Advertisement

ಜನ ಬಿಜೆಪಿ ಸರ್ಕಾರ ಬರಲೆಂದು ಮತ ಹಾಕಿದ್ದರು

02:46 PM Jun 04, 2018 | |

ದಾವಣಗೆರೆ: ಜನರ ಆಶಯದಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕಿತ್ತು, ಆದರೆ, ಕೇವಲ 10 ಸೀಟುಗಳಿಂದ ನಾವು ಅಧಿಕಾರದಿಂದ ದೂರ ಇರಬೇಕಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಭಾನುವಾರ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ಯುವ ಘಟಕದಿಂದ ಹಮ್ಮಿಕೊಂಡಿದ್ದ ಮಾಯಕೊಂಡ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರ ಸನ್ಮಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಬರಬೇಕೆಂಬ ಉದ್ದೇಶದಿಂದ ಜನ ಮತ ಚಲಾಯಿಸಿದ್ದರು. ಆದರೆ, ಕೇವಲ 10 ಸೀಟುಗಳು ಕಡಮೆಯಾಗಿದ್ದರಿಂದ ನಾವು ಅಧಿಕಾರದಿಂದ ದೂರ ಇರಬೇಕಾಯಿತು ಎಂದರು.
 
ಈ ಬಾರಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯದ ಮಾತು. ಯಾವುದೇ ಶಾಸಕರು ತಮ್ಮ ಪಕ್ಷ ಬಿಟ್ಟು ನಮ್ಮ ಪಕ್ಷಕ್ಕೆ ಬರಲ್ಲ. ಪಕ್ಷಾಂತರ ಕಾಯ್ದೆಯ ಭಯದಿಂದ ಯಾರೂ ಸಹ ತಮ್ಮ ಪಕ್ಷ ಬಿಡಲು ಆಗಲ್ಲ. ಇದೇ ಕಾರಣಕ್ಕೆ ನಾವು ಮುಂದೆ ಮತ್ತೆ ಚುನಾವಣೆ ಎದುರಿಸಿಯೇ ಅಧಿಕಾರಕ್ಕೆ ಬರಬೇಕಿದೆ ಎಂದು ಅವರು ತಿಳಿಸಿದರು. 

ಚುನಾವಣೆಗೂ ಮುನ್ನ ಹಾದಿ, ಬೀದಿಯಲ್ಲಿ ಜಗಳ ಮಾಡಿಕೊಂಡಿದ್ದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರು ಚುನಾವಣೆ ನಂತರ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲ ಅಂದರೆ, ಕುಮಾರಸ್ವಾಮಿ ಸಹ ಅಪ್ಪನಾಣೆ ಹಾಕಿದ್ದರು. ಆದರೆ, ಚುನಾವಣೆ ನಂತರ ಆಗಿದ್ದೇ ಬೇರೆ. ಕೇವಲ ಅಧಿಕಾರಕ್ಕಾಗಿ ಈ ಮೈತ್ರಿ ಮಾಡಿಕೊಂಡಿದ್ದಾರೆ. ಇದು ರಾಜ್ಯದ ಜನರಿಗೆ ಗೊತ್ತಾಗಿದೆ. ಈಗ ಚುನಾವಣೆ ನಡೆದರೆ ಬಿಜೆಪಿಯ 150 ಸೀಟು ಗೆಲ್ಲಿಸಲು
ರಾಜ್ಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆದರೆ ಇದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಮುಂದೆ ಪಾಲಿಕೆ, ಲೋಕಸಭೆ ಚುನಾವಣೆ ಬರಲಿದೆ. ನರೇಂದ್ರ ಮೋದಿಯವರು ವಿದೇಶದಲ್ಲೂ ಸಹ ಉತ್ತಮ ಹೆಸರು ಮಾಡುವಂತಹ ಆಡಳಿತ ನೀಡಿದ್ದಾರೆ. ಅವರಿಲ್ಲದೇ ಹೋದರೆ ದೇಶಕ್ಕೆ ರಕ್ಷಣೆ ಇಲ್ಲ ಎಂದು ಜನ ಭಾವಿಸಿದ್ದಾರೆ. ಮುಂದಿನ ಚುನಾವಣೆ ನಂತರ ಮತ್ತೂಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ 28 ಸೀಟುಗಳಲ್ಲಿ ಎಲ್ಲಾ ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. 

Advertisement

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರನಾಥ, ಪ್ರೊ| ಎನ್‌. ಲಿಂಗಣ್ಣ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ಮಳ್ಳೇಕಟ್ಟೆ ನಾಗರಾಜ, ಮುಕುಂದಪ್ಪ, ಎಚ್‌.ಕೆ. ಬಸವರಾಜ, ದೇವನಗರಿ ಮನು ಇತರರು ವೇದಿಕೆಯಲ್ಲಿದ್ದರು.

ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು
ರಾಜ್ಯದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಆದರೆ, ಇದು ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಕೆಲವರು ನಂಬಿಸಿ, ಮೋಸ ಮಾಡಿದ್ದರ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬರಲಾಗಿಲ್ಲ. ಈ ರೀತಿ ನಂಬಿಸಿ, ಮೋಸ ಮಾಡುವವರು ರಾಜಕೀಯಕ್ಕೆ ಬರಬಾರದು. ನಿಸ್ವಾರ್ಥವಾಗಿ ಜನರ ಸೇವೆ ಮಾಡುವವರು ಮಾತ್ರ ರಾಜಕೀಯಕ್ಕೆ ಬರಬೇಕು. 
 ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠ

Advertisement

Udayavani is now on Telegram. Click here to join our channel and stay updated with the latest news.

Next