Advertisement

ಉತ್ತರದಲ್ಲಿ ಮತ್ತಷ್ಟು ಅರಳಿದ ಕಮಲ

10:32 AM Dec 11, 2019 | Lakshmi GovindaRaj |

ಹುಬ್ಬಳ್ಳಿ: ಬಿಜೆಪಿಗೆ ಬಲ ನೀಡುವ ತಾಣವೆಂದೇ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದಲ್ಲಿ, ಉಪ ಚುನಾವಣೆ ಫ‌ಲಿತಾಂಶದಿಂದ ಕಮಲ ಮತ್ತಷ್ಟು ಅರಳಿದೆ. ಪ್ರಸ್ತುತ ಬಿಜೆಪಿ ಹೊಂದಿರುವ ಒಟ್ಟು ಶಾಸಕರ ಬಲದಲ್ಲಿ ಸರಿಸುಮಾರು ಅರ್ಧದಷ್ಟು ಶಾಸಕರ ಕೊಡುಗೆಯನ್ನು ಉತ್ತರ ಕರ್ನಾಟಕ ನೀಡಿದಂತಾಗಿದೆ. ಉತ್ತರ ಕರ್ನಾಟಕದ 7 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಏಳಕ್ಕೆ ಏಳರಲ್ಲಿಯೂ ಜಯ ಸಾಧಿಸುವ ಮೂಲಕ ಬಿಜೆಪಿ ಮಹತ್ವದ ಸಾಧನೆ ತೋರಿದೆ. ತನ್ನ ಸಂಘಟನಾ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಉಪಚುನಾವಣೆ ಫ‌ಲಿತಾಂಶ ನಂತರದಲ್ಲಿ ಬಿಜೆಪಿ ಶಾಸಕರ ಬಲ 117ಕ್ಕೆ ಹೆಚ್ಚಿದ್ದು,

Advertisement

ಇದರಲ್ಲಿ 57 ಸ್ಥಾನಗಳು ಉತ್ತರ ಕರ್ನಾಟಕಭಾಗದ್ದಾಗಿವೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಹೊಂದಿತ್ತಾದರೂ, 80ರ ದಶಕದ ನಂತರದಲ್ಲಿ ಜನತಾ ಪರಿವಾರ ಈ ಭಾಗದಲ್ಲಿ ಪ್ರಭುತ್ವ ಸಾಧಿಸಿತ್ತು. ಹಲವು ದಶಕಗಳವರೆಗೆ ಕಾಂಗ್ರೆಸ್‌-ಜನತಾಪರಿವಾರ ನಡುವೆ ಹಾವು-ಏಣಿ ಆಟದಂತಿತ್ತು. ಕಳೆದ 10-15 ವರ್ಷಗಳಿಂದ ಜನತಾ ಪರಿವಾರವನ್ನು ಬದಿಗೆ ಸರಿಸಿ ಬಿಜೆಪಿ ತನ್ನ ಪಾಲು ಪಡೆದುಕೊಂಡಿದೆ. ಇದೀಗ ಕಾಂಗ್ರೆಸ್‌-ಬಿಜೆಪಿ ನಡುವೆ ಪೈಪೋಟಿ ಉಂಟಾಗಿದ್ದು, ಈ ಭಾಗದಲ್ಲಿ ಬಿಜೆಪಿ ತನ್ನ ಬಲವನ್ನು ಗಮನಾರ್ಹ ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತ ಸಾಗತೊಡಗಿದೆ.

57ಕ್ಕೆ ಹಿಗ್ಗಿದ ಕೇಸರಿಪಡೆ: ಉತ್ತರ ಕರ್ನಾಟಕದಲ್ಲಿ ಒಟ್ಟು 96 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಬಿಜೆಪಿ 57 ಕ್ಷೇತ್ರಗಳಲ್ಲಿ ಪ್ರಭುತ್ವ ಸಾಧಿಸಿದೆ. ಒಟ್ಟು ಸ್ಥಾನಗಳಲ್ಲಿ ಶೇ.60ರಷ್ಟು ಸ್ಥಾನಗಳು ಬಿಜೆಪಿಗೊಲಿದಂತಾಗಿದೆ. ಕಾಂಗ್ರೆಸ್‌ 32 ಸ್ಥಾನಗಳನ್ನು ಹೊಂದಿದ್ದರೆ, ಜೆಡಿಎಸ್‌ ಆರು ಸ್ಥಾನಗಳನ್ನು ಹೊಂದಿದೆ. ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ 96 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 40 ಕ್ಷೇತ್ರಗಳಲ್ಲಿ , ಜೆಡಿಎಸ್‌ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕುಂದಗೋಳ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ನಿಧನ ಹಾಗೂ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ|ಉಮೇಶ ಜಾಧವ ಅವರ ರಾಜೀನಾಮೆಯಿಂದ ತೆರವಾದ ಎರಡು ಕ್ಷೇತ್ರಗಳಿಗೆ, 2019ರ ಮೇ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಗೆದ್ದಿದ್ದವು.

