ಬೆಳಗಾವಿ: “ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೂ, ಬಿಜೆಪಿಗೂ ಸಂಬಂಧ ಇಲ್ಲ. ಅದು ಸಮಾಜದ ಮುಖಂಡರು ನಿರ್ಣಯಿಸಬೇಕಾದ ವಿಷಯ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸಬಾರದು. ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮ ವಿಷಯ ಯಾವುದೇ ಪಕ್ಷದೊಳಗೆ ತೀರ್ಮಾನವಾಗುವಂಥದಲ್ಲ. ಅದನ್ನು ಪಕ್ಷದ ದೃಷ್ಟಿಯಲ್ಲಿ ನೋಡಲೇಬಾರದು. ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಕುಳಿತು ಈ ವಿಷಯವನ್ನು ನಿರ್ಧಾರ ಮಾಡಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವಾಗ ಏಕೆ ಈ ವಿಷಯ ಎತ್ತಿದರು? ಸ್ವತಃ ಅವರೇ ಲಿಂಗಾಯತ ಹಾಗೂ ವೀರಶೈವ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಚಿವ ಈಶ್ವರ ಖಂಡ್ರೆ ಅವರೇ ಇದಕ್ಕೆ ವಿರೋಧ ಮಾಡಿದ್ದಾರೆ. ಆದ್ದರಿಂದ ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಕತ್ತಿ ಹೇಳಿಕೆಗೂ, ಪಕ್ಷಕ್ಕೂ ಸಂಬಂಧವಿಲ್ಲ: ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶಕ್ಕೆ ಹೋಗಲು ಬಿಜೆಪಿಯವರು ಅವಕಾಶ ಕೊಡಲಿಲ್ಲ ಎಂಬ ಶಾಸಕ ಉಮೇಶ ಕತ್ತಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೂ, ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶಕ್ಕೂ ಸಂಬಂಧ ಇಲ್ಲ ಎಂದು ಈ ಮೊದಲೇ ಸ್ಪಷ್ಟಪಡಿಸಲಾಗಿದೆ. ಉಮೇಶ ಕತ್ತಿಗೆ ಅನುಭವ ಮಂಟಪಕ್ಕೆ, ಮಂದಿರಗಳಿಗೆ ಹೋಗಲು ಯಾರು ತಡೆಯುತ್ತಾರೆ? ಕತ್ತಿ ಅವರಿಗೂ ಇದನ್ನು ತಿಳಿಸಲಾಗಿದೆ ಎಂದು ಹೇಳಿದರು.
“ಲಿಂಗಾಯತ ಸಮಾಜದ ಸಮಾವೇಶ ಹಾಗೂ ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ ಬಗ್ಗೆ ಉಮೇಶ ಕತ್ತಿ ಅವರೊಂದಿಗೆ ನಾನೇ ಸ್ವತಃ ಮಾತುಕತೆ ನಡೆಸಿದ್ದೇನೆ. ಅವರು ಬಿಜೆಪಿ ನಾಯಕರ ಬಗ್ಗೆ ಅಂತಹ ಮಾತು ಆಡಿಲ್ಲ. ಮಾತುಕತೆಯ ವಿವರ ಇಲ್ಲಿ ಹೇಳುವುದಿಲ್ಲ. ಇದಲ್ಲದೇ ಮಾಧ್ಯಮ ವರದಿಗಳ ಆಧಾರದ ಮೇಲೆ ನಾವು ಚುನಾವಣೆ ಮಾಡುವುದಿಲ್ಲ. ನಮ್ಮ ಕಾರ್ಯತಂತ್ರ ರೂಪಿಸುವುದಿಲ್ಲ. ಶಿಸ್ತಿನ ಕ್ರಮ ಕೈಗೊಳ್ಳುವುದಿಲ್ಲ. ನಮಗೆ ನಮ್ಮದೇ ಆದ ಚೌಕಟ್ಟಿದೆ. ನಾಯಕರಿದ್ದಾರೆ’ ಎಂದರು.
ಗುಜರಾತ್ ಚುನಾವಣೆ ಫಲಿತಾಂಶದ ನಂತರ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಕರ್ನಾಟಕದತ್ತ ಗಮನ ಕೇಂದ್ರೀಕರಿಸಲಿದ್ದಾರೆ. ಡಿ.18ರ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಭ್ರಷ್ಟ ಸಚಿವರಾದ ಕೆ.ಜೆ.ಜಾರ್ಜ್, ವಿನಯ ಕುಲಕರ್ಣಿ ಸೇರಿದಂತೆ ಹಲವು ಸಚಿವರ ನಿದ್ದೆಗೆಡುವಂತೆ ಮಾಡಲಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಚುನಾವಣೆಗೆ ಸಿದ್ಧವಾಗಿದ್ದು, ಮಿಶನ್-150 ಯಾವುದೇ ಅನುಮಾನವಿಲ್ಲದೆ ಯಶಸ್ವಿಯಾಗಲಿದೆ.
– ಕೆ.ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ.