ಮಧುಗಿರಿ: ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಪಕ್ಷ ಯಾವ ಚುನಾವಣೆಯಲ್ಲೂ ಕನಿಷ್ಠ ಮತಗಳನ್ನು ಮಾತ್ರ ಪಡೆದಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ 22 ಸಾವಿರ ಮತಗಳನ್ನು ಪಡೆದಿತ್ತು. ಆದರೆ, ಈ ಬಾರಿ ಬೂತ್ ಏಜೆಂಟರೇ ಇಲ್ಲದೆ ಹತ್ತು ಸಾವಿ ರಕ್ಕೂ ಅಧಿಕ ಬಹುಮತ ಪಡೆದಿದೆ. ಇದಕ್ಕೆ ಮೋದಿ ಅಲೆ ಹಾಗೂ ಕಾಂಗ್ರೆಸ್ ನಾಯಕರ ಸಹಕಾರ ಇತ್ತು ಎಂದು ಕ್ಷೇತ್ರದ ಮತದಾರರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಇಂಬು ನೀಡು ವಂತೆ ಬಿಜೆಪಿ ಅಭ್ಯರ್ಥಿ ಗೆಲುವಿನ ಸಂಭ್ರಮಾ ಚರಣೆಯಲ್ಲಿ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣನ ಪರ ಘೋಷಣೆ ಕೂಗಿರುವುದು ಸಾಕ್ಷಿಯಾಗಿದೆ. ಮಧುಗಿರಿ ಕ್ಷೇತ್ರವು 1.95 ಲಕ್ಷ ಮತದಾರರಿರುವ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ರಮವಾಗಿ 1500 ಹಾಗೂ 2550 ಮತ ಮಾತ್ರ ಗಳಿಸಿದ್ದರು. ಆದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಸ್ಪರ್ಧಿ ಸಿದ್ದು, ಚುನಾವಣಾ ಕಣವನ್ನು ಬಿಸಿ ಮಾಡಿತ್ತು. ಬಿಜೆಪಿಯಿಂದ ಬಸವರಾಜು ನಿಂತಿದ್ದರು. ಜಾತಿ ಲೆಕ್ಕಾಚಾರದಲ್ಲೂ ಸರಿ ಸಮನಾದ ಸ್ಪರ್ಧೆಯಿದ್ದರೂ ತುಂಬಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ಗೌಡರಿಗೆ ಗೆಲುವು ಕಷ್ಟವಾಗಿರಲಿಲ್ಲ. ಆದರೆ, ಎಲ್ಲಾ ಕ್ಷೇತ್ರದಲ್ಲೂ ಮೈತ್ರಿ ಧರ್ಮ ಪಾಲನೆಯಾಗದೆ, ಈಗ ಮೈತ್ರಿ ಅಭ್ಯರ್ಥಿ 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ.
ಗೌಡರ ಲೆಕ್ಕಚಾರ ಉಲ್ಟಾ : ಮಧುಗಿರಿಯಲ್ಲಿ ಅಹಿಂದಾ, ಒಕ್ಕಲಿಗ ಮತಗಳು ಹೆಚ್ಚಾಗಿದೆ. ಇಲ್ಲಿ ಮೈತ್ರಿ ಧರ್ಮವನ್ನು ಕಾಂಗ್ರೆಸ್ ಪಾಲಿಸದ ಕಾರಣ ಬಿಜೆಪಿ ಮೊದಲ ಬಾರಿಗೆ ಬಹುಮತಗಳಿಸಿ, ಇತಿಹಾಸ ನಿರ್ಮಿಸಿದೆ. ಮಾಜಿ ಪ್ರಧಾನಿಗೆ 62327, ಬಿಜೆಪಿಯ ಬಸವ ರಾಜುಗೆ 72911 ಮತಗಳು ಬಂದಿದ್ದು, 10584 ಮತಗಳ ಬಹುಮತವನ್ನು ಸಿಕ್ಕಿದೆ. ಕ್ಷೇತ್ರದಲ್ಲಿ 5 ಹೋಬಳಿಯಿದ್ದು, ದೊಡ್ಡೇರಿ ಹೋಬಳಿ ಜೆಡಿಎಸ್‌ಗೆ ಬಹುಮತ ನೀಡಿದ್ದರೆ, ಉಳಿದೆಲ್ಲ ಹೋಬಳಿಗಳು ಬಿಜೆಪಿಗೆ ಸಾವಿರಾರು ಮತಗಳ ಸ್ಪಷ್ಟ ಬಹುಮತ ನೀಡಿವೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.5ರಷ್ಟು ಮತಗಳು ಮಾತ್ರ ಮೈತ್ರಿ ಅಭ್ಯರ್ಥಿಗೆ ಚಲಾ ವಣೆಯಾಗಿದೆ. ಅದರಲ್ಲಿ ಮುಸ್ಲಿಂ ಸಮುದಾಯ ಸಿಂಹಪಾಲು ನೀಡಿವೆ. ಉಳಿದ ಕಾಂಗ್ರೆಸ್ ಮತ ಗಳು ಸರ ಸಾಗಾಟವಾಗಿ ಬಸವರಾಜುಗೆ ಹರಿ ದಿದೆ ಎಂಬುದು ಮತ ದಾನದ ಪಟ್ಟಿ ನೋಡಿದರೆ ತಿಳಿದು ಬರುತ್ತದೆ.
ರಾಜಣ್ಣನ ಹಿಡಿತ ಸಾಬೀತು: ಡಾ.ಜಿ. ಪರಮೇಶ್ವರ್ ಆಟ ಎಲ್ಲಿಯೂ ಕೆಲಸ ಮಾಡಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣನ ಬಿಗಿ ಹಿಡಿತ ಮತ್ತೂಮ್ಮೆ ಸಾಬೀತಾಗಿದ್ದು, ಮೋದಿಯೆಂಬ ಜಾದೂಗಾರನ ಹೆಸರು ಹೆಚ್ಚು ಕೆಲಸ ಮಾಡಿದೆ. ಅಲ್ಲದೆ ದೇವೇಗೌಡ ಹಾಗೂ ಸರ್ಕಾರದ ಬಗ್ಗೆ ಮಾಡಿದ ಅನೇಕ ನಕಾರಾತ್ಮಕ ಪ್ರಚಾರಗಳು ಮತದಾರನ ಮನಸ್ಸನ್ನು ಹೊಕ್ಕಿದ್ದು, ನಕಾ ರಾತ್ಮಕವಾಗಿ ಫಲಿತಾಂಶ ಹೊರಬಂದಿದೆ. ಬಿಜೆಪಿ ಅಭ್ಯರ್ಥಿ ಬಸವರಾಜುಗೂ ಸಹ ಕಾಂಗ್ರೆಸ್ ಎಲ್ಲಾ ನಾಯಕರೂ ಸಹ ಕೈಜೋಡಿಸಿರುವುದು ಮತಪೆಟ್ಟಿಗೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಬೂತ್‌ಗಳಲ್ಲಿ ಬಿಜೆಪಿ ಏಜೆಂಟ್ ಇಲ್ಲ: ಈ ಬಾರಿಯಲ್ಲಿ ನೂರಾರು ಬೂತ್‌ಗಳಲ್ಲಿ ಬಿಜೆಪಿಯ ಏಜೆಂಟ್ ಸಹ ಇಲ್ಲವಾಗಿದ್ದು, ಅಂತಹ ಬೂತ್‌ನಲ್ಲೂ ಬಿಜೆಪಿ ಹೆಚ್ಚು ಮತ ಗಳಿಸಿದೆ. ದೊಡ್ಡೇರಿ ಹೋಬಳಿಯ ಭಸ್ಮಂಗಿ ಕಾವಲ್ ಬೂತ್ ಸದಾ ಕಾಂಗ್ರೆಸ್ ಪರವಾದ ಗ್ರಾಮವಾಗಿದ್ದು, ಈ ಬಾರಿಯೂ ಅಲ್ಲಿ ಜೆಡಿಎಸ್‌ಗೆ 7 ಹಾಗೂ ಬಿಜೆಪಿಗೆ 254 ಮತಗಳು ಬಿದ್ದಿವೆ. ಇದೇ ಮತ ಗಳು ವಿಧಾನಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣನಿಗೆ ಲಭ್ಯವಾಗಿದ್ದು, ಆಗಲೂ ವೀರಭದ್ರಯ್ಯಗೆ ಕೇವಲ 8 ಮತಗಳು ಲಭ್ಯ ವಾಗಿತ್ತು. ಇದರಿಂದಲೇ ಕ್ಷೇತ್ರದ ಕಾಂಗ್ರೆಸ್ ಸಂಪೂರ್ಣ ಬಿಜೆಪಿಗೆ ಬೆಂಬಲ ನೀಡಿದೆ ಎಂದು ಹೇಳ ಬಹುದಾಗಿದೆ. ದೇವೇಗೌಡ ಗೆಲುವಿಗೆ ಮಧುಗಿರಿಯ ಕಾಂಗ್ರೆಸ್ ನಾಯಕರು ಮಗ್ಗುಲ ಮುಳ್ಳಾಗಿರುವುದು ಕಾಣುತ್ತದೆ.
ಮಾತು ಕೊಟ್ಟು ಕೈಬಿಟ್ಟ ರಾಜಣ್ಣ: ಅಭ್ಯರ್ಥಿ ಗೊಂದಲದಲ್ಲಿ ಮುದ್ದಹನುಮೇಗೌಡರ ಪರ ವಾಗಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕೊನೆ ವರೆಗೂ ಗೌಡರ ಸ್ಪರ್ಧೆಗೆ ವಿರೋಧಿಸಿದ್ದು, ಕಡೆಗೆ ಪ್ರಚಾರ ಸಭೆಯಲ್ಲಿ ನಾನು ಗೌಡರ ಪರ ಕೆಲಸ ಮಾಡಲಿದ್ದು, ಅನುಮಾನ ಬೇಡವೆಂದು ಮಾತು ನೀಡಿದ್ದರು. ಆದರೆ, ಅದೇ ಕೊನೆಯಾಗಿದ್ದು, ಮತ್ತೆಲ್ಲೂ ಸಹ ಮೈತ್ರಿಧರ್ಮ ಪಾಲನೆ ಮಾಡ ಲಿಲ್ಲ. ಗೌಡರ ಸೋಲಿಗೆ ರಾಜಣ್ಣ ಸಹ ಕಾರಣ ಎಂಬುದು ಜೆಡಿಎಸ್ ಕಾರ್ಯಕರ್ತರ ಆರೋಪವಾಗಿದೆ.
ಜೆಡಿಎಸ್‌ನಲ್ಲಿ ಕೆಳಹಂತದ ಪ್ರಚಾರವಿಲ್ಲ: ವೀರಭದ್ರಯ್ಯ ಚುನಾವಣೆಯಲ್ಲಿ ನಡೆದ ಕೆಳ ಹಂತದ ಪ್ರಚಾರ ಹಾಗೂ ಕಾರ್ಯಕ್ಷಮತೆ ಗೌಡರ ಚುನಾವಣೆಯಲ್ಲಿ ಕಂಡುಬಂದಿಲ್ಲ. ಹಾಗೆಯೇ ಜೆಡಿಎಸ್‌ನಲ್ಲಿರುವ ನಾಯಕರು ಛಳಿಬಿಟ್ಟು ಕೆಲಸ ಮಾಡದ ಕಾರಣ ಮತ್ತಷ್ಟೂ ಮತಬೇಟೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸು ವಲ್ಲಿಯೂ ಹಿಂದೆ ಬಿದ್ದಿದ್ದು, ಡಾ.ಪರಮೇಶ್ವರ್ ಅವರನ್ನೇ ನಂಬಿದ್ದು ಮುಳ್ಳಾಯಿತು. ಪರಮೇ ಶ್ವರ್ ಸಹ ಮಧುಗಿರಿಯಲ್ಲಿ ರಾಜಣ್ಣನ ಬಿಗಿ ಹಿಡಿತ ಸಡಿಲಗೊಳಿಸಲು ವಿಫಲ ರಾಗಿರುವುದು ಫಲಿತಾಂಶದಲ್ಲಿ ಕಂಡು ಬರು ತ್ತಿದೆ. ಅಲ್ಲದೆ, ಪಟ್ಟಣದಲ್ಲಿರುವ ಜೆಡಿಎಸ್ ನಾಯಕರು ಹಾಗೂ ಕ್ಷೇತ್ರದಲ್ಲಿರುವ ಇತರೆ ಅಹಿಂದ ಮುಖಂಡರು ಪಕ್ಷದ್ರೋಹವನ್ನು ಮಾಡಿದ್ದು, ಇದು ಗೌಡರ ಗೆಲುವನ್ನು ಕಿತ್ತು ಕೊಂಡಿದೆ. ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ 19 ಸಾವಿರ ಮತಗಳ ಅಂತರದಿಂದ ಸೋಲಿಸಿದ ಜೆಡಿಎಸ್‌ನ ವೀರಭ ದ್ರಯ್ಯ ತಮ್ಮದೆ ಪಕ್ಷದ ನರಿಬುದ್ಧಿ ನಾಯಕರನ್ನು ಸರಿಪಡಿಸಿಕೊಳ್ಳದಿದ್ದರೆ, ಮುಂದಿನ ಚುನಾ ವಣೆಯಲ್ಲಿ ನಿಷ್ಠಾವಂತರು ದೂರವಾಗಲಿದ್ದು, ಸಂಕಷ್ಟ ಎದುರಾಗಲಿದೆ ಎಂಬುದು ನಿಷ್ಠಾವಂತ ಕಾರ್ಯಕರ್ತರ ಅನಿಸಿಕೆಯಾಗಿದೆ.
● ಮಧುಗಿರಿ ಸತೀಶ್