್ತ, ಸಿಬಿಐ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲಾಗಿದೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಕಿ ಅಂಶಗಳ ಸಹಿತ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಸರ್ಕಾರ ಕೂಡಲೇ ಈ ದಾಖಲೆಗಳನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದಲೇ ನಷ್ಟ: ನಗರದ ಬಸ್‌ ಶೆಲ್ಟರ್‌ಗಳಲ್ಲಿ ಹಣ ಪಾವತಿಸದೆ ರಾಜ್ಯ ಸರ್ಕಾರ ಜಾಹೀರಾತು ಪ್ರದರ್ಶನ ಮಾಡಿದ್ದು, ಇದರಿಂದ ಪಾಲಿಕೆಗೆ 62 ಕೋಟಿ ರೂ. ವಂಚನೆಯಾಗಿದೆ. 13 ಕೋಟಿ ರೂ. ದಂಡ ಪಾವತಿಸಲು ನೋಟಿಸ್‌ ಜಾರಿಗೊಳಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಬಿಡುಗಡೆ ಮಾಡಿದ ದಾಖಲೆಗಳು ನೈಜವಾಗಿದ್ದು, ಈ ದಾಖಲೆಗಳ ಆಧಾರದ ಮೇಲೇ ಈ ಹಿಂದೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್‌, ಡಿ.ಕೆ.ಶಿವಕುಮಾರ್‌ ಮತ್ತಿತರರ ಮೇಲೆ ಆರೋಪ ಮಾಡಿದ್ದೆ. ಇದೀಗ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದು, ಧೈರ್ಯವಿದ್ದರೆ ಆ ದಾಖಲೆಗಳ ಪ್ರಕಾರ ಕ್ರಮ ಜರುಗಿಸಲಿ.
-ಎನ್‌.ಆರ್‌.ರಮೇಶ್‌, ಬೆಂಗಳೂರು ನಗರ ಬಿಜೆಪಿ ವಕ್ತಾರ

ಬಿಡುಗಡೆಯಾದ 10 ಪ್ರಮುಖ ದಾಖಲೆಗಳು
1. ನಕಲಿ ಓಸಿ, ಸಿಸಿ ನೀಡಿ ಸಿಎಂ, ಸಚಿವ ಜಾರ್ಜ್‌ರಿಂದ 6 ಸಾವಿರ ಕೋಟಿ ರೂ.ಗೂ ಅಧಿಕ ವಂಚನೆ

2. ಬಿಡಿಎಯ 5 ಸಾವಿರ ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣವನ್ನು ಎಂಬೆಸಿ ಸಂಸ್ಥೆ ಮೂಲಕ ಕಬಳಿಸಲು ಸಂಚು

3. ಕಾಲುವೆ ಹೂಳೆತ್ತಲು ಯಂತ್ರಗಳ ಖರೀದಿ, ರಸ್ತೆಗಳ ವೈಟ್‌ ಟ್ಯಾಪಿಂಗ್‌ ಹೆಸರಲ್ಲಿ 2600 ಕೋಟಿ ರೂ. ಹಗರಣ

4. ಎಂ.ಎಸ್‌.ರಾಮಯ್ಯ ಕುಟುಂಬ (ಸಚಿವ ಎಂ.ಆರ್‌.ಸೀತಾರಾಮ್‌) 61 ಎಕರೆ ಸರ್ಕಾರಿ ಭೂಮಿ ಕಬಳಿಕೆ

5. ಸಚಿವ ರೋಷನ್‌ರಿಂಧ ಪಾಲಿಕೆ, ಸರ್ಕಾರಿ, ಖಾಸಗಿ ಸ್ವಾಮ್ಯದ 165 ಕೋಟಿ ಮೌಲ್ಯದ ಸ್ವತ್ತು ಕಬಳಿಕೆ

6. ಜಾರ್ಜ್‌ರಿಂದ ಚಲ್ಲಘಟ್ಟ ಕಣಿವೆ ವ್ಯಾಪ್ತಿಯಲ್ಲಿ 40 ಸಾವಿರ ಚ.ಅಡಿ ರಾಜಕಾಲುವೆಯ ಬಫ‌ರ್‌ ಝೋನ್‌ ಒತ್ತುವರಿ

7. ಸಚಿವ ಖಾದರ್‌ರಿಂದ ಎನ್‌ಯುಎಚ್‌ಎಂ, ಎನ್‌ಆರ್‌ಎಚ್‌ಎಂನಲ್ಲಿ 1463 ಕೋಟಿ ರೂ. ಹಗರಣ

8. ಕೃಷ್ಣಬೈರೇಗೌಡರಿಂದ 725 ಕೋಟಿ ರೂ. ಅನುದಾನ ದುರ್ಬಳಕೆ, ಸಾವಿರಾರು ಕೋಟಿ ಮೌಲ್ಯದ ಮೂರು ಭೂಕಬಳಿಕೆ

9. ರಾಬರ್ಟ್‌ ವಾದ್ರಾರಿಂದ ಬೆಂ. ಉತ್ತರ ತಾಲೂಕು ಚೊಕ್ಕನಹಳ್ಳಿಯ 125 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ

10. ಸಚಿವ ಎಂ.ಕೃಷ್ಣಪ್ಪ ಭೈರಸಂದ್ರದಲ್ಲಿ 350 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ, ರಾಜಕಾಲುವೆ ಒತ್ತುವರಿ

Advertisement

Udayavani is now on Telegram. Click here to join our channel and stay updated with the latest news.

Next