Advertisement

ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇ ಬಿಜೆಪಿ ಸರ್ಕಾರ

06:51 PM Sep 21, 2021 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ ಪರಿಶಿಷ್ಟರನ್ನು ಕೇವಲ ವೋಟ್‌ ಬ್ಯಾಂಕ್‌ ಮಾಡಿಕೊಂಡು 70 ವರ್ಷಗಳ ಕಾಲ ದೇಶ ಆಳಿದ್ದಾರೆಯೇ ವಿನಃ, ಅವರ ಕಾಲೋನಿಗಳಿಗೆ ಹೋಗಿ ಒಮ್ಮೆಯೂ ಕಷ್ಟ ಸುಖ ಮಾಡಿದ್ದಾರಾ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ ನಾಯ್ಕ ಪ್ರಶ್ನಿಸಿದರು.

Advertisement

ನಗರದ ಐಎಂಎ ಸಭಾಂಗಣದಲ್ಲಿ ಸೋಮವಾರ ನಡೆದ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಸ್ಸಿ-ಎಸ್ಟಿ ಕಾಲೋನಿಗಳು ಕಾಂಕ್ರೀಟ್‌ ರಸ್ತೆಕಂಡಿದ್ದರೆ ಅದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ ಎಂದರು.

ಪರಿಶಿಷ್ಟರ ಹೆಸರು ಹೇಳಿಕೊಂಡು ಹಣ ನುಂಗುತ್ತಿರುವ ಕಾಂಗ್ರೆಸ್‌, ಬಿಜೆಪಿಯನ್ನು ಮುಂದುವರೆದವರ ಪಕ್ಷ ಎಂದು ಹೇಳಿಕೊಂಡು ದಿಕ್ಕು ತಪ್ಪಿಸುತ್ತಿದೆ. ಆದರೆ, ದಲಿತ ಸಮುದಾಯಕ್ಕೆ ಸೇರಿದ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿರುವ ಪಕ್ಷ ಬಿಜೆಪಿ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತದ ಕನಸು ಕಂಡಿದ್ದಾರೆ. ಅದೇ ರೀತಿ ಈ ಹಿಂದೆ ವಾಜಪೇಯಿ ಅವರು ದೇಶಾದ್ಯಂತ ಹೆದ್ದಾರಿಗಳನ್ನು ನಿರ್ಮಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಲೋನಿ, ಹಟ್ಟಿ, ತಾಂಡಗಳಲ್ಲಿ ಪ್ರಚಾರ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌. ನವೀನ್‌ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಪರಿಶಿಷ್ಟ ಜಾತಿಯವರನ್ನು ಬಳಕೆ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್‌ ನಂತರ ಶೋಷಿತರನ್ನು ನೆನಪು ಮಾಡಿಕೊಳ್ಳುವುದಿಲ್ಲ ಎಂದರು.

Advertisement

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 818 ಹೊಸ ಪ್ರಕರಣ | 1414 ಸೋಂಕಿತರು ಗುಣಮುಖ

ಕಾಂಗ್ರೆಸ್‌ ಬಡವರ, ಶೋಷಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈಗ ಪರಿಶಿಷ್ಟರು ಪರಿವರ್ತನೆಯಾಗಿದ್ದಾರೆ. ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಕೇಂದ್ರ ಮಂತ್ರಿ ಮಂಡಲದಲ್ಲಿ ಹದಿನೇಳು ಮಂದಿ ಪರಿಶಿಷ್ಟರು ಮಂತ್ರಿಗಳಾಗಿದ್ದಾರೆ. ಇದೊಂದು ಹೊಸ ದಾಖಲೆಯಾಗಿದೆ. ಹಟ್ಟಿ ತಾಂಡಗಳಲ್ಲಿ ಯುವಕರು ಬಿಜೆಪಿ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ರೀತಿ ಸರ್ಕಾರ ಅವರಿಗಾಗಿ ಮಾಡಿರುವ ಕೆಲಸಗಳನ್ನು ತಿಳಿಸುವ ಕೆಲಸವನ್ನು ಮೋರ್ಚಾ ಮೂಲಕ ಮಾಡಬೇಕು ಎಂದರು.

ಈ ಹಿಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿಯಿಂದ ಸೂಕ್ತ ಅಭ್ಯರ್ಥಿಗಳನ್ನು ಹುಡುಕಾಡಬೇಕಿತ್ತು. ಈಗ ಅಂತಹ ಪರಿಸ್ಥಿತಿಯಿಲ್ಲ. ಯಾವ್ಯಾವಕ್ಷೇತ್ರಗಳಲ್ಲಿಪಕ್ಷದಕೆಲಸಮಾಡುವವರಿದ್ದಾರೆ ಎನ್ನುವುದನ್ನು ಗುರುತಿಸಿ ಜಿಲ್ಲಾಧ್ಯಕ್ಷರಿಗೆ ವರದಿ ನೀಡಬೇಕು. ಇದರಿಂದ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಂತಾಗುತ್ತದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳು ಪ್ರತಿ ಮನೆಯಲ್ಲಿಯೂ ಇದ್ದೇ ಇರುತ್ತಾರೆ. ಪ್ರಧಾನಿ ಮೋದಿ ಅವರ ಅತ್ಯಂತ ಮಹತ್ವಪೂರ್ಣ ಗರೀಬ್‌ ಕಲ್ಯಾಣ್‌ ಯೋಜನೆಯನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಎಸ್ಸಿ ಮೋರ್ಚ ಪದಾ ಕಾರಿಗಳು ಮಾಡಬೇಕು. ಕೋವಿಡ್‌ ಲಾಕ್‌ಡೌನ್‌ ನಲ್ಲಿ ಅಸಂಘಟಿತ ಕಾರ್ಮಿಕರಿಗೆ ಕಿಟ್‌ ವಿತರಣೆ, ಲಸಿಕೆ ನೀಡಿಕೆ ಇವೆಲ್ಲ ಯೋಜನೆಗಳನ್ನು ಜನತೆಗೆ ತಲುಪಿಸಬೇಕು. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿನ ಸಂಪೂರ್ಣ ಅಂಕಿ ಅಂಶಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾಲಪ್ಪ ಮಾತನಾಡಿ, ಅಧಿಕಾರ ತೆಗೆದುಕೊಂಡಿರುವ ಮಂಡಲ ಅಧ್ಯಕ್ಷರುಗಳು, ಶಕ್ತಿ ಕೇಂದ್ರ ಮಹಾಶಕ್ತಿ ಕೇಂದ್ರದ ಪ್ರಮುಖರು ಮನೆಯಲ್ಲಿ ಕೂರಬಾರದು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ಇನ್ನೊಂದು ವಾರದೊಳಗೆ ಸಂಪೂರ್ಣವಾಗಿ ಮುಗಿಸಿ ಜಿಲ್ಲಾಧ್ಯಕ್ಷರಿಗೆ ವರದಿ ನೀಡಬೇಕು ಎಂದರು. ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್‌ ಯಾದವ್‌, ಲಸಿಕಾ ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಸಿದ್ದಾರ್ಥ ಗುಂಡಾರ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್‌ ಮಾತನಾಡಿದರು. ಎಸ್ಸಿ ಮೋರ್ಚಾ ರಾಜ್ಯ ಉಸ್ತುವಾರಿ ಜಯಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡು, ಗೂಳಿಹಟ್ಟಿ ಕೃಷ್ಣಮೂರ್ತಿ, ಭಾರ್ಗವಿ ದ್ರಾವಿಡ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next