Advertisement

ಸರ್ಕಾರ ಪತನಗೊಂಡ್ರೆ ಬಿಜೆಪಿ ಸರ್ಕಾರ

10:06 AM Jun 09, 2019 | Team Udayavani |

ಬನಹಟ್ಟಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಅದು ತಾನಾಗಿಯೇ ಬೀಳಲಿದೆ. ಸರ್ಕಾರ ಪತನಗೊಂಡರೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಶನಿವಾರ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ತೇರದಾಳ ಮತಕ್ಷೇತ್ರದ ಕಾರ್ಯಕರ್ತರು ಹಮ್ಮಿಕೊಂಡ ಪಿ.ಸಿ. ಗದ್ದಿಗೌಡರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಿಸಲಿದೆ ಎಂದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ ನಾಯಕರಾಗಿದ್ದಾರೆ. 2019ರ ಚುನಾವಣೆಯಲ್ಲಿ ದೇಶದ ಜನತೆ ಯಾವುದೆ ಜಾತಿ ಧರ್ಮದ ಆಧಾರದ ಮೇಲೆ ಮತ ಚಲಾಯಿಸಿಲ್ಲ. ದೇಶದ ಅಭಿವೃದ್ಧಿ ಕಾರ್ಯ ನೋಡಿ ಮತ ಹಾಕಿದ್ದಾರೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲು ಪೇಸ್‌ ಮತ್ತು ಬೂತ್‌ಮಟ್ಟದ ಕಾರ್ಯಕರ್ತರು ಶ್ರಮಿಸಬೇಕು ಎಂದು ಈಶ್ವರಪ್ಪ ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಬಾಗಲಕೋಟೆ -ಕುಡಚಿ ರೈಲು ಮಾರ್ಗವನ್ನು ಪೂರ್ಣಗೊಳಿಸುವೆ. ಈ ಭಾಗದ ನೀರಾವರಿ ಕುರಿತು ಗಮನನೀಡುತ್ತೇನೆ. ನಾನು ಪ್ರಚಾರ ರಾಜಕಾರಣಿಯಲ್ಲ. ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿಯ ಚುನಾವಣೆ ನನಗೆ ಪುನರ್‌ಜನ್ಮ ನೀಡಿದೆ. ಜಿಲ್ಲೆಯ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರಿಂದ ಭಾರೀ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

Advertisement

ಶಾಸಕ ಸಿದ್ದು ಸವದಿ ಮಾತನಾಡಿ, ನಾಲ್ಕು ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಗದ್ದಿಗೌಡರ ಅವರಿಗೆ ತೇರದಾಳ ಕ್ಷೇತ್ರ ಹೆಚ್ಚು ಮತ ನೀಡಿದೆ. ಮುಂಬರುವ ದಿನಗಳಲ್ಲಿ ಈ ಭಾಗದ ಜನರ ಅಭಿವೃದ್ಧಿಗಾಗಿ ಶ್ರಮಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರ ಸಮ್ಮಿಶ್ರ ಸರ್ಕಾರ ಜನಪ್ರಿಯ ಸರ್ಕಾರವಲ್ಲ, ಅದು ಜನದ್ರೋಹಿ ಸರ್ಕಾರವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂಸದ ಪಿ.ಸಿ.ಗದ್ದಿಗೌಡರ, ಕೆ.ಎಸ್‌.ಈಶ್ವರಪ್ಪ ಮತ್ತು ಶಾಸಕ ಸಿದ್ದು ಸವದಿ ಅವರನ್ನು ಸನ್ಮಾನಿಸಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ರಾಜು ಅಂಬಲಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಮಾಜಿ ವಿಧಾನ ಪರಷತ್‌ ಸದಸ್ಯ ಜಿ. ಎಸ್‌. ನ್ಯಾಮಗೌಡ, ನಾರಾಯಣಸಾ ಭಾಂಡಗೆ, ದೇವಲ ದೇಸಾಯಿ, ಮನೋಹರ ಶಿರೋಳ, ಬಸನಗೌಡ ಪಾಟೀಲ, ಸಿದ್ದಣ್ಣ ಪಾಟೀಲ, ಪ್ರಭು ಪೂಜಾರಿ, ಪುಂಡಲೀಕ ಪಾಲಭಾವಿ, ಪರಶುರಾಮ ಬಸವ್ವಗೋಳ, ಬಸವರಾಜ ತೆಗ್ಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next