ಮುಧೋಳ: ಭಾರತದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆ ಮೇಲೆ ಯಾವುದೇ ನಂಬಿಕೆ ಇಲ್ಲದ ಬಿಜೆಪಿ ಪಕ್ಷಕ್ಕೆ ಮತ ಕೇಳುವ ನೈತಿಕ ಹಕ್ಕಿಲ್ಲ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಜನಾಂಗಕ್ಕೆ ಏನು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ
ಕಾಶಪ್ಪನವರ ಪರ ಮತಯಾಚನೆ ಮಾಡಿ ಮಾತನಾಡಿದರು.
ಜಾತ್ಯತೀತವಾಗಿ ಎಲ್ಲರೂ ಒಂದೇ ಎನ್ನುವ ಭಾವನೆ ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಜಾತಿ ಜಾತಿಗಳ ನಡುವೆ ಸಂಘರ್ಷ ತಂದಿಟ್ಟು ರಾಜಕಾರಣ ಮಾಡುವ ಬಿಜೆಪಿ ದೇಶಭಕ್ತಿ ಪಾಠ ಹೇಳಿ ಕೊಡುವ ಅವಶ್ಯಕತೆ ಇಲ್ಲ ಎಂದರು. 5 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಶೂನ್ಯವಾಗಿದೆ ಎಂದರು.
ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಜಿಪಂ ಅಧ್ಯಕ್ಷೆಯಾಗಿ ಗ್ರಾಮ
ವಾಸ್ತವ್ಯ ಮಾಡುವ ಮೂಲಕ ಗ್ರಾಮೀಣ ಜನರ ಕಷ್ಟಗಳನ್ನು ನಿವಾರಿಸುವಲ್ಲಿ ವೀಣಾ ಕಾಶಪ್ಪನವರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರನ್ನು ಗೆಲ್ಲಿಸಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೆಂದು ತಿಳಿಸಿದರು.
ಅರಣ್ಯ ಸಚಿವ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಅಶೋಕ ಪಟ್ಟಣ, ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಆನಂದ ನ್ಯಾಮಗೌಡ, ದಯಾನಂದ ಪಾಟೀಲ, ಸಂಜಯ ನಾಯಕ, ಲೋಕಣ್ಣ ಕೊಪ್ಪದ ಉಪಸ್ಥಿತರಿದ್ದರು.