ಕಾಂಗ್ರೆಸ್‌ನಿಂದ ಚಿಂಚೋಳಿ ಕ್ಷೇತ್ರವನ್ನು ಕಿತ್ತುಕೊಂಡ ಬಿಜೆಪಿ ತನ್ನ ಬಲವನ್ನು 50ಕ್ಕೆ ಹೆಚ್ಚಿಸಿಕೊಂಡರೆ, ಕಾಂಗ್ರೆಸ್‌ 39ಕ್ಕೆ ಕುಸಿದಿತ್ತು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಇದರಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳು ಸೇರಿದ್ದವು. ಈ ಏಳು ಕ್ಷೇತ್ರಗಳ ಗೆಲುವಿನೊಂದಿಗೆ ಬಿಜೆಪಿ ತನ್ನ ಬಲವನ್ನು 57 ಸ್ಥಾನಗಳಿಗೆ ಹೆಚ್ಚಿಸಿಕೊಂಡರೆ, ಇತ್ತ ಆರು ಕ್ಷೇತ್ರಗಳನ್ನು ಕಳೆದುಕೊಂಡು ಕಾಂಗ್ರೆಸ್‌ 32 ಸ್ಥಾನಗಳಿಗೆ ಕುಸಿದಿದೆ.

Advertisement

ಹಾವೇರಿ ಕೈಗೆ ಶೂನ್ಯ ಸ್ಥಿತಿ: ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಾತಿನಿಧ್ಯವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ, ಕೈಗಿದ್ದ ಒಂದು ಕ್ಷೇತ್ರವೂ ಇದೀಗ ಬಿಜೆಪಿ ಪಾಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನ ಬಿ.ಸಿ.ಪಾಟೀಲ ಗೆಲುವು ಸಾಧಿಸಿದ್ದರೆ, ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯ ಆರ್‌.ಶಂಕರ ಗೆದ್ದಿದ್ದರು. ಉಳಿದ 4 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಇದೀಗ ಉಪ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ಪತಾಕೆ ಹಾರಿಸುವ ಮೂಲಕ ಪೂರ್ಣ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಒಟ್ಟು 6 ವಿಧಾನಸಭೆ ಕ್ಷೇತ್ರಗಳ ಪೈಕಿ 2018ರಲ್ಲಿ ಕಾಂಗ್ರೆಸ್‌ 2 ಸ್ಥಾನಗಳಲ್ಲಿ ಗೆದ್ದಿತ್ತು. ಇದೀಗ ಯಲ್ಲಾಪುರ ಕ್ಷೇತ್ರವನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ತನ್ನ ಬಲವನ್ನು 5 ಕ್ಕೆ ಹೆಚ್ಚಿಸಿಕೊಂಡರೆ, ಹಳಿಯಾಳದಲ್ಲಿ ಮಾತ್ರ ಕಾಂಗ್ರೆಸ್‌ ಪ್ರಾತಿನಿಧ್ಯ ಉಳಿದು ಕೊಂಡಂತಾಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯಲ್ಲಿ 2018ರಲ್ಲಿ 10 ಸ್ಥಾನ ಗೆಲುವು ಸಾಧಿಸಿದ್ದ ಬಿಜೆಪಿ ಇದೀಗ ಉಪಚುನಾವಣೆಯಲ್ಲಿ 3 ಸ್ಥಾನಗಳ ಸೇರ್ಪಡೆಯೊಂದಿಗೆ ತನ್ನ ಬಲವನ್ನು 13ಕ್ಕೆ ಹೆಚ್ಚಿಸಿಕೊಂಡಿದ್ದರೆ, 8 ಸ್ಥಾನ ಹೊಂದಿದ್ದ ಕಾಂಗ್ರೆಸ್‌ ಐದಕ್ಕೆ ಕುಸಿದಿದೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಮೆರೆಯಲು ನಡೆದ ಸಮರದಲ್ಲಿ ಸದ್ಯಕ್ಕಂತೂ ಬಿಜೆಪಿ ಪೂರ್ಣ ಪ್ರಮಾಣದ ಮೇಲುಗೈ ಸಾಧಿಸಿದೆ ಎಂದೇ ಹೇಳಬಹುದು.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